Advertisement
ಅಂತಾರಾಷ್ಟ್ರೀಯ ಟೂರ್ನಿಯಲ್ಲಿ ಉತ್ತಮ ಸಾಧನೆ ಮಾಡಿ ದೇಶಕ್ಕೆ ಹೆಸರು ತರಬೇಕು ಎನ್ನುವ ಕನಸು ಹೊತ್ತು ಐದಾರು ತಿಂಗಳುಗಳಿಂದ ಸಿದ್ಧತೆ ಮಾಡಿಕೊಳ್ಳುತ್ತಿದ್ದ ಕ್ರೀಡಾಪಟುಗಳು ಕೊನೆಯ ಘಳಿಗೆಯಲ್ಲಿ ಅವಕಾಶ ವಂಚಿತರಾಗಿ ನಿರಾಸೆಗೊಂಡಿದ್ದಾರೆ.
ರಾಜ್ಯದಿಂದ ಈ ಚಾಂಪಿಯನ್‌ಶಿಪ್‌ಗೆ ಮೂರು ವಿಭಾಗಗಳಲ್ಲಿ ಒಟ್ಟು 18 ಮಂದಿ ಆಯ್ಕೆಯಾಗಿದ್ದರು. ಇವರಲ್ಲಿ ಕುಂದಾಪುರ ತಾಲೂಕಿನ ವಿಶ್ವನಾಥ ಗಾಣಿಗ, ಮಂಗಳೂರಿನ ಪ್ರದೀಪ್ ಕುಮಾರ್ ಮತ್ತು ರಿತ್ವಿಕ್ ಕೆ.ವಿ. ಅವರಿಗೆ ಮಾತ್ರ ಕೆನಡಾಕ್ಕೆ ತೆರಳಲು ಅವಕಾಶ ಸಿಕ್ಕಿದೆ. ದೇಶದಿಂದ ಒಟ್ಟು 60 ಮಂದಿ ಆಯ್ಕೆಯಾಗಿದ್ದು, ಕೇವಲ 30 ಮಂದಿ ಮಾತ್ರ ತೆರಳಿದ್ದಾರೆ. ಅವಕಾಶ ವಂಚಿತರು
ಕುಂದಾಪುರದ ಸತೀಶ್ ಖಾರ್ವಿ, ಅನಂತ್ ಭಟ್, ದೀಪಾ ಕೆ.ಎಸ್., ದೀಪ್ತಿಕಾ ಜೆ. ಪುತ್ರನ್, ಕಾರ್ತಿಕ್, ನಾಗಶ್ರೀ, ನೀಮಾ, ಪಂಚಮಿ, ಪೃಥ್ವಿ ಕುಮಾರ್, ರಿಷಬ್ ಎಸ್. ರಾವ್, ಶರತ್ ಪೂಜಾರಿ, ಸುಲೋಚನಾ, ಸ್ವಾತಿ, ವೆನಿಜೀಯಾ ಕಾರ್ಲೊ.
Related Articles
15 ದಿನಗಳ ಹಿಂದೆ ಈ ಕ್ರೀಡಾಳುಗಳು ಸಲ್ಲಿಸಿದ್ದ ವೀಸಾ ಅರ್ಜಿಯನ್ನು ಕೆನಡಾದ ಭಾರತೀಯ ರಾಯಭಾರಿ ಕಚೇರಿ ತಿರಸ್ಕರಿಸಿತ್ತು. ಇಲ್ಲಿಂದ ಕೆನಡಾಕ್ಕೆ ತೆರಳಿದವರು ಹಿಂದಿರುಗದೆ ಅಲ್ಲಿಯೇ ಇರುತ್ತಾರೆ ಎನ್ನುವ ಕಾರಣ ಇದರ ಹಿಂದಿದೆ!
Advertisement
ಬಳಿಕ ಮತ್ತೂಮ್ಮೆ ವೀಸಾಕ್ಕೆ ಅರ್ಜಿ ಹಾಕಿದ್ದರು. ಆಗ ಅಲ್ಲೇ ಉಳಿಯುವುದಿಲ್ಲ ಎಂದು ಬಾಂಡ್ ಪೇಪರ್‌ನಲ್ಲಿ ಮುಚ್ಚಳಿಕೆ ಬರೆದು ಕೊಟ್ಟಿದ್ದರು. ಇದು ಕೂಡ ತಿರಸ್ಕೃತಗೊಂಡು, ಸೆ. 13ರಂದು ಎಲ್ಲರಿಗೂ ಸಂದೇಶ ಬಂದಿತ್ತು.
ದೇಶದ ಪದಕ ಬೇಟೆಗೆ ಭಾರೀ ಹೊಡೆತ!ರಾಜ್ಯದ 15 ಮಂದಿ ಅವಕಾಶ ವಂಚಿತರಾಗಿರುವುದರಿಂದ ದೇಶಕ್ಕೆ ಈ ಪ್ರತಿಷ್ಠಿತ ಪಂದ್ಯಾವಳಿಯಲ್ಲಿ ಕನಿಷ್ಠ 9 ಪದಕ ಗೆಲ್ಲುವ ಅವಕಾಶ ಕಳೆದುಹೋಗಿದೆ. ಪ್ರತೀ ಬಾರಿ ಅಂತಾರಾಷ್ಟ್ರೀಯ ಟೂರ್ನಿ ನಡೆದಾಗ ಕರ್ನಾಟಕವೇ ಅಗ್ರಸ್ಥಾನ ಪಡೆಯುತ್ತಿತ್ತು. ಆದರೆ ಈ ಬಾರಿ ಕೇವಲ ಮೂವರು ಮಾತ್ರ ಕಣದಲ್ಲಿದ್ದಾರೆ. ರಾಜ್ಯದಿಂದ ಅವಕಾಶ ವಂಚಿತರಾಗಿರುವ ಸುಲೋಚನಾ, ಪಂಚಮಿ, ಶರತ್, ಉಪ್ಪಿನಕುದ್ರುವಿನ ನಾಗಶ್ರೀ ರಾಷ್ಟ್ರೀಯ ಚಾಂಪಿಯನ್ ಶಿಪ್‌ಗ್ಳಲ್ಲಿ ಚಿನ್ನ ಗೆದ್ದು, ವಿಶ್ವಮಟ್ಟದಲ್ಲೂ ನಿರೀಕ್ಷೆ ಮೂಡಿಸಿದ್ದರು. ವಿಶ್ವ ಮಟ್ಟದಲ್ಲೂ ಒಟ್ಟಾರೆ ಪದಕ ಬೇಟೆಯಲ್ಲಿ ಆಸ್ಟ್ರೇಲಿಯಾ ಅನಂತರದ ಸ್ಥಾನದಲ್ಲಿ ಭಾರತ ಇರುತ್ತಿತ್ತು. ಈ ಬಾರಿ ಅದು ಕೂಡ ಕೈತಪ್ಪುವ ಆತಂಕ ಎದುರಾಗಿದ್ದು, ಕಜಕಿಸ್ಥಾನ ಮತ್ತಿತರ ಸಣ್ಣ ದೇಶಗಳು ಭಾರತಕ್ಕಿಂತ ಹೆಚ್ಚಿನ ಪದಕ ಗೆಲ್ಲಬಹುದು ಎನ್ನಲಾಗುತ್ತಿದೆ. ಕೈ ತಪ್ಪಿರುವುದು ಬೇಸರವಾಗಿದೆ
ಎರಡು ತಿಂಗಳಿನಿಂದ ರಾಜ್ಯ ಪವರ್ ಲಿಫ್ಟಿಂಗ್ ಫೆಡರೇಶನ್‌ನಿಂದ ವೀಸಾ ಮತ್ತಿತರ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಆದರೆ ಕಠಿನ ಕಾನೂನು ಪ್ರಕ್ರಿಯೆಯಿಂದ ಸಮಸ್ಯೆಯಾಗಿದೆ. ಈ ಬಗ್ಗೆ ಸಂಸದ ನಳಿನ್ ಮೂಲಕ ಕೇಂದ್ರ ಕ್ರೀಡಾ ಸಚಿವರ ಬಳಿಯೂ ಮಾತನಾಡಲಾಗಿದೆ. ಆದರೆ ಕೊನೆಯ ಕ್ಷಣದಲ್ಲಿ ಎಲ್ಲರಿಗೂ ಅವಕಾಶ ಸಿಗಲಿಲ್ಲ. ರಾಜ್ಯಕ್ಕಂತೂ ತುಂಬಾ ನಷ್ಟ. ಮುಂದಿನ ಬಾರಿ ಹೀಗಾಗದಂತೆ ಮುನ್ನೆಚ್ಚರಿಕೆ ವಹಿಸಲಾಗುವುದು.
– ಜಯರಾಮ್
ಖಜಾಂಚಿ, ರಾಜ್ಯ ಪವರ್ ಲಿಫ್ಟಿಂಗ್ ಫೆಡರೇಶನ್ ತುಂಬಾ ನಿರಾಶೆಯಾಗಿದೆ
ನಾವು ಆರೇಳು ತಿಂಗಳುಗಳಿಂದ ಸಿದ್ಧತೆ ಮಾಡಿಕೊಳ್ಳುತ್ತಿದ್ದೆವು. ನನಗೆ ಇದು ಮೊದಲ ಅಂತಾರಾಷ್ಟ್ರೀಯು ಟೂರ್ನಿ. ವೀಸಾ ಅಡೆತಡೆಗಳನ್ನು ರಾಜ್ಯ ಮತ್ತು ರಾಷ್ಟ್ರೀಯ ಪವರ್ ಲಿಫ್ಟಿಂಗ್ ಫೆಡರೇಶನ್ ನಿವಾರಿಸಬೇಕಿತ್ತು. ಅವರು ಈ ಕೆಲಸ ಮಾಡಿಲ್ಲ. ನಾವು ಕೆನಡಾಕ್ಕೆ ಹೋಗುವ ಪ್ರಯಾಣ, ವಾಸ್ತವ್ಯ ಇನ್ನಿತರ ಖರ್ಚಿಗಾಗಿ ಫೆಡರೇಶನ್‌ಗೆ 1.50 ಲಕ್ಷ ರೂ. ಕೂಡ ಪಾವತಿಸಿದ್ದೇವೆ. ಆದರೆ ಕೊನೆಯ ಕ್ಷಣದಲ್ಲಿ ಹೀಗಾಗುತ್ತದೆ ಎಂದು ಗೊತ್ತಿರಲಿಲ್ಲ. ಭಾರೀ ನಿರಾಶೆಯಾಗಿದೆ.
– ಸತೀಶ್ ಖಾರ್ವಿ ಕುಂದಾಪುರ – ಪ್ರಶಾಂತ್ ಪಾದೆ