Advertisement

ವಿಶ್ವಕಪ್‌ನಲ್ಲಿ ಪಾಲ್ಗೊಳ್ಳಲು ಪಾಕ್‌ ಶೂಟರ್‌ಗಳಿಗೆ ವೀಸಾ

12:30 AM Feb 19, 2019 | Team Udayavani |

ನವದೆಹಲಿ: ಮೊನ್ನೆಯಷ್ಟೇ ಕಾಶ್ಮೀರದ ಪುಲ್ವಾಮದಲ್ಲಿ ಭಾರತೀಯ ಯೋಧರ ಮೇಲೆ ಭಯೋತ್ಪಾದಕ ದಾಳಿಯಾಗಿ 40ಕ್ಕೂ ಅಧಿಕ ಯೋಧರು ಹುತಾತ್ಮರಾದ ನಂತರ, ದೇಶಾದ್ಯಂತ ಪಾಕಿಸ್ತಾನದ ಮೇಲೆ ಆಕ್ರೋಶ ತೀವ್ರವಾಗಿದೆ.

Advertisement

ಇದರ ನಡುವೆಯೇ ಪಾಕಿಸ್ತಾನಿ ಶೂಟರ್‌ಗಳಿಗೆ, ದೆಹಲಿಯ ಡಾ.ಕರ್ಣಿಸಿಂಗ್‌ ಶೂಟಿಂಗ್‌ ರೇಂಜ್‌ನಲ್ಲಿ ಫೆ.21ರಿಂದ ನಡೆಯಲಿರುವ ಐಎಸ್‌ಎಸ್‌ಎಫ್ ವಿಶ್ವಕಪ್‌ ಶೂಟಿಂಗ್‌ನಲ್ಲಿ ಭಾಗವಹಿಸಲು ಭಾರತ ಸರ್ಕಾರ ವೀಸಾ ನೀಡಿದೆ.

ಪಾಕ್‌ ಪ್ರೇರಿತ ಉಗ್ರ ಕೃತ್ಯದ ವಿರುದ್ಧ ಭಾರತೀಯ ಕ್ರೀಡಾವಲಯದಲ್ಲೂ ತೀವ್ರ ಪ್ರತಿಭಟನೆ ವ್ಯಕ್ತವಾಗಿದೆ. ಪಾಕಿಸ್ತಾನದ ವಿರುದ್ಧ ಯಾವ್ಯಾವ ಕ್ರಮಗಳನ್ನು ಕೈಗೊಳ್ಳಬಹುದೋ, ಅದೆಲ್ಲವನ್ನೂ ಮಾಡಲಾಗುತ್ತಿದೆ. ಈ ಹಂತದಲ್ಲಿ ವಿಶ್ವಕಪ್‌ ಶೂಟಿಂಗ್‌ನಲ್ಲಿ ಭಾಗವಹಿಸಲು ಪಾಕ್‌ ಶೂಟರ್‌ಗಳಿಗೆ ಅವಕಾಶ ನೀಡಬೇಕೋ, ಬೇಡವೋ ಎನ್ನುವುದು ಗೊಂದಲ ಮೂಡಿಸಿತ್ತು. ಜಾಗತಿಕ ಕ್ರೀಡಾನಿಯಮಗಳಂತೆ, ವಿಶ್ವಮಟ್ಟದ ಕ್ರೀಡಾಕೂಟಗಳಲ್ಲಿ ಯಾವುದೇ ದೇಶದ ಕ್ರೀಡಾಪಟುಗಳನ್ನು ಕ್ರೀಡೇತರ ಕಾರಣಗಳಿಗಾಗಿ ನಿರ್ಬಂಧಿಸಲು ಸಾಧ್ಯವಿಲ್ಲ. ಹಾಗೆ ಮಾಡಿದರೆ, ಆತಿಥೇಯ ದೇಶದ ಕ್ರೀಡಾಸಂಸ್ಥೆ ವಿರುದ್ಧ ಜಾಗತಿಕ ಕ್ರೀಡಾಸಂಸ್ಥೆಗಳು ನಿರ್ಬಂಧ ಹೇರಲು ಅವಕಾಶವಿದೆ.

ಈ ಗೊಂದಲಗಳ ಮಧ್ಯೆಯೇ ಭಾರತ ಗೃಹ ಇಲಾಖೆಗೆ, ಎನ್‌ಆರ್‌ಎಐ (ಭಾರತದ ರಾಷ್ಟ್ರೀಯ ರೈಫ‌ಲ್‌ ಸಂಸ್ಥೆ), ಪಾಕ್‌ ಶೂಟರ್‌ಗಳಿಗೆ ವೀಸಾ ನೀಡುವಂತೆ ಮನವಿ ಮಾಡಿತ್ತು. ಇದಕ್ಕೆ ಗೃಹ ಇಲಾಖೆ ಅನುಮತಿ ನೀಡಿದೆ ಎಂದು ಎನ್‌ಆರ್‌ಎಐ ಹೇಳಿಕೊಂಡಿದೆ. 

ಪ್ರಸ್ತುತ ಕೂಟದಿಂದ 2020ರ ಟೊಕೊÂ ಒಲಿಂಪಿಕ್ಸ್‌ನಲ್ಲಿ ಆಡಲು 16 ಮಂದಿ ಅರ್ಹತೆ ಗಳಿಸಲಿದ್ದಾರೆ. ಪಾಕ್‌ ಶೂಟರ್‌ಗಳಿಗೆ ಅವಕಾಶ ನಿರಾಕರಿಸಿದರೆ, ಅವರಿಗೆ ಒಲಿಂಪಿಕ್ಸ್‌ ಅರ್ಹತೆ ಗಳಿಸಲು ತೊಂದರೆಯಾಗಲಿದೆ ಎನ್ನುವುದು ಇಲ್ಲಿನ ಇನ್ನೊಂದು ಸಮಸ್ಯೆ. ಎರಡು ದೇಶಗಳ ಸಮಸ್ಯೆಗಳು, ಜಾಗತಿಕ ಕ್ರೀಡಾಕೂಟದ ಮೇಲೆ ಪರಿಣಾಮ ಬೀರಬಾರದು ಎಂಬ ಬಲವಾದ ನಿಯಮವೇ ಇರುವುದನ್ನೂ ಇಲ್ಲಿ ಗಮನಿಸಲಾಗಿದೆ.

Advertisement

ಫೆ.21ರಿಂದ 28ವರೆಗೆ ವಿಶ್ವಕಪ್‌ ಶೂಟಿಂಗ್‌ ನಡೆಯಲಿದೆ. ಪಾಕಿಸ್ತಾನದಿಂದ ಇಬ್ಬರು ಶೂಟರ್‌ಗಳು, ಇನ್ನೊಬ್ಬ ಸಹಾಯಕ ಸಿಬ್ಬಂದಿ ಭಾರತಕ್ಕೆ ಫೆ.20ರ ಸಂಜೆ ಆಗಮಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
 

Advertisement

Udayavani is now on Telegram. Click here to join our channel and stay updated with the latest news.

Next