Advertisement

ಉಡುಪಿ: “ವರ್ಚುವಲ್‌ ಟೂರ್‌’ವಿನೂತನ ಪರಿಕಲ್ಪನೆ

08:16 PM Nov 25, 2021 | Team Udayavani |

ಉಡುಪಿ: ಕೊರೊನಾದಿಂದ ನೆಲ ಕಚ್ಚಿರುವ ಜಿಲ್ಲಾ ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಗೆ “ವರ್ಚವಲ್‌ ಟೂರ್‌’ ಎನ್ನುವ ವಿನೂತನ ಪರಿಕಲ್ಪನೆಯನ್ನು ಜಿಲ್ಲೆಯಲ್ಲಿ ಜಾರಿಗೆ ತರಲಾಗುತ್ತಿದೆ.

Advertisement

ಪ್ರವಾಸಿ ತಾಣ ಅಥವಾ ಧಾರ್ಮಿಕ ಕೇಂದ್ರಗಳನ್ನು ನೋಡಲು ಬರುವ ಪ್ರವಾಸಿಗರಿಗೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಇರುವ ಪ್ರವಾಸಿ ತಾಣಗಳ ಕಿರು ಪರಿಚಯದ ಜತೆಗೆ ಆ ಸ್ಥಳಗಳಿಗೆ ಪ್ರವಾಸಿಗರನ್ನು ಆಕರ್ಷಿಸಲು ವರ್ಚುವಲ್‌ ವ್ಯವಸ್ಥೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಜಿಲ್ಲಾಡಳಿತ ನಿರ್ಧರಿಸಿದೆ.

ಏನಿದು ವರ್ಚುವಲ್‌ ಟೂರ್‌?:

ಜಿಲ್ಲೆಯ ಪ್ರಮುಖ ಆಕರ್ಷಣೆಗಳಾದ ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನ, ಶ್ರೀ ಕೃಷ್ಣಮಠ,  ಕಮಲಶಿಲೆ  ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನ, ಮಲ್ಪೆ, ಮರವಂತೆ ಬೀಚ್‌, ಸೋಮೇಶ್ವರ -ಒತ್ತಿನೆಣೆ ಪ್ರಕೃತಿ ಸೌಂದರ್ಯ, ಹೆಬ್ರಿ ಸಮೀಪದ ಜೋಮ್ಲು ತೀರ್ಥ, ಕಾಪು ದೀಪಸ್ತಂಭ, ಮುದೂರು ಸಮೀಪದ ಗೋವಿಂದ ತೀರ್ಥ, ಮಲ್ಪೆ ಸೈಂಟ್‌ ಮೇರಿಸ್‌ ಐಲ್ಯಾಂಡ್‌, ಅತ್ತೂರು ಚರ್ಚ್‌, ಕಾರ್ಕಳದ ಗೊಮ್ಮಟ ಬೆಟ್ಟ ಮೊದಲಾದ ಸ್ಥಳಗಳ ಜತೆಗೆ ಇನ್ನು ಅನೇಕ ಪ್ರವಾಸಿ ತಾಣಗಳು ಇಲ್ಲಿವೆ. ಹೊರ ರಾಜ್ಯ, ಜಿಲ್ಲೆಗಳಿಂದ ಬರುವ ಪ್ರವಾಸಿಗರಿಗೆ ವರ್ಚವಲ್‌ ವ್ಯವಸ್ಥೆ ಮೂಲಕ ಜಿಲ್ಲೆಯ ಪ್ರವಾಸಿ ತಾಣಗಳ ಚಿತ್ರಣ ಸಿಗಲಿದೆ. ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ವರ್ಚುವಲ್‌ ಬೋರ್ಡ್‌ಗಳನ್ನು ಅಳವಡಿಸಲಾಗುತ್ತದೆ. ಆ ಬೋರ್ಡ್‌ನಲ್ಲಿ ದಿನಪೂರ್ತಿ ಜಿಲ್ಲೆಯ ಪ್ರವಾಸಿ ತಾಣಗಳ ಚಿತ್ರಸಹಿತವಾದ ಮಾಹಿತಿ ಬಿತ್ತರಗೊಳ್ಳಲಿದೆ. ತಾವಿರುವ ಸ್ಥಳದಿಂದ ಬೇರೆ ತಾಣಕ್ಕೆ ಹೋಗುವ ರೂಟ್‌ಮ್ಯಾಪ್‌(ದಾರಿ), ಬಸ್‌ ಅಥವಾ ಇತರೆ ಸಾರಿಗೆ ವ್ಯವಸ್ಥೆಯ ಪೂರ್ಣ ವಿವರ ಹಾಗೂ ವಸತಿ ಸೌಲಭ್ಯದ ಮಾಹಿತಿ ಡಿಜಿಟಲ್‌ ಬೋರ್ಡ್‌ಗಳಲ್ಲಿ ಪ್ರವಾಸಿಗಳಿಗೆ ಲಭ್ಯವಾಗಲಿದೆ.

ಸುರಕ್ಷತೆಗೆ ಆದ್ಯತೆ :

Advertisement

ತ್ರಾಸಿಯಿಂದ ಮರವಂತೆ ವರೆಗೂ ಯಾವ ರೀತಿ ಬೀಚ್‌ ಅಭಿವೃದ್ಧಿ ಮಾಡಬಹುದು ಮತ್ತು ಈ ಬೀಚ್‌ನಲ್ಲಿ ಪ್ರವಾಸಿಗರ ಸಂಖ್ಯೆ ದಿನೆದಿನೇ  ಹೆಚ್ಚುತ್ತಿರುವುದರಿಂದ ಸುರಕ್ಷತೆಗೂ ಆದ್ಯತೆ ನೀಡುವ ಬಗ್ಗೆಯೂ ಜಿಲ್ಲಾಡಳಿತ ನಿಗಾ ವಹಿಸುತ್ತಿದೆ.

ಧಾರ್ಮಿಕ ಕೇಂದ್ರಕ್ಕೂ ಒತ್ತು:

ಕರಾವಳಿಯಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿಗೆ ವಿಪುಲವಾದ ಅವಕಾಶವಿದೆ. ಇದನ್ನು ಸಮರ್ಪಕವಾಗಿ ಬಳಸಿಕೊಂಡು, ಪ್ರವಾಸೋದ್ಯಮಕ್ಕೆ ಹೊಸ ರೂಪ ನೀಡಿ, ಉದ್ಯೋಗಾವಕಾಶ ಹೆಚ್ಚಳ ಮಾಡಲಿದ್ದೇವೆ. ಧಾರ್ಮಿಕ ಕೇಂದ್ರಗಳು ಹೆಚ್ಚಿರುವುದರಿಂದ ಧಾರ್ಮಿಕ ಪ್ರವಾಸೋದ್ಯಮಕ್ಕೂ ಒತ್ತು ನೀಡುವ ಬಗ್ಗೆ ಇಲಾಖೆಯ ಮೂಲದಿಂದ ತಿಳಿದು ಬಂದಿದೆ.

ಬೀಚ್‌ಗಳ ಅಭಿವೃದ್ಧಿ  :

ಜಿಲ್ಲೆಯ ಪ್ರಮುಖ ಬೀಚ್‌ಗಳ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ. ಅರಬೀ ಸಮುದ್ರ ಮತ್ತು ಸೌಪರ್ಣಿಕಾ ನದಿಯ ನಡುವಿನಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವ “ಮರವಂತೆ ಬೀಚ್‌’ ಪ್ರದೇಶವನ್ನು ಇನ್ನಷ್ಟು ಅಭಿವೃದ್ಧಿಗೆ ಜಿಲ್ಲಾಡಳಿತ ಮುಂದಾಗಿದೆ.

ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಗೆ “ವರ್ಚುವಲ್‌ ಟೂರ್‌’ ವ್ಯವಸ್ಥೆ ಜಾರಿಗೆ ತರಲಿದ್ದೇವೆ. ಇದರ ಜತೆಗೆ ಮರವಂತೆ ಬೀಚ್‌ ಅಭಿವೃದ್ಧಿಗೂ ನಿರ್ಧಾರ ತೆಗೆದುಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಅನೇಕ ಪ್ರವಾಸಿ ತಾಣವಿದ್ದು, ಉದ್ಯೋಗಾವಕಾಶ ಹೆಚ್ಚಿಸಲು ಅವಕಾಶವಿದೆ. ಹೀಗಾಗಿ ಪ್ರವಾಸೋದ್ಯಮ ಕ್ಷೇತ್ರ ಪೂರ್ಣವಾಗಿ ತೆರೆದುಕೊಳ್ಳಲು ಎಲ್ಲರೂ ಕೊರೊನಾ ಲಸಿಕೆ ಪಡೆಯುವುದು ಅನಿವಾರ್ಯವಾಗಿದೆ.-ಕೂರ್ಮಾ ರಾವ್‌ ಎಂ., ಜಿಲ್ಲಾಧಿಕಾರಿ 

-ರಾಜು ಖಾರ್ವಿ ಕೊಡೇರಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next