ಲಂಡನ್: ಬೀದಿ ನಾಯಿಗಳ ಕಾಟ ಕೇವಲ ಭಾರತದಲ್ಲಿ ಮಾತ್ರವಲ್ಲ ಪ್ರಪಂಚದ ಎಲ್ಲ ಕಡೆಗಳಲ್ಲಿ ಸಾಮಾನ್ಯವಾಗಿದೆ. ಅದರಲ್ಲೂ ರಾತ್ರಿ ಸಮಯದಲ್ಲಿ ಬೈಕ್‌ನಲ್ಲಿ ಸಂಚರಿಸುವವರು ಹಾಗೂ ಒಂಟಿಯಾಗಿ ಓಡಾಡುವ ಸಣ್ಣ ಮಕ್ಕಳನ್ನು ಗುರಿಯಾಗಿಸಿಕೊಂಡು ನಾಯಿಗಳು ದಾಳಿ ಮಾಡುವುದು ಹೆಚ್ಚಾಗಿದೆ.
ನಾಯಿಗಳ ಕಡಿತದಿಂದ ಪಾರಾಗಲು ಇಂಗ್ಲೆಂಡ್‌ನ ವಿಜ್ಞಾನಿಗಳು ಸಂಶೋಧನೆಯೊಂದನ್ನು ನಡೆಸಿದ್ದಾರೆ.
ಇದಕ್ಕಾಗಿ ವರ್ಚುವಲ್ ನಾಯಿಯನ್ನು ಬಳಸಲಾಗಿದೆ. ನಾಯಿಯ ನಡವಳಿಕೆಯನ್ನು ಅರ್ಥ ಮಾಡಿಕೊಳ್ಳಲು ಮತ್ತು ಈ ಮೂಲಕ ಅದರ ಕಡಿತದಿಂದ ಪಾರಾಗಲು ಹಾಗೂ ನಾಯಿ-ಮನುಷ್ಯ ಸಂಬಂಧ ಉತ್ತಮಗೊಳ್ಳಲು ಇದರಿಂದ ಸಾಧ್ಯವಾಗಲಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.
1998ಕ್ಕೆ ಹೋಲಿಸಿದರೆ 2018ರ ವೇಳೆಗೆ ನಾಯಿ ಕಡಿತದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದವರ ಸಂಖ್ಯೆ ಇಂಗ್ಲೆಂಡ್‌ನಲ್ಲಿ ಮೂರು ಪಟ್ಟು ಹೆಚ್ಚಾಗಿದೆ. ಲಿವರ್‌ಪೂಲ್ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿದ ಪ್ರಯೋಗಿಕ ಪರೀಕ್ಷೆಯಲ್ಲಿ, ಒಂದು ಪ್ರಯೋಗಾಲಯದ ಕೊಠಡಿಯಲ್ಲಿ 16 ಮಂದಿ ವಯಸ್ಕರನ್ನು ಇರಿಸಲಾಗಿತ್ತು. ಅದರಲ್ಲಿ ವರ್ಚುವಲ್ ರಿಯಾಲಿಟಿ ಲ್ಯಾಬ್ರಡಾರ್ ನಾಯಿಯನ್ನು ಬಳಸಲಾಯಿತು.
ಈ ವೇಳೆ ನಾಯಿಯ ಕ್ರೋಧ ಮತ್ತು ಆಕ್ರಮಣಶೀಲತೆ ನಡವಳಿಕೆಯನ್ನು ಮಾನವರು ಹೇಗೆ ಗುರುತಿಸುತ್ತಾರೆ ಎಂಬುದನ್ನು ಪರೀಕ್ಷಿಸಲಾಯಿತು ಎಂದು ಸಂಶೋಧಕರು ತಿಳಿಸಿದ್ದಾರೆ.