ಹುಬ್ಬಳ್ಳಿ: ಮಹದಾಯಿ ನ್ಯಾಯಾಧಿಕರಣ ತೀರ್ಪು ಹಾಗೂ ಸುಪ್ರೀಂಕೋರ್ಟ್ ಸೂಚನೆಯಂತೆ ರಾಜ್ಯ ಸರಕಾರ ಕಳಸಾ-ಬಂಡೂರಿ ನಾಲಾ ಯೋಜನೆ ಕಾಮಗಾರಿ ಆರಂಭಿಸಲು ಮುಂದಾಗದಿದ್ದರೆ ಬೆಂಗಳೂರು ಚಲೋ ಸೇರಿದಂತೆ ಮತ್ತೂಂದು ಹಂತದ ಹೋರಾಟ ಆರಂಭಿಸಲಾಗುವುದು ಎಂದು ರೈತಸೇನಾ ಕರ್ನಾಟಕದ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹದಾಯಿ ನ್ಯಾಯಾ ಧಿಕರಣ ಮಹದಾಯಿ ನದಿ ನೀರು ಹಂಚಿಕೆ ಮಾಡಿದ್ದು, ರಾಜ್ಯಕ್ಕೆ 13.5 ಟಿಎಂಸಿ ಅಡಿಯಷ್ಟು ನೀರಿನ ಪಾಲು ದೊರೆತಿದೆ. ಸುಪ್ರೀಂಕೋರ್ಟ್ ಸಹ ಕಾಮಗಾರಿ ಆರಂಭಕ್ಕೆ ಹಸಿರು ನಿಶಾನೆ ತೋರಿದೆ. ಇಷ್ಟಾದರೂ ರಾಜ್ಯ ಸರಕಾರ ಕಾಮಗಾರಿ ಆರಂಭಕ್ಕೆ ಮುಂದಾಗದಿರುವುದು ಖಂಡನೀಯ. ತಾವು ಅಧಿಕಾರಕ್ಕೆ ಬಂದರೆ 24 ಗಂಟೆಯಲ್ಲಿ ಮಹದಾಯಿ ವಿವಾದ ಇತ್ಯರ್ಥ ಪಡಿಸಿ, ರಾಜ್ಯದ ಪಾಲಿನ ನೀರು ಬಳಕೆಗೆ ಶೀಘ್ರ ಕ್ರಮ ಕೈಗೊಳ್ಳುವುದಾಗಿ ಬಿ.ಎಸ್.ಯಡಿಯೂರಪ್ಪ ಅವರು ಹೇಳಿದ್ದರು. ಇದೀಗ ಅವರೇ ಮುಖ್ಯಮಂತ್ರಿಯಾಗಿದ್ದರೂ ಕಾಮಗಾರಿ ವಿಚಾರದಲ್ಲಿ ಯಾವುದೇ ಪ್ರಗತಿ ಕಾಣುತ್ತಿಲ್ಲ.
ಬಜೆಟ್‌ನಲ್ಲಿ 500 ಕೋಟಿ ರೂ.ಹಣ ಇದಕ್ಕಾಗಿ ತೆಗೆದಿರಿಸಿದ್ದಾಗಿ ಹೇಳಿದ್ದರೂ ಕಾಮಗಾರಿ ಆರಂಭಕ್ಕೆ ಕೈಗೊಂಡ ಕ್ರಮ ಏನೆಂಬುದನ್ನು ಸರಕಾರ ಸ್ಪಷ್ಟಪಡಿಸಲಿ ಎಂದರು. ಕಳಸಾ-ಬಂಡೂರಿ ನಾಲಾಗಳ ಕಾಮಗಾರಿ ಆರಂಭ ಕುರಿತಾಗಿ ರಾಜ್ಯ ಸರಕಾರ ಸ್ಪಷ್ಟ ಭರವಸೆ ನೀಡಬೇಕು. ಇಲ್ಲವಾದರೆ ಇದೇ ತಿಂಗಳು ರೈತರ ಸಭೆ ಕರೆದು ಬೆಂಗಳೂರು ಚಲೋ ಹೋರಾಟ ಕೈಗೊಳ್ಳಲಾಗುವುದು. ಬೆಂಗಳೂರಿನಲ್ಲಿಯೇ ಹೋರಾಟ ಮುಂದುವರಿಸಲಾಗುವುದು. ಬೇಡಿಕೆ ಈಡೇರುವವರೆಗೂ ಹೋರಾಟ ಹಿಂತೆಗೆಯುವ ಮಾತೇ ಇಲ್ಲ ಎಂದರು. ಅದೇ ರೀತಿ ಉತ್ತರ ಕರ್ನಾಟಕಕ್ಕೆ 9 ಕಚೇರಿಗಳ ಸ್ಥಳಾಂತರ ವಿಚಾರದಲ್ಲೂ ರಾಜ್ಯ ಸರಕಾರ ನಿರ್ಲಕ್ಷ್ಯ ತೋರುತ್ತಿದೆ. ಈ ಹಿಂದೆ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ ಉತ್ತರ ಕರ್ನಾಟಕ ನಿರ್ಲಕ್ಷಿಸಿದೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದರು. ಆದರೆ ಕುಮಾರಸ್ವಾಮಿ ಸರಕಾರ ಈ ಭಾಗಕ್ಕೆ 9 ಕಚೇರಿಗಳ ಸ್ಥಳಾಂತರಕ್ಕೆ ಸಚಿವ ಸಂಪುಟದಲ್ಲಿ ತೀರ್ಮಾನ ಕೈಗೊಂಡಿತ್ತು. ಆದರೆ, ಬಿಜೆಪಿ ಸರಕಾರ ಅಧಿ ಕಾರಕ್ಕೆ ಬಂದರೂ ಇದುವರೆಗೂ ಕಚೇರಿಗಳ ಸ್ಥಳಾಂತರ ಆಗಿಲ್ಲ. ಅಂದು ಆರೋಪಿಸಿದ್ದ ಬಿಜೆಪಿ ನಾಯಕರು ಇದೀಗ ಮೌನಕ್ಕೆ ಜಾರಿದ್ದೇಕೆ ಎಂದು ಪ್ರಶ್ನಿಸಿದರು.
ಸರ್ವಪಕ್ಷ ಸಭೆ ಕರೆಯಲಿ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ ಠಾಕ್ರೆ ಅವರು ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿದ್ದು ಎಂದು ಹೇಳುವ ಮೂಲಕ ಅನಗತ್ಯ ವಿವಾದ ಸೃಷ್ಟಿಗೆ ಮುಂದಾಗಿದ್ದು, ರಾಜ್ಯ ಸರಕಾರ ಸರ್ವಪಕ್ಷ ಸಭೆ ಕರೆದು ಠಾಕ್ರೆ ಹೇಳಿಕೆಯನ್ನು ಖಂಡಿಸಿ ಹಾಗೂ ಇಂತಹ ಹೇಳಿಕೆಗಳಿಗೆ ಕಡಿವಾಣ ಹಾಕಬೇಕೆಂಬ ಶಿಫಾರಸ್ಸನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಬೇಕೆಂದು ಒತ್ತಾಯಿಸಿದರು.
ಇದನ್ನೂ ಓದಿ : ಹಿಂದೂ ಧರ್ಮಕ್ಕೆ ಅವಹೇಳನ ಆರೋಪ: ಸಾಹಿತಿ ಭಗವಾನ್ ಮುಖಕ್ಕೆ ಮಸಿ ಬಳಿದ ವಕೀಲೆ
ಶಿವಸೇನಾದ ಕರ್ನಾಟಕ ಘಟಕದವರು, ಉದ್ಧವ ಠಾಕ್ರೆ ನೀಡಿರುವ ಹೇಳಿಕೆ ಬಗ್ಗೆ ತಮ್ಮ ನಿಲುವೇನು ಎಂಬುದನ್ನು ಸ್ಪಷ್ಟಪಡಿಸಬೇಕು.ರಾಜ್ಯದ ಒಂದಿಂಚು ಭೂಮಿಯನ್ನು ಮಹಾರಾಷ್ಟ್ರಕ್ಕೆ ಬಿಟ್ಟು ಕೊಡಲು ಸಾಧ್ಯವೇ ಇಲ್ಲ ಎಂದರು.
ಮುಖಂಡರಾದ ಗುರು ರಾಯನಗೌಡ್ರ, ಮಲ್ಲಿಕಾರ್ಜುನ ಆಲೇಕರ, ಸಿದ್ದಲಿಂಗೇಶ ಪಾಟೀಲ ಇನ್ನಿತರರಿದ್ದರು.