Advertisement

ಬಿಸಿಸಿಐ ಜತೆ “ಸೆಟ್ಟಿಂಗ್‌’ಮಾಡದ ಕಾರಣಕೋಚ್‌ ಆಗಲಿಲ್ಲ: ಸೆಹವಾಗ್‌

06:00 AM Sep 16, 2017 | |

ಹೊಸದಿಲ್ಲಿ: ತನಗೆ ಭಾರತೀಯ ಕ್ರಿಕೆಟ್‌ ತಂಡದ ಕೋಚ್‌ ಆಗಲು ಸಾಧ್ಯವಾಗಲಿಲ್ಲ ಏಕೆ ಎಂಬುದನ್ನು ಮಾಜಿ ಆರಂಭಕಾರ ವೀರೇಂದ್ರ ಸೆಹವಾಗ್‌ ಟಿವಿ ಸಂದರ್ಶನವೊಂದರಲ್ಲಿ ಮಾರ್ಮಿಕವಾಗಿ ಹೇಳಿದ್ದಾರೆ. ತನಗೆ ಬಿಸಿಸಿಐ ಜತೆ ಯಾವುದೇ “ಸೆಟ್ಟಿಂಗ್‌’ ಮಾಡಲು ಸಾಧ್ಯವಾಗಲಿಲ್ಲ, ಮಂಡಳಿಯ ಕೃಪೆಯೂ ತನ್ನ ಮೇಲಿರಲಿಲ್ಲ ಎನ್ನುವ ಮೂಲಕ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿಯ ರಾಜಕೀಯವನ್ನು ಬಹಿರಂಗ ಮಾಡಿದ್ದಾರೆ.

Advertisement

“ನೋಡಿ… ನನಗೆ ಕೋಚ್‌ ಹುದ್ದೆ ಏಕೆ ಸಿಗಲಿಲ್ಲವೆಂದರೆ ನಾನು ಕೋಚ್‌ ಆಯ್ಕೆಗಾರರ ಜತೆ ಯಾವುದೇ ಸೆಟ್ಟಿಂಗ್‌ ಮಾಡಿಕೊಳ್ಳಲಿಲ್ಲ’ ಎಂದು ಡ್ಯಾಶಿಂಗ್‌ ಓಪನರ್‌ ಖ್ಯಾತಿಯ ವೀರೇಂದ್ರ ಸೆಹವಾಗ್‌ “ಇಂಡಿಯಾ ಟಿವಿ’ ಜತೆ ನಡೆಸಿದ ಸಂದರ್ಶನವೊಂದರಲ್ಲಿ ಮಾರ್ಮಿಕವಾಗಿ ಹೇಳಿದರು.

“ನಾನು ಭಾರತ ತಂಡದ ಕೋಚಿಂಗ್‌ ಬಗ್ಗೆ ಆಲೋಚಿಸಿದವನೇ ಅಲ್ಲ. ಬಿಸಿಸಿಐ ಪ್ರಭಾರ ಕಾರ್ಯದರ್ಶಿ ಅಮಿತಾಭ್‌ ಚೌಧರಿ ಮತ್ತು ಜಿಎಂ (ಗೇಮ್‌ ಡೆವಲಪ್‌ಮೆಂಟ್‌) ಎಂ.ವಿ. ಶ್ರೀಧರ್‌ ಅವರು ನನ್ನಲ್ಲಿ ಬಂದು ಕೋಚ್‌ ಹುದ್ದೆಗೆ ನೀವೇಕೆ ಪ್ರಯತ್ನಿಸಬಾರದು ಎಂದು ಕೇಳಿ “ಆಫ‌ರ್‌’ ಒಂದನ್ನು ಕೊಟ್ಟರು. ನಾನು ನನ್ನದೇ ಆದ ನಿಗದಿತ ಸಮಯ ತೆಗೆದುಕೊಂಡು ಕೋಚ್‌ ಹುದ್ದೆಗೆ ಅರ್ಜಿ ಸಲ್ಲಿಸಿದೆ…’ ಎಂಬುದಾಗಿ ಸೆಹವಾಗ್‌ ಹೇಳಿದರು.

ಮುಂದುವರಿಯಲು ಕೊಹ್ಲಿ ಸೂಚನೆ
ಈ ಸಂದರ್ಭದಲ್ಲಿ ಸೆಹವಾಗ್‌ ಇನ್ನೂ ಒಂದು ವಿಷಯವನ್ನು ಸ್ಪಷ್ಟಪಡಿಸಿದರು. ಅರ್ಜಿ ಸಲ್ಲಿಸುವ‌ ಮೊದಲು ವಿರಾಟ್‌ ಕೊಹ್ಲಿ ಜತೆ ಮಾತನಾಡಿದ್ದಾಗಿಯೂ ತಿಳಿಸಿದರು.

“ಕೋಚ್‌ ಆಫ‌ರ್‌ ಬಂದಾಗ ನಾನು ನಾಯಕ ವಿರಾಟ್‌ ಕೊಹ್ಲಿ ಜತೆ ಮಾತಾಡಿದ್ದೆ. ಅವರು ಮುಂದುವರಿಯುವಂತೆ ಸಲಹೆಯಿತ್ತರು. ಅನಂತರವೇ ನಾನು ಅರ್ಜಿ ಸಲ್ಲಿಸಿದ್ದು. ನನ್ನ ಅಭಿಪ್ರಾಯವೇನಿತ್ತು ಎಂದು ನೀವು ಕೇಳಿದ್ದೇ ಆದರೆ ನಾನು ಹೇಳುವುದೊಂದೇ, ನನಗೆ ಎಂದೂ ಇದರಲ್ಲಿ ಆಸಕ್ತಿ ಇರಲಿಲ್ಲ…’ ಎಂಬುದಾಗಿ ಸೆಹವಾಗ್‌ ಹೇಳಿದರು.

Advertisement

ಮತ್ತೆ ತಪ್ಪು ಮಾಡಲಾರೆ ಎಂದಿದ್ದ ರವಿಶಾಸ್ತ್ರಿ
ಈ ಸಂದರ್ಭದಲ್ಲಿ ರವಿಶಾಸ್ತ್ರಿ ಜತೆ ನಡೆಸಿದ ಮಾತುಕತೆಯನ್ನೂ ಸೆಹವಾಗ್‌ ಬಿಚ್ಚಿಟ್ಟಿದ್ದಾರೆ.”ಚಾಂಪಿಯನ್ಸ್‌ ಟ್ರೋಫಿ ಪಂದ್ಯಾವಳಿ ವೇಳೆ ಇಂಗ್ಲೆಂಡ್‌ನ‌ಲ್ಲಿದ್ದ ನಾನು ರವಿಶಾಸ್ತ್ರಿ ಜತೆಯೂ ಮಾತಾಡಿದ್ದೆ. ನೀವೇಕೆ ಕೋಚ್‌ ಹುದ್ದೆಗೆ ಅರ್ಜಿ ಸಲ್ಲಿಸುವುದಿಲ್ಲ ಎಂದು ಕೇಳಿದ್ದೆ. ಆಗ ಅವರು, ಒಮ್ಮೆ ತಾನು ತಪ್ಪು ಮಾಡಿ ಆಗಿದೆ, ಇದನ್ನು ಪುನರಾವರ್ತಿಸಲು ಬಯಸುವುದಿಲ್ಲ ಎಂದರು. ಅಕಸ್ಮಾತ್‌ ರವಿಶಾಸ್ತ್ರಿ ಮೊದಲೇ ಅರ್ಜಿ ಸಲ್ಲಿಸಿದ್ದರೆ ನಾನು ಖಂಡಿತ ಮುಂದುವರಿಯುತ್ತಿರಲಿಲ್ಲ…’ ಎಂಬುದಾಗಿ ಸೆಹವಾಗ್‌ ಹೇಳಿದರು.

“ಅವರು ನನ್ನಲ್ಲಿ ಮನವಿ ಮಾಡಿಕೊಂಡಿದ್ದಾರೆ, ಹೀಗಾಗಿ ಅವರ ಮಾತನ್ನು ಪಾಲಿಸಿ ಸಹಾಯ ಮಾಡೋಣ ಎನಿಸಿತು. ಆದರೆ ನಾನಾಗಿ ಯಾವತ್ತೂ ಕೋಚ್‌ ಹುದ್ದೆಗೆ ಮುಂದಾಗುತ್ತಿರಲಿಲ್ಲ. ಭವಿಷ್ಯದಲ್ಲೂ ಕೋಚ್‌ ಹುದ್ದೆಗೆ ಅರ್ಜಿ ಸಲ್ಲಿಸುವುದಿಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದೇನೆ…’ ಎಂದರು ಸೆಹವಾಗ್‌.

Advertisement

Udayavani is now on Telegram. Click here to join our channel and stay updated with the latest news.

Next