Advertisement

ನನ್ನನ್ನು ಖರೀದಿಸಿ ಐಪಿಎಲ್‌ ಬಚಾವ್‌ಮಾಡಿದ ಸೆಹವಾಗ್‌: ಗೇಲ್‌ ತಮಾಷೆ!

06:00 AM Apr 21, 2018 | |

ಮೊಹಾಲಿ: ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡದ ನಿರ್ದೇಶಕ, ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹವಾಗ್‌ ಕೊನೆ ಗಳಿಗೆಯಲ್ಲಿ ತನ್ನನ್ನು ಖರೀದಿಸಿ ಐಪಿಎಲ್‌ ಬಚಾವ್‌ ಮಾಡಿದರು ಎಂದು ಶತಕವೀರ ಕ್ರಿಸ್‌ ಗೇಲ್‌ ತಮಾಷೆ ಮಾಡಿದ್ದಾರೆ.

Advertisement

ಗುರುವಾರ ರಾತ್ರಿ ತವರಿನ ಮೊಹಾಲಿ ಅಂಗಳದಲ್ಲಿ ಅಜೇಯ ತಂಡವಾಗಿದ್ದ ಸನ್‌ರೈಸರ್ ಹೈದರಾಬಾದ್‌ ವಿರುದ್ಧ ಅಮೋಘ ಶತಕ ಸಿಡಿಸಿ ತಂಡವನ್ನು ಗೆಲ್ಲಿಸಿದ ಬಳಿಕ ಕ್ರಿಸ್‌ ಗೇಲ್‌ ಮಾಧ್ಯಮದವರಲ್ಲಿ ಇಂಥದೊಂದು ಹೇಳಿಕೆ ನೀಡಿದ್ದಾರೆ. 

“ಗೇಲ್‌ ಈಗ ಹಳಬನಾಗಿದ್ದಾನೆ, ಅವನಿಗೆ ಆಡಲಾಗುತ್ತಿಲ್ಲ, ಹೀಗಾಗಿ ಐಪಿಎಲ್‌ ಹರಾಜಿನ ವೇಳೆ ಯಾರಿಗೂ ಬೇಕಾಗಲಿಲ್ಲ…. ಎಂದು ನನ್ನ ಬಗ್ಗೆ ನಕಾರಾತ್ಮಕ ಭಾವನೆ ಹೊಂದಿದವರಿಗೆಲ್ಲ ಈ ಶತಕ ಉತ್ತರ ನೀಡಿದೆ. ಇಷ್ಟಕ್ಕೂ ನಾನೇನು ಎಂಬುದನ್ನು ಖಂಡಿತವಾಗಿಯೂ ಸಾಧಿಸಿ ತೋರಿಸಬೇಕಾದ ಅಗತ್ಯವಿಲ್ಲ’ ಎಂದು ಗೇಲ್‌ ತುಸು ಖಾರವಾಗಿಯೇ, ಕ್ರಿಕೆಟ್‌ ಅಭಿಮಾನಿಗಳಿಗೆ ನಾಟುವಂತೆಯೇ ಪ್ರತಿಕ್ರಿಯಿಸಿದರು.

ಆರ್‌ಸಿಬಿಗೆ ಬೇಡವಾದ ಕ್ರಿಸ್‌ ಗೇಲ್‌ ಈ ಬಾರಿಯ ಐಪಿಎಲ್‌ ಮೆಗಾ ಹರಾಜಿನ 2 ಸುತ್ತುಗಳಲ್ಲೂ ಮಾರಾಟವಾಗಿರಲಿಲ್ಲ. ಆದರೆ ಕೊನೆಯಲ್ಲಿ ವೀರೇಂದ್ರ ಸೆಹವಾಗ್‌ ಈ ಜಮೈಕನ್‌ ಬ್ಯಾಟ್ಸ್‌ ಮನ್‌ನತ್ತ ಒಲವು ತೋರಿ ಪಂಜಾಬ್‌ ತಂಡಕ್ಕೆ ಸೇರಿಸಿಕೊಂಡರು. ಮೊದಲೆರಡು ಪಂದ್ಯಗಳಲ್ಲಿ ಗೇಲ್‌ ಆಡುವ ಬಳಗದಲ್ಲಿ ಕಾಣಿಸಿರಲಿಲ್ಲ. ಆದರೆ ಅನಂತರದ ಎರಡೂ ಪಂದ್ಯಗಳಲ್ಲಿ ಬ್ಯಾಟಿಂಗ್‌ ಮಿಂಚು ಹರಿಸಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. 

“ಈ ಸಂದರ್ಭದಲ್ಲಿ ನಾನು ವೀರೇಂದ್ರ ಸೆಹವಾಗ್‌ ಅವರಿಗೆ ಕೃತಜ್ಞತೆ ಅರ್ಪಿಸಲು ಬಯಸುತ್ತೇನೆ. ಅವರು ಪಂಜಾಬ್‌ ತಂಡಕ್ಕೆ ನನ್ನನ್ನು ಸೇರಿಸಿ ಐಪಿಎಲ್‌ ಪಂದ್ಯಾವಳಿಯನ್ನು ಬಚಾವ್‌ ಮಾಡಿದರು’ ಎಂದು ಹೈದರಾಬಾದ್‌ ವಿರುದ್ಧ ಅಜೇಯ 104 ರನ್‌ ಸಿಡಿಸಿ, ಐಪಿಎಲ್‌ ಶತಕವನ್ನು 6ಕ್ಕೆ ಏರಿಸಿದ ಗೇಲ್‌ ಹೇಳಿದರು.

Advertisement

“ಶುದ್ಧ ಮನೋರಂಜನೆ, ಸಂಪೂರ್ಣ ಸ್ವಾತಂತ್ರ್ಯ-ಇದು ಸೆಹವಾಗ್‌ ಥಿಯರಿ. ಅದರಂತೆ ಮೊದಲ ಪಂದ್ಯದಲ್ಲೇ ರಾಹುಲ್‌ 14 ಎಸೆತಗಳಿಂದ ಅರ್ಧ ಶತಕ ಬಾರಿಸಿದರು. ಎರಡೂ ಪಂದ್ಯಗಳಲ್ಲಿ ನನ್ನ ಆಟವೂ ಉತ್ತಮ ಮಟ್ಟದಲ್ಲಿತ್ತು. ನಾವು ಇದೇ ಲಯದಲ್ಲಿ ಸಾಗಬೇಕಿದೆ…’ ಎಂದು ಗೇಲ್‌ ಅಭಿಪ್ರಾಯಪಟ್ಟರು.

ಭುವನೇಶ್ವರ್‌ ಎಸೆತಗಳಿಗೆ ಮರ್ಯಾದೆ
ಆದರೆ ಮೊದಲರ್ಧದಲ್ಲಿ ಗೇಲ್‌ ಆಟ ಅಬ್ಬರದಿಂದ ಕೂಡಿರಲಿಲ್ಲ. ಇದಕ್ಕೆ ಭುವನೇಶ್ವರ್‌ ಕುಮಾರ್‌ ಕಾರಣವಿರ ಬಹುದು. ಪಂದ್ಯಕ್ಕೂ ಮೊದಲು ನೀಡಿದ ಸಂದರ್ಶನವೊಂದ ರಲ್ಲಿ, ತಾನು ಭುವನೇಶ್ವರ್‌ಗೆ ಹೆಚ್ಚಿನ ಗೌರವ ಕೊಡುತ್ತೇನೆ ಎಂಬುದಾಗಿ ಗೇಲ್‌ ಹೇಳಿದ್ದರು. ಭುವಿ ಹೈದರಾಬಾದ್‌ ತಂಡದ ಕೀ ಬೌಲರ್‌ ಆಗಿದ್ದು, ಏಕದಿನದ 10 ಇನ್ನಿಂಗ್ಸ್‌ಗಳಲ್ಲಿ ಅವರು 4 ಸಲ ಗೇಲ್‌ ವಿಕೆಟ್‌ ಹಾರಿಸಿದ್ದಾರೆ. ಗುರುವಾರದ ಪಂದ್ಯದಲ್ಲಿ ಭುವಿಯ 10 ಎಸೆತಗಳಲ್ಲಿ ಗೇಲ್‌ ಗಳಿಸಿದ್ದು 15 ರನ್‌ ಮಾತ್ರ. 

ಹೈದರಾಬಾದ್‌ಗೆ ಮೊದಲ ಸೋಲು
ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ನಡೆಸಿದ ಪಂಜಾಬ್‌ 3 ವಿಕೆಟಿಗೆ 193 ರನ್‌ ಪೇರಿಸಿದರೆ, ಹೈದರಾಬಾದ್‌ 4 ವಿಕೆಟಿಗೆ 178ರ ತನಕ ಬಂದು 15 ರನ್ನುಗಳಿಂದ ಶರಣಾಯಿತು. ಆರಂಭಕಾರ ಶಿಖರ್‌ ಧವನ್‌ ಕೇವಲ ಒಂದೇ ಎಸೆತ ಎದುರಿಸಿ ಗಾಯಾಳಾಗಿ ವಾಪಸಾದದ್ದು ಹೈದಾರಾಬಾದ್‌ಗೆ ಭಾರೀ ಹಿನ್ನಡೆಯಾಗಿ ಪರಿಣಮಿಸಿತು. ಸಾಹಾ (6) ಕೂಡ ಹೆಚ್ಚು ಹೊತ್ತು ನಿಲ್ಲಲಿಲ್ಲ. ಆದರೆ ನಾಯಕ ಕೇನ್‌ ವಿಲಿಯಮ್ಸನ್‌ (54) ಮತ್ತು ಮನೀಷ್‌ ಪಾಂಡೆ (57) ಉತ್ತಮ ಹೋರಾಟವೊಂದನ್ನು ಪ್ರದರ್ಶಿಸಿದರೂ ತಂಡವನ್ನು ದಡ ತಲುಪಿಸಲು ವಿಫ‌ಲರಾದರು. ಈ ಪಂದ್ಯದ ಬಳಿಕ ಕೆಕೆಆರ್‌, ಹೈದರಾಬಾದ್‌ ಮತ್ತು ಪಂಜಾಬ್‌ ತಲಾ 6 ಅಂಕಗಳೊಂದಿಗೆ ಮೊದಲ 3 ಸ್ಥಾನ ಅಲಂಕರಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next