ನವದೆಹಲಿ: ಅನಿಲ್ ಕುಂಬ್ಳೆ ಅವಧಿ ಮುಕ್ತಾಯವಾದ ಹಿನ್ನಲೆಯಲ್ಲಿ ಭಾರತ ತಂಡದ ಕೋಚ್ ಹುದ್ದೆಗೆ ಮಾಜಿ ಸ್ಫೋಟಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್‌ಗೆ ಅರ್ಜಿ ಸಲ್ಲಿಸಲು ಬಿಸಿಸಿಐ ಆಹ್ವಾನ ನೀಡಿದೆ.
ಈ ವಿಷಯವನ್ನು ಸ್ವತಃ ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಆಂಗ್ಲ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದ ವೇಳೆ ಸ್ಪಷ್ಟಪಡಿಸಿದ್ದಾರೆ. ಇತ್ತೀಚೆಗೆ ಐಪಿಎಲ್ ವೇಳೆ ಸೆಹ್ವಾಗ್‌ರನ್ನು ಭೇಟಿಯಾಗಿ ಕೋಚ್ ಹುದ್ದೆಗೆ ಅರ್ಜಿ
ಸಲ್ಲಿಸಲು ತಿಳಿಸಿದ್ದೇವೆ. ನಾವು ಅವರೊಬ್ಬರನ್ನು ಮಾತ್ರ ಸಂಪರ್ಕಿಸಿಲ್ಲ.
ಇತರೆ ಮಾಜಿ ಕ್ರಿಕೆಟಿಗರನ್ನೂ ಕೂಡ ಸಂಪರ್ಕಿಸಿ ಅರ್ಜಿ ಸಲ್ಲಿಸುವಂತೆ ತಿಳಿಸಿದ್ದೇವೆ ಎಂದು ತಿಳಿಸಿದರು. ಮಂಡಳಿ ಹೊಸ ಕೋಚ್ ನೇಮಕ್ಕೆ ಹೆಚ್ಚು ಒಲವು ಹೊಂದಿದೆ. ಹೊಸ ಕೋಚ್ ಜತೆಗಿನ ಒಪ್ಪಂದ 2019ರವರೆಗೆ ಇರುತ್ತದೆ ಎಂದು ಇದೇ ವೇಳೆ ಅವರು ತಿಳಿಸಿದರು. ಇತ್ತೀಚೆಗೆ ಹಾಲಿ ಕೋಚ್ ಕುಂಬ್ಳೆ ಹಾಗೂ ಬಿಸಿಸಿಐ ನಡುವಿನ ಸಂಬಂಧ ಹಳಸಿತ್ತು. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿತ್ತು. ಈ ಬೆನ್ನಲ್ಲೇ ಹೊಸ ಕೋಚ್ ನೇಮಕಕ್ಕೆ ಬಿಸಿಸಿಐ ಅರ್ಜಿ ಕರೆದಿತ್ತು. ಕುಂಬ್ಳೆ ಸಣ್ಣಪುಟ್ಟ ವಿಷಯಕ್ಕೂ ಬಿಸಿಸಿಐ ಆಡಳಿತಾಧಿಕಾರಿಗಳ ಬಳಿ ತೆರಳುತ್ತಿರುವುದೇ ಕುಂಬ್ಳೆ ಬಗೆಗಿನ ಅಸಮಾಧಾನಕ್ಕೆ ಕಾರಣ ಎನ್ನಲಾಗಿದೆ. ಇದೆಲ್ಲದರಿಂದಾಗಿ ಕುಂಬ್ಳೆ ಮತ್ತೆ ಕೋಚ್ ಆಗಿ ಮುಂದುವರಿಯುವುದು ಅನುಮಾನ ಎನ್ನಲಾಗಿದೆ.