Advertisement

ವಿವಿಗಳ ಆದರ್ಶ ಪುನಶ್ಚೇತನವಾಗಲಿ

11:08 AM Jul 07, 2019 | Team Udayavani |

ಉಳ್ಳಾಲ: ದೇಶದಲ್ಲಿ ವಿಶ್ವವಿದ್ಯಾನಿಲಯಗಳು ಹಿಂದಿನ ಗೌರವವನ್ನು ಕಳೆದುಕೊಳ್ಳುತ್ತಿವೆ. ಇದಕ್ಕೆ ಆರ್ಥಿಕ -ಸಾಮಾಜಿಕ ಸಂಪನ್ಮೂಲಗಳ ಕೊರತೆ ಕಾರಣ. ನಮ್ಮ ವಿವಿಗಳು ವಿದೇಶಿ ವಿವಿಗಳನ್ನು ಅನುಕರಣೆ ಮಾಡದೆ ನಮ್ಮದೇ ಮಾದರಿಯಲ್ಲಿ ಶೈಕ್ಷಣಿಕ ಗುಣಮಟ್ಟಕ್ಕೆ ಒತ್ತು ನೀಡುವುದರೊಂದಿಗೆ ಆದರ್ಶ ರೀತಿಯಲ್ಲಿ ಪುನಶ್ಚೇತನವಾಗಬೇಕು. ನೂತನ ಕುಲಪತಿ ಪ್ರೊ| ಎಡಪಡಿತ್ತಾಯ ಅವರ ನೇತೃತ್ವದಲ್ಲಿ ಮಂಗಳೂರು ವಿವಿ ಇದೇ ಮಾರ್ಗದಲ್ಲಿ ಉನ್ನತ ಸ್ಥಾನಕ್ಕೆ ಏರಲಿ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅಭಿಪ್ರಾಯಪಟ್ಟರು.

Advertisement

ಡಾ| ಎಡಪಡಿತ್ತಾಯ ಅಭಿನಂದನ ಸಮಿತಿ ವತಿಯಿಂದ ಮಂಗಳೂರು ವಿವಿಯ ಮಂಗಳಾ ಸಭಾಂಗಣದಲ್ಲಿ ಶನಿವಾರ ನೂತನ ಉಪಕುಲಪತಿ ಪ್ರೊ| ಪಿ.ಎಸ್‌. ಎಡಪಡಿತ್ತಾಯ ಅವರಿಗೆ ಅಭಿನಂದನೆ ನೆರವೇರಿಸಿ ಅವರು ಮಾತನಾಡಿದರು.

50 ವರ್ಷಗಳಲ್ಲಿ ನಾನು ಹಲವಾರು ವಿಶ್ವವಿದ್ಯಾನಿಲಯ, ಕುಲಪತಿಗಳು, ರಾಜ್ಯಪಾಲರನ್ನು ಕಂಡಿದ್ದೇನೆ. ಹಿಂದೆ ವಿವಿಗಳಿಗೆ ಇದ್ದ ಹೆಸರು -ಗೌರವ ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗುತ್ತಿದೆ. ವಿದ್ಯಾರ್ಥಿಗಳ ಬುದ್ಧಿಮತ್ತೆ, ಜ್ಞಾನವನ್ನು ದುಡಿಸಿಕೊಳ್ಳುವ ಕಾರ್ಯಕ್ಕೆ ಪ್ರಾಧ್ಯಾಪಕರು ಮುಂದಾಗಬೇಕು. ಮಂಗಳೂರು ವಿವಿ ಮೇಲೆ ಹಲವು ನಿರೀಕ್ಷೆಗಳಿದ್ದು, ನಮ್ಮದೇ ಜಿಲ್ಲೆಯ ಉಪಕುಲಪತಿಗಳು ಅಧಿಕಾರ ಸ್ವೀಕರಿಸಿದ ಬಳಿಕ ವಿವಿಯನ್ನು ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಭರವಸೆ ನೀಡಿದ್ದಾರೆ. ವಿವಿ ಮತ್ತು ಸಂಯೋಜಿತ ಕಾಲೇಜುಗಳಲ್ಲಿ ಉತ್ತಮ ದಾಖಲಾತಿ ಆಗಬೇಕಾದರೆ ಉದ್ಯೋಗ ಸೃಷ್ಟಿ ಆಗಬೇಕು. ಪ್ಲೇಸ್‌ಮೆಂಟ್‌ ನೀಡುವುದರೊಂದಿಗೆ ತಮ್ಮ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸುವ ಕಾರ್ಯ ಆಗಲಿ. ಈ ನಿಟ್ಟಿನಲ್ಲಿ ಪ್ರೊ| ಪಿ.ಎಸ್‌. ಎಡಪಡಿತ್ತಾಯ ಕಾರ್ಯ ನಿರ್ವಹಿಸುವ ಭರವಸೆ ಇದೆ ಎಂದರು.

ಹಂಪಿ ವಿವಿಯ ವಿಶ್ರಾಂತ ಕುಲಪತಿ ಪ್ರೊ| ಬಿ.ಎ. ವಿವೇಕ್‌ ರೈ ಮಾತನಾಡಿ, ಪ್ರೊ| ಎಡಪಡಿತ್ತಾಯ ಅವರು ಇದೇ ವಿವಿಯ ವಿದ್ಯಾರ್ಥಿ, ಹಣಕಾಸು ಅಧಿಕಾರಿ, ಕುಲಸಚಿವರಾಗಿ ಅನುಭವ ಹೊಂದಿರು ವುದರಿಂದ ನಿರೀಕ್ಷೆಗಳು ಹೆಚ್ಚಿವೆ ಎಂದರು.

ಜವಾಬ್ದಾರಿಯೂ ಹೆಚ್ಚಿದೆ
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಕುಲಪತಿ ಪ್ರೊ| ಎಡಪಡಿತ್ತಾಯ ಅವರು, ಈ ಹುದ್ದೆ ಅಲಂಕರಿಸುವ ಮೂಲಕ ಹೊಣೆಗಾರಿಕೆ, ಜವಾಬ್ದಾರಿಯೂ ಹೆಚ್ಚಿದೆ. ಮುಂದಿನ ನಾಲ್ಕು ವರ್ಷಗಳ ಅವಧಿಯಲ್ಲಿ ಶೈಕ್ಷಣಿಕ ವಾತಾವರಣವನ್ನು ಪುನರ್‌ ಸೃಷ್ಟಿಸುವ ಕಾರ್ಯವನ್ನು ಪ್ರಾಮಾ ಣಿಕವಾಗಿ ಮಾಡುತ್ತೇನೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.
ಹಿರಿಯ ಪತ್ರಕರ್ತ ಮನೋಹರ್‌ ಪ್ರಸಾದ್‌ ಅಭಿನಂದನ ಭಾಷಣ ಮಾಡಿದರು. ನೂತನ ಉಪಕುಲಪತಿಗಳಿಗೆ ಗಿಡ ನೀಡುವ ಮೂಲಕ ಅಭಿನಂದನೆ ಸಲ್ಲಿಸಲಾಯಿತು. ಡಾ| ಪಿ.ಎಲ್‌. ಧರ್ಮ ಸ್ವಾಗತಿಸಿದರು. ಉಮಪ್ಪ ಪೂಜಾರಿ ವಂದಿಸಿದರು. ಡಾ| ಧನಂಜಯ ಕುಂಬ್ಳೆ ನಿರೂಪಿಸಿದರು.

Advertisement

ಹುದ್ದೆ ಭರ್ತಿಗೆ ಯುಜಿಸಿ ಮಾರ್ಗಸೂಚಿ
ಖಾಲಿ ಹುದ್ದೆ ತುಂಬುವ ಕುರಿತು ಯುಜಿಸಿ ಈಗಾಗಲೇ ಒಂದು ಮಾರ್ಗಸೂಚಿ ಹೊರಡಿಸಿದೆ. ಖಾಲಿ ಇರುವ ಬೋಧಕ, ಬೋಧಕೇತರ ಹುದ್ದೆಗಳ ಬಗ್ಗೆ ಮಾಹಿತಿಯನ್ನು ಎಂಎಚ್‌ಆರ್‌ಡಿ ವೆಬ್‌ಸೈಟ್‌ಗೆ ಅಪ್‌ಲೋಡ್‌ ಮಾಡುವಂತೆ ಸೂಚಿಸಲಾಗಿದೆ. ರಾಜ್ಯದ ಉನ್ನತ ಶಿಕ್ಷಣ ಸಚಿವರು ಕೂಡ ಈ ಬಗ್ಗೆ ಭರವಸೆ ನೀಡಿದ್ದಾರೆ. ಒಂದು ವರ್ಷದೊಳಗೆ ಖಾಲಿ ಹುದ್ದೆ ತುಂಬಬಹುದು.

Advertisement

Udayavani is now on Telegram. Click here to join our channel and stay updated with the latest news.

Next