ಧಾರವಾಡ: ವಿದ್ಯಾರ್ಥಿಗಳು ಶಾಲೆಯಲ್ಲಿ ಹೇಗೆ ಕಲಿಯುತ್ತಾರೆ ಎಂಬುದರ ಜೊತೆಗೆ ಅಲ್ಲಿನ ಶಿಕ್ಷಕರು ಹೇಗೆ ಕಲಿಸುತ್ತಾರೆ ಎಂಬುದು ಅತ್ಯಂತ ಮುಖ್ಯವಾಗಿದ್ದು, ಅದರ ಆಧಾರದ ಮೇರೆಗೆ ವಿದ್ಯಾರ್ಥಿಗಳ ಜೀವನ ಬೆಳಕಾಗುತ್ತದೆ ಎಂದು ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಹೇಳಿದರು.
ನಗರದ ರಂಗಾಯಣದ ಬಯಲು ರಂಗ ಮಂದಿರದಲ್ಲಿ ಕಲಾಸಂಗಮ ಸಂಸ್ಥೆ ಹಮ್ಮಿಕೊಂಡಿದ್ದ ನಾಟಕೋತ್ಸವ ಸಮಾರಂಭದಲ್ಲಿ ಶಿಕ್ಷಣ ರತ್ನ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು. ಶಿಕ್ಷಕ ವೃತ್ತಿಗೆ ಸಮಾನ ವೃತ್ತಿ ಬೇರೊಂದಿಲ್ಲ. ಶಿಕ್ಷಕರಾದರೂ ಕೂಡ ಓದು ನಿರತಂತರವಾಗಿರಬೇಕು.
ಅವರು ಸ್ವಲ್ಪ ಓದಿದರೂ ತೀವ್ರ ವಿಚಾರ ಮಾಡಬೇಕು. ಕಡಿಮೆ ಮಾತನಾಡುವ ಹಾಗೂ ಹೆಚ್ಚಿನ ಜ್ಞಾನ ಹಂಚಿಕೆ ಮಾಡಿಕೊಳ್ಳುವ ಸಾಮರ್ಥ್ಯ ಹೊಂದಿರಬೇಕು. ಅಂದಾಗ ಮಾತ್ರ ವಿದ್ಯಾರ್ಥಿಗಳಲ್ಲಿ ಜ್ಞಾನ ಕೌಶಲ್ಯ ಹಾಗೂ ಮೌಲ್ಯಗಳನ್ನು ಬೆಳೆಸಲು ಸಾಧ್ಯವಾಗುತ್ತದೆ ಎಂದರು.
ಶಿಕ್ಷಣರತ್ನ ಪ್ರಶಸ್ತಿ ಸೀÌಕರಿಸಿದ ವೀರಣ್ಣ ಒಡ್ಡೀನ ಮಾತನಾಡಿ, ಶಿಕ್ಷಕ ವೃತ್ತಿ ಜನಮಾನಸದಲ್ಲಿ ಗೌರವ ಸ್ಥಾನ ಹೊಂದಿದ್ದು, ನಿಸ್ವಾರ್ಥ ಸೇವೆ ಮಾಡಿದಾಗ ಮಾತ್ರ ಶಿಕ್ಷಕ ವೃತ್ತಿಗೊಂದು ಬೆಲೆ ಬರುತ್ತದೆ. ಶಿಕ್ಷಕವೆಂಬ ಹೆಸರು ಚಿಕ್ಕದಾಗಿದ್ದರೂ ಕರ್ತವ್ಯ ಮಾತ್ರ ಅತ್ಯಂತ ದೊಡ್ಡದಾಗಿದೆ.
ಇಂದು ಕಲಾ ಸಂಗಮ ಕೊಡಮಾಡಿದ ಈ ಪ್ರಶಸ್ತಿ ಶಿಕ್ಷಕರೆಲ್ಲರ ಜವಾಬ್ದಾರಿ ಹೆಚ್ಚಿಸಿದಂತಾಗಿದೆ ಎಂದರು. ಹಿರಿಯ ನ್ಯಾಯವಾದಿ ಆನಂದ ಮಗದುಮ್ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ ರಂಗಣ್ಣವರ, ಮಾಜಿ ಶಾಸಕಿ ಸೀಮಾ ಮಸೂತಿ,
ಬಿ.ಡಿ.ಹಿರೇಗೌಡರ, ಮೋಹನ ನಾಗಮ್ಮನವರ ಇದ್ದರು. ನಿವೃತ್ತ ಮುಖ್ಯಾಧ್ಯಾಪಕ ವೀರಣ್ಣ ಒಡ್ಡೀನ, ಶಿಕ್ಷಕ ಶಂಕರ ಗಟ್ಟಿ ಅವರಿಗೆ ಶಿಕ್ಷಣ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಭು ಹಂಚಿನಾಳ ಸ್ವಾಗತಿಸಿದರು. ವಿಜಯೇಂದ್ರ ಅರ್ಚಕ ನಿರೂಪಿಸಿದರು. ಅನಸೂಯಾ ಹಂಚಿನಾಳ ವಂದಿಸಿದರು.