ಕಲಬುರಗಿ: ಅಖಿಲ ಭಾರತ ವೀರಶೈವ ಮಹಾಸಭಾ ಸಂಸ್ಥಾಪಕ ಕಾರಣಿಕ ಪುರುಷ ಹಾಗೂ ಶಿವಯೋಗ ಮಂದಿರ ನಿರ್ಮಾತ ಶ್ರೀ ಹಾನಗಲ್ ಕುಮಾರ ಸ್ವಾಮಿಗಳ ಜೀವನ ಆಧಾರಿತ ವಿರಾಟಪುರ ವಿರಾಗಿ ಚಲನಚಿತ್ರ ಮುಂದಿನ ತಿಂಗಳು ಬಿಡುಗೊಳ್ಳಲಿದ್ದು, ಚಲನಚಿತ್ರ ಬಿಡುಗಡೆ ಅಂಗವಾಗಿ ಶ್ರೀ ಕುಮಾರೇಶ್ವರ ರಥಯಾತ್ರೆ ಹಮ್ಮಿಕೊಳ್ಳಲಾಗಿದೆ.
ರಾಜ್ಯದ ಐದು ಕಡೆ ವಿವಿದ ಭಾಗದಿಂದ ನಾಳೆಯಿಂದ ರಥಯಾತ್ರೆ ಆರಂಭವಾಗಲಿದ್ದು, ಇಂದು ದಿ. 20 ರಂದು ಬೀದರ್ ದಿಂದ ಆರಂಭಗೊಳ್ಳುವ ರಥಯಾತ್ರೆಯು ಡಿ.22ರಂದು ಸಂಜೆ 4ಕ್ಕೆ ಕಲಬುರಗಿ ಮಹಾನಗರಕ್ಕೆ ಹುಮನಾಬಾದ ರಸ್ತೆ ಮುಖಾಂತರ ನಗರಕ್ಕೆ ಪ್ರವೇಶಯಾಗಲಿದೆ ಎಂದು ಅಖಿಲ ಭಾರತ ವೀರಶೈವ- ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಶರಣಕುಮಾರ ಮೋದಿ ತಿಳಿಸಿದರು.
ಪತ್ರಿಕಾಗೋಷ್ಢಿಯಲ್ಲಿ ಮಾತನಾಡಿದ ಅವರು, ರಥಯಾತ್ರೆಗೆ ಅದ್ದೂರಿಯಾಗಿ ಸ್ವಾಗತಿಸಲು ಸಿದ್ದತೆ ಮಾಡಿಕೊಳ್ಳಲಾಗಿದೆ. ಮೆರವಣಿಗೆಯಲ್ಲಿ ಸಮಾಜದ ಅನೇಕ ಮುಖಂಡರು ಪಾಲ್ಗೊಳ್ಳಲಿದ್ದಾರೆ. ತದನಂತರ ಸಂಜೆ 6ಕ್ಕೆ ಶರಬಣವೇಶ್ವರ ದೇವಾಸ್ಥಾನದ ಆವರಣದಲ್ಲಿ ನಾಡಿನ ಹರ ಗುರು ಚರಮೂರ್ತಿಗಳ ಸಾನ್ನಿಧ್ಯ ದಲ್ಲಿ ಕಾರ್ಯಕ್ರಮ ನಡೆಯಲಿದೆ.
ಗುರುದೇವ ಜಡೆಯ ಶಾಂತಲಿಂಗೇಶ್ವರ ಮಹಾಸ್ವಾಮಿಗಳ ಕೃಪಾಶೀರ್ವಾದದಿಂದ ಸಮಧಾನ ನಿರ್ಮಿತ ಹಾಗೂ ಬಿ.ಎಸ್.ಲಿಂಗದೇವರು ನಿರ್ದೇಶಿತ ವಿರಾಟಪುರ ವಿರಾಗಿ ಕೇವಲ ಚಲನಚಿತ್ರವಲ್ಲ.ಇದರ ಸಂದೇಶ ನಮ್ಮೆಲ್ಲರ ಜೀವನಕ್ಕೆ ಬೆಳಕಿನ ದಾರಿ ಆಗಲಿದೆ. ನೂರು ವರ್ಷಗಳ ಹಿಂದೆ ಆಗಿ ಹೋದ ಮಹಾತ್ಮರ ಜೀವನ ಚರಿತ್ರೆಯನ್ನು ಇಂದಿನ ಸಮಾಜಕ್ಕೆ ಹೇಳಿಕೊಡುವ ಪ್ರಯತ್ನ ಕಾರ್ಯರೂಪಕ್ಕೆ ತರುವುದು ಸಾಹಸವೇ ಸರಿ. ರಥಯಾತ್ರೆಯು 13 ದಿನಗಳ ಕಾಲ ನಾಡಿನುದ್ದಕ್ಕೂ ಸಂಚರಿಸಿ 360ಕ್ಕೂ ಹೆಚ್ಚು ಸಭೆಗಳು ನಡೆದು, ಒಟ್ಟಾರೆ ಒಂದು ಕೋಟಿ ಜನರಿಗೆ ಚಲನಚಿತ್ರ ಬಿಡುಗಡೆ ಹಾಗೂ ಸಂದೇಶ ತಲುಪಲಿದೆ ಎಂದರು.
ಒಟ್ಟಾರೆ ಪರಮಪೂಜ್ಯ, ಮೌನ ತಪಸ್ವಿ ಶ್ರೀ ಜಡೆಯ ಶಾಂತಲಿಂಗೇಶ್ವರ ಮಹಾಸ್ವಾಮಿಗಳವರ ಬಹುದಿನದ ಆಶಯದಂತೆ,ಪೂಜ್ಯ ಹಾನಗಲ್ ಶ್ರೀ ಕುಮಾರ ಶಿವಯೋಗಿಗಳವರ ಚರಿತ್ರೆ ಆಧಾರಿತ “ವಿರಾಟಪುರ ವಿರಾಗಿ” ಚಲನಚಿತ್ರ ಖ್ಯಾತ ನಿರ್ದೇಶಕ ಶ್ರೀ ಬಿ.ಎಸ್.ಲಿಂಗದೇವರ ನಿರ್ದೇಶನದಲ್ಲಿ ತಯಾರಾಗಿದ್ದು, ಸಿನೇಮಾ ಥಿಯೇಟರ್ ನಲ್ಲಿ ಬಿಡುಗಡೆಗೆ ಸಿದ್ಧವಾಗಿದೆ ಎಂದು ವಿವರಿಸಿದರು.
ನಿರ್ದೇಶಕ ಬಿ.ಎಸ್.ಲಿಂಗದೇವರು ತಮ್ಮ ಕೌಶಲ್ಯವನ್ನು ಉತ್ತಮವಾಗಿ ಬಳಸಿ ಈ ಚಲನಚಿತ್ರವನ್ನು ಬಹಳ ಸುಂದರವಾಗಿ ತಯಾರಿಸಿದ್ದಾರೆ. ಅತ್ತ್ಯುತ್ತಮ ಸಂಗೀತ, ಮನಸೂರೆಗೊಳ್ಳುವ ಚಿತ್ರಿಕರಣ, ಹೃದಯ ಮುಟ್ಟುವ ಹಾಡುಗಳು ಯಾವುದೇ ಕಮರ್ಶಿಯಲ್ ಸಿನೇಮಾಗಿಂತ ಅದ್ದೂರಿ ಆಗಿವೆ. ಈ ಚಿತ್ರದ ವಿಶೇಷವೆಂದರೆ ಪೂಜ್ಯ ಹಾನಗಲ್ ಶ್ರೀ ಕುಮಾರ ಶಿವಯೋಗಿಗಳವರ ಗುರುಗಳಾದ ಯಳಂದೂರು ಬಸವಲಿಂಗ ಮಹಾಸ್ವಾಮಿಗಳವರ ಪಾತ್ರವನ್ನು ನಮ್ಮೆಲ್ಲರ ಆರಾಧ್ಯ ದೇವರಾದ ಮೌನ ತಪಸ್ವಿ ಶ್ರೀ ಜಡೆಯ ಶಾಂತಲಿಂಗೇಶ್ವರ ಮಹಾಸ್ವಾಮಿಗಳವರು ಈ ಪಾತ್ರವನ್ನು ನಿಭಾಯಿಸಿದ್ದಾರೆ ಹಾಗು ಪೋಷಕ ಪಾತ್ರಗಳಲ್ಲಿ ಅನೇಕ ಸ್ವಾಮೀಜಿಯವರು ಪಾತ್ರವಹಿಸಿದ್ದಾರೆ ಎಂದು ಮೋದ ತಿಳಿಸಿದರು.
ಸಮಾಜದ ಮುಖಂಡರಾದ ಬಸವರಾಜ ಭೀಮಳ್ಳಿ, ಅರುಣಕುಮಾರ ಪಾಟೀಲ್, ಸೋಮಶೇಖರ ಹಿರೇಮಠ, ಭೀಮಾಶಂಕರ ಮೇಟಿ ಉಪಸ್ಥಿತರಿದ್ದರು.