ಹೊಸದಿಲ್ಲಿ: ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ 2019ನೇ ಸಾಲಿನ ಸಿಯೆಟ್ ಅತ್ಯುತ್ತಮ ಅಂತಾರಾಷ್ಟ್ರೀಯ ಕ್ರಿಕೆಟಿಗ ಪ್ರಶಸ್ತಿಗೆ ಪುರಸ್ಕೃತರಾಗಿದ್ದಾರೆ. ಭಾರತೀಯ ಮಹಿಳಾ ತಂಡದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂದನಾ ಮಹಿಳಾ ಅತ್ಯುತ್ತಮ ಆಟಗಾರ್ತಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ವಿರಾಟ್ ಕೊಹ್ಲಿ ಮತ್ತೊಂದು ಪ್ರಶಸ್ತಿ ಪಡೆದಿದ್ದು, ಅತ್ಯುತ್ತಮ ಬ್ಯಾಟ್ಸಮನ್ ಪ್ರಶಸ್ತಿಯೂ ಭಾರತೀಯ ನಾಯಕನ ಪಾಲಾಗಿದೆ. ಜಸ್ಪ್ರೀತ್ ಬುಮ್ರಾಗೆ ಬೆಸ್ಟ್ ಬೌಲರ್ ಪ್ರಶಸ್ತಿ ದಕ್ಕಿದೆ.
ಪ್ರಶಸ್ತಿ ಪಟ್ಟಿಯಲ್ಲಿ ಭಾರತೀಯರೇ ಸಿಂಹಪಾಲು ಪಡೆದಿದ್ದು, ಒಟ್ಟು ಒಂಬತ್ತು ಪ್ರಶಸ್ತಿಯಲ್ಲಿ ಏಳು ಭಾರತೀಯರ ಪಾಲಾಗಿದೆ. ಅತ್ಯುತ್ತಮ ಟೆಸ್ಟ್ ಕ್ರಿಕೆಟರ್ ಪ್ರಶಸ್ತಿ ಚೇತೇಶ್ವರ ಪೂಜಾರ ಪಾಲಾದರೆ, ವರ್ಷದ ಏಕದಿನ ಆಟಗಾರ ಪ್ರಶಸ್ತಿಗೆ ಉಪನಾಯಕ ರೋಹಿತ್ ಶರ್ಮಾ ಆಯ್ಕೆಯಾಗಿದ್ದಾರೆ.
ಚೈನಾಮನ್ ಬೌಲರ್ ಕುಲದೀಪ್ ಯಾದವ್ ವರ್ಷದ ಅತ್ಯದ್ಭುತ ಪ್ರದರ್ಶನ ಪ್ರಶಸ್ತಿ ಪಡೆದರೆ, ಆಸ್ಟ್ರೇಲಿಯಾ ದ ಆರೋನ್ ಫಿಂಚ್ ವರ್ಷದ ಟಿ-ಟ್ವೆಂಟಿ ಆಟಗಾರ, ಅಫಘಾನಿಸ್ತಾನದ ರಶೀದ್ ಖಾನ್ ಅಂತಾರಾಷ್ಟ್ರೀಯ ಟಿ ಟ್ವೆಂಟಿ ಬೌಲರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.
1983ರ ವಿಶ್ವಕಪ್ ತಂಡದಲ್ಲಿದ್ದ ಭಾರತೀಯ ಮಾಜಿ ಆಟಗಾರ ಮೊಹಿಂದರ್ ಅಮರನಾಥ್ ಅವರನ್ನು ಜೀವಮಾನ ಸಾಧಕ ಪ್ರಶಸ್ತಿಗೆ ಆಯ್ಕೆ ಮಾಡಿ ಗೌರವಿಸಲಾಗಿದೆ.