ಮುಂಬಯಿ: ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್ ಫೇಕ್ ವಿಡಿಯೋ ವೈರಲ್ ಆದ ಬಳಿಕ ಸೆಲೆಬ್ರಿಟಿಗಳು ಡೀಪ್ ಫೇಕ್ ವಿಡಿಯೋ ಜಾಲಕ್ಕೆ ಗುರಿಯಾಗುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಜನಪ್ರಿಯ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಡೀಪ್ ಫೇಕ್ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
ಎಐ ಸಾಫ್ಟ್ ವೇರ್ ಬಳಸಿಕೊಂಡು ವಿರಾಟ್ ಕೊಹ್ಲಿ ಅವರ ಧ್ವನಿಯನ್ನು ಉಪಯೋಗಿಸಿಕೊಳ್ಳಲಾಗಿರುವ ವಿಡಿಯೋದಲ್ಲಿ ಆನ್ ಲೈನ್ ಬೆಟ್ಟಿಂಗ್ ಅಪ್ಲಿಕೇಶನ್ ನ್ನು ಪ್ರಚಾರ ಮಾಡುವುದನ್ನು ತೋರಿಸಲಾಗಿದೆ.
ವಿರಾಟ್ ಕೊಹ್ಲಿ ಅವರ ಸಂದರ್ಶನ ವಿಡಿಯೋವೊಂದನ್ನು ಮಾರ್ಫ್ ಮಾಡಿ ಬೆಟ್ಟಿಂಗ್ ಆ್ಯಪ್ ಪ್ರಚಾರ ಮಾಡುವಂತೆ ತೋರಿಸಲಾಗಿದೆ. ಕೊಹ್ಲಿ ಕೇವಲ 1000 ರೂಪಾಯಿಗಳನ್ನು ಹೂಡಿಕೆ ಮಾಡಿ ಮೂಲಕ 3 ದಿನಗಳಲ್ಲಿ 81,000 ರೂಪಾಯಿಗಳನ್ನು ಗಳಿಸಿದ್ದೇನೆ ಎಂದು ಹೇಳುವುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ.
“ಇದರಲ್ಲಿ 2000% ರಷ್ಟು ನಿಮ್ಮ ಗೆಲುವು ಖಚಿತ. ಈ ಅಪ್ಲಿಕೇಶನ್‌ನೊಂದಿಗೆ, ನೀವು ಕಡಿಮೆ ಖರ್ಚು ಮಾಡುವ ಮೂಲಕ ಹೆಚ್ಚು ಹಣವನ್ನು ಗಳಿಸಬಹುದು” ಎನ್ನುವ ಎಐ ಧ್ವನಿಯನ್ನು ವಿಡಿಯೋದಲ್ಲಿ ಆಳವಡಿಸಲಾಗಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರ ವಿಡಿಯೋವನ್ನು ಮಾರ್ಫ್ ಮಾಡಿ ಇದೇ ರೀತಿಯಾಗಿ ಸೋಶಿಯಲ್ ಮೀಡಿಯಾದಲ್ಲಿ ಹರಿದುಬಿಡಲಾಗಿತ್ತು.