ಕ್ರೈಸ್ಟ್ ಚರ್ಚ್: ನ್ಯೂಜಿಲ್ಯಾಂಡ್ ವಿರುದ್ಧದ ಟೆಸ್ಟ್ ಸರಣಿಯನ್ನು ಹೀನಾಯ ರೀತಿಯಲ್ಲಿ ಸೋತ ನಂತರ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪತ್ರಕರ್ತರೋರ್ವರ ವಿರುದ್ಧತಿರುಗಿ ಬಿದ್ದಿದ್ದಾರೆ. ಎರಡನೇ ಟೆಸ್ಟ್ ಪಂದ್ಯದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಪ್ರಸಂಗ ನಡೆದಿದೆ.
ಕ್ರೈಸ್ಟ್ ಚರ್ಚ್ ಪಂದ್ಯದ ಎರಡನೇ ದಿನ ಕಿವೀಸ್ ನಾಯಕ ಕೇನ್ ವಿಲಿಯಮ್ಸನ್ ಔಟಾದ ವೇಳೆ ವಿರಾಟ್ ಕೊಹ್ಲಿ ನಾಟಕೀಯ ರೀತಿಯಲ್ಲಿ ಅತಿರೇಕದ ಸಂಭ್ರಮಾಚರಣೆ ಮಾಡಿದ್ದರು. ಇದೇ ಇನ್ನಿಂಗ್ಸ್ ವೇಳೆ ಮತ್ತೊಮ್ಮೆ ಬಾಯಿಗೆ ಬೆರಳಿಟ್ಟು ಕಿವೀಸ್ ಪ್ರೇಕ್ಷಕರತ್ತ ಸನ್ನೆ ಮಾಡಿದ್ದರು.
ಪಂದ್ಯದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರೋರ್ವರು ಈ ಬಗ್ಗೆ ವಿರಾಟ್ ಕೊಹ್ಲಿಯನ್ನು ಪ್ರಶ್ನಿಸಿದ್ದಾರೆ. ಇಂತಹ ಅತಿರೇಕಗಳು ಎಷ್ಟು ಸರಿ? ಭಾರತ ತಂಡದ ನಾಯಕನಾಗಿ ಹೀಗೆ ಮಾಡಬಾರದು ಎಂದು ನಿಮಗೆ ಅನ್ನಿಸುವುದಿಲ್ಲವೇ ಎಂದು ಕೊಹ್ಲಿಗೆ ಪ್ರಶ್ನಿಸಿದ್ದಾರೆ.
ಇದಕ್ಕೆ ಸಿಟ್ಟಾಗಿ ಪ್ರತಿಕ್ರಯಿಸಿದ ವಿರಾಟ್, ನೀವು ಮೊದಲು ಘಟನೆ ಏನಾಗಿದೆ ಎಂದು ಸರಿಯಾಗಿ ತಿಳಿದುಕೊಳ್ಳಿ. ಅರ್ಧ ಮಾಹಿತಿ ತಿಳಿದುಕೊಂಡು ಪ್ರಶ್ನೆ ಕೇಳಬೇಡಿ. ನಿಮಗೆ ವಿವಾದ ಸೃಷ್ಠಿಸುವ ಆಸೆ ಇದ್ದರೆ ಅದಕ್ಕೆ ಇದು ಜಾಗವಲ್ಲ. ನಾನು ಮ್ಯಾಚ್ ರೆಫ್ರಿ ಜೊತೆ ಮಾತನಾಡಿದ್ದೇನೆ. ಅವರಿಗೆ ಯಾವುದೇ ಸಮಸ್ಯೆಯಿಲ್ಲ ಎಂದರು.
ಎರಡನೇ ಟೆಸ್ಟ್ ಪಂದ್ಯವನ್ನು ಭಾರತ ಏಳು ವಿಕೆಟ್ ಅಂತರದ ಸೋಲನುಭವಿಸಿದೆ. ಇದರೊಂದಿಗೆ ಎಂಟು ವರ್ಷಗಳ ಬಳಿಕ ಟೆಸ್ಟ್ ನಲ್ಲಿ ಕ್ಲೀನ್ ಸ್ವೀಪ್ ಅವಮಾನಕ್ಕೆ ಸಿಲುಕಿದೆ.