ಹೊಸದಿಲ್ಲಿ : ಆಸ್ಟ್ರೇಲಿಯ ಎದುರು ಈಚೆಗೆ 2-1 ಅಂತರದಲ್ಲಿ ಐತಿಹಾಸಿಕ ಟೆಸ್ ಸರಣಿ ವಿಜಯನ್ನು ದಾಖಲಿಸಿದ್ದ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ತಮ್ಮ ತಂಡ ಟೆಸ್ಟ್ ಕ್ರಿಕೆಟ್ ನ ಸೂಪರ್ ಪವರ್ ಆಗುವುದನ್ನು ಕಾಣುವ ಹೆಬ್ಬಯಕೆ ಹೊಂದಿದ್ದಾರೆ.
ಕೊಹ್ಲಿ ನಾಯಕತ್ವದ ಏಶ್ಯನ್ ದಿಗ್ಗಜ ಭಾರತ, ಆಸ್ಟ್ರೇಲಿಯವನ್ನು ಅದರ ನೆಲದಲ್ಲೇ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-1 ಅಂತರದಲ್ಲಿ ಮಣಿಸಿ ಐತಿಹಾಸಿಕ ವಿಜಯವನ್ನು ದಾಖಲಿಸಿರುವುದು ತಂಡದ ಭಾರೀ ದೊಡ್ಡ ಸಾಧನೆ ಎಂದು ವರ್ಣಿತವಾಗಿದೆ. ಅಂತೆಯೇ ಆಸ್ಟ್ರೇಲಿಯದಲ್ಲಿ ಟೆಸ್ಟ್ ಸರಣಿ ವಿಜಯವನ್ನು ದಾಖಲಿಸಿರುವ ಮೊತ್ತ ಮೊದಲ ಭಾರತೀಯ ಕ್ರಿಕೆಟ್ ನಾಯಕನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಆಸ್ಟ್ರೇಲಿಯ ಮಾತ್ರವಲ್ಲದೆ ಈ ಹಿಂದಿನ ಇಂಗ್ಲಂಡ್ ಮತ್ತು ದಕ್ಷಿಣ ಆಫ್ರಿಕ ಪ್ರವಾಸಗಳಲ್ಲಿ ಕೂಡ ಭಾರತ ತನ್ನ ಪಾರಮ್ಯದ ಛಾಪನ್ನು ದಾಖಲಿಸಿತ್ತು.
ಟೆಸ್ಟ್ ನಲ್ಲಿ ಭಾರತ ಕ್ರಿಕೆಟ್ ತಂಡ ಸಂಪೂರ್ಣ ಪಾರಮ್ಯವನ್ನು ಮೆರೆದು ವಿಶ್ವದ ಸೂಪರ್ ಪವರ್ ಆಗಬೇಕೆಂಬ ತನ್ನ ಮಹತ್ವಾಕಾಂಕ್ಷೆಯನ್ನು ಕೊಹ್ಲಿ ಇದೀಗ ಬಿಚ್ಚಿಟ್ಟಿರುವುದನ್ನು ಐಸಿಸಿ ವರದಿ ಬಹಿರಂಗಪಡಿಸಿದೆ.
“ಭಾರತ ವಿಶ್ವ ಟೆಸ್ಟ್ ಕ್ರಿಕೆಟ್‌ನ ಸೂಪರ್ ಪವರ್ ಆಗಬೇಕೆಂಬುದು ನನ್ನ ಗುರಿ ಎಂದು ನಾನು ಹೇಳುತ್ತಿಲ್ಲ; ಆದರೆ ಇದು ನನ್ನ ದೃಷ್ಟಾರತೆ (vision) ಎಂದು ಹೇಳುತ್ತೇನೆ; ಭಾರತ ಟೆಸ್ಟ್ ಕ್ರಿಕೆಟ್ ತಂಡ ಮುಂಬರುವ ವರ್ಷಗಳಲ್ಲಿ ಅತ್ಯಂತ ಬಲಿಷ್ಠವಾಗಿ ವಿಶ್ವದ ಸೂಪರ್ ಪವರ್ ಆಗಬೇಕೆಂಬುದೇ ನನ್ನ ಮನದಾಳದ ಆಸೆ’ ಎಂದು ಕೊಹ್ಲಿ ಹೇಳಿದ್ದಾರೆ.