ಮುಂಬೈ: ಭಾರತೀಯ ಪುರುಷರ ಕ್ರಿಕೆಟ್ ತಂಡದ ಮುಂದಿನ ನಾಯಕ ಯಾರು ಎಂಬ ಚರ್ಚೆ ಜೋರಾಗಿಯೇ ನಡೆಯುತ್ತಿದೆ. ಸದ್ಯ ಟಿ20 ತಂಡವನ್ನು ಮುನ್ನಡೆಸುತ್ತಿರುವ ಹಾರ್ದಿಕ್ ಪಾಂಡ್ಯ ಅವರು ಈ ವಿಶ್ವಕಪ್ ಬಳಿಕ ಏಕದಿನ ತಂಡದ ನಾಯಕತ್ವ ವಹಿಸುವುದು ಬಹುತೇಕ ಖಚಿತವಾಗಿದೆ. ಇದರ ನಡುವೆ ಟೆಸ್ಟ್ ತಂಡದ ನಾಯಕತ್ವದಲ್ಲಿ ಬದಲಾವಣೆಯಾಗುವ ಸಾಧ್ಯತೆಯೂ ಇದೆ.
ಹಾರ್ದಿಕ್ ಪಾಂಡ್ಯ ಅವರು ಫಿಟ್ನೆಸ್ ಕಾರಣದಿಂದ ಟೆಸ್ಟ್ ಪಂದ್ಯವಾಡದ ಕಾರಣ ಅವರು ರೆಡ್ ಬಾಲ್ ಕ್ರಿಕೆಟ್ ನಲ್ಲಿ ತಂಡವನ್ನು ಮುನ್ನಡೆಸುವುದು ಕಷ್ಟ ಎನ್ನಲಾಗಿದೆ. ಹೀಗಾಗಿ ಟೆಸ್ಟ್ ತಂಡದಲ್ಲಿ ರೋಹಿತ್ ಉತ್ತರಾಧಿಕಾರಿಯನ್ನು ಬಿಸಿಸಿಐ ಹುಡುಕುತ್ತಿದೆ.
ಮಾಜಿ ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್ ಕೆ ಪ್ರಸಾದ್ ಅವರು ಇದರ ಬಗ್ಗೆ ಮಾತನಾಡಿದ್ದು, ಮಾಜಿ ನಾಯಕ ವಿರಾಟ್ ಕೊಹ್ಲಿ ಅವರಿಗೆ ಮತ್ತೆ ಟೆಸ್ಟ್ ಕ್ಯಾಪ್ಟನ್ಸಿ ನೀಡಬಹುದು ಎಂದಿದ್ದಾರೆ.
ಇದನ್ನೂ ಓದಿ:Kichcha sudeep: ಹಣಕಾಸಿನ ವಿವಾದ; ವಾಣಿಜ್ಯ ಮಂಡಳಿಗೆ ಸುದೀರ್ಘ ಪತ್ರ ಬರೆದ ಕಿಚ್ಚ
“ವಿರಾಟ್ ಕೊಹ್ಲಿ ಯಾಕಾಗಬಾರದು? ಅಜಿಂಕ್ಯ ರಹಾನೆ ಅವರು ಮರಳಿ ಬಂದು ಉಪ ನಾಯಕ ಆಗುವುದಾದರೆ ವಿರಾಟ್ ಕೊಹ್ಲಿ ಮತ್ತೆ ಯಾಕೆ ನಾಯಕ ಆಗಬಾರದು? ನಾಯಕತ್ವದ ಬಗ್ಗೆ ವಿರಾಟ್ ಕೊಹ್ಲಿ ಮನಸ್ಥಿತಿ ಹೇಗೆ ಎಂದು ನನಗೆ ಗೊತ್ತಿಲ್ಲ. ಒಂದು ವೇಳೆ ಆಯ್ಕೆಗಾರರು ರೋಹಿತ್ ಹೊರತುಪಡಿಸಿ ನೋಡುತ್ತಿದ್ದರೆ ಆಗ ವಿರಾಟ್ ಕೂಡಾ ಆಯ್ಕೆಗೆ ಬರುತ್ತಾರೆ ಎಂದು ನನ್ನ ಭಾವನೆ” ಎಂದು ಎಂಎಸ್ ಕೆ ಪ್ರಸಾದ್ ಹೇಳಿದರು.
ಸದ್ಯ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ರಿಷಭ್ ಪಂತ್ ಅವರು ನಾಯಕ ಸ್ಥಾನದ ಸ್ಪರ್ಧಿಯೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪ್ರಸಾದ್, ಮೊದಲು ಪಂತ್ ಗಾಯದಿಂದ ಪೂರ್ಣ ಚೇತಸಿಕೊಳ್ಳಲಿ ಎಂದಿದ್ದಾರೆ.
“ನನ್ನ ಅವಧಿಯಲ್ಲಿ ಪಂತ್ ಆಗಿನ್ನು ಯುವ ಆಟಗಾರ. ರಿಷಭ್ ಪಂತ್ ಮಾಡಿದ ಸಾಧನೆಯನ್ನು ಯಾವುದೇ ವಿಕೆಟ್ ಕೀಪರ್ ಭಾರತಕ್ಕೆ ಮಾಡಿಲ್ಲ. ಭಾರತದ ಯಾವುದೇ ವಿಕೆಟ್ ಕೀಪರ್ ಬ್ಯಾಟರ್ ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಶತಕ ಬಾರಿಸಿಲ್ಲ. ಮೊದಲು ಅವರ ಮರಳಿ ಆಟಕ್ಕೆ ಬರಲಿ. ನಾವು ಆತನ ಬಗ್ಗೆ ಈಗಲೇ ಊಹೆ ಮಾಡಿ ಹೇಳು ಆಗದು” ಎಂದಿದ್ದಾರೆ.