ಸೌಥಂಪ್ಟನ್: ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಅಂತ್ಯವಾಗಿದೆ. ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವೆ ನಡೆದ ಈ ಪಂದ್ಯದಲ್ಲಿ ಕೇನ್ ವಿಲಿಯಮ್ಸನ್ ಬಳಗ ಎಂಟು ವಿಕೆಟ್ ಅಂತರದ ಗೆಲುವು ಸಾಧಿಸಿದೆ. ಈ ಮೂಲಕ ಕಿವೀಸ್ ತಂಡವು ಟೆಸ್ಟ್ ಮಾದರಿಯ ಚೊಚ್ಚಲ ಚಾಂಪಿಯನ್ ಆಗಿದೆ.
ಸೋಲಿನ ಬಳಿಕ ಮಾತನಾಡಿದ ಭಾರತೀಯ ನಾಯಕ ವಿರಾಟ್ ಕೊಹ್ಲಿ, ಒಂದು ಪಂದ್ಯದ ಫೈನಲ್ ಗೆ ಅಸಮಾಧಾನ ವ್ಯಕ್ತಪಡಿಸಿದರು. ವಿಶ್ವದ ಅತ್ಯುತ್ತಮ ಟೆಸ್ಟ್ ತಂಡವನ್ನು ಒಂದು ಪಂದ್ಯದಿಂದ ನಿರ್ಣಯಿಸುವುದು ಸರಿಯಲ್ಲ. ಈ ಪ್ರಕ್ರಿಯೆಗೆ ನನ್ನ ಸಂಪೂರ್ಣ ಸಹಮತವಿಲ್ಲ ಎಂದಿದ್ದಾರೆ.
ಇದು ಟೆಸ್ಟ್ ಸರಣಿಯಾಗಬೇಕಿತ್ತು. ಮೂರು ಪಂದ್ಯಗಳಿರಬೇಕಿತ್ತು. ಆಗ ತಂಡವೊಂದು ಹಿನ್ನಡೆಯಿಂದ ಹೇಗೆ ಎದ್ದು ಬರುತ್ತದೆ ಎಂದು ತಿಳಿಯುತ್ತದೆ. ಆದರೆ ಇಲ್ಲಿ ಕೇವಲ ಎರಡು ದಿನದಲ್ಲಿ ಒತ್ತಡದಲ್ಲಿ ಆಡಿ ಇದೀಗ ನೀವು ಕಳಪೆ ತಂಡವಾಗಿ ನಿಲ್ಲಬೇಕು! ಇದನ್ನು ನಾನು ಒಪ್ಪುವುದಿಲ್ಲ ಎಂದಿದ್ದಾರೆ ವಿರಾಟ್.
ಇದನ್ನೂ ಓದಿ:ಸರಿಯಾದ ಮನಸ್ಥಿತಿಯ ಆಟಗಾರರೊಂದಿಗೆ ಆಡಬೇಕಾದ ಅವಶ್ಯಕತೆಯಿದೆ: ಬದಲಾವಣೆ ಸುಳಿವು ನೀಡಿದ ಕೊಹ್ಲಿ
ಮೊದಲ ಪಂದ್ಯದಲ್ಲಿ ಮಾಡಿದ ತಪ್ಪುಗಳನ್ನು ತಿದ್ದಿಕೊಂಡು ಮುಂದಿನ ಪಂದ್ಯದಲ್ಲಿ ಆಡಬಹುದು. ಒಂದು ವೇಳೆ ಮೂರು ಪಂದ್ಯಗಳ ಫೈನಲ್ ನಡೆಸಿದರೆ ಅದು ಚಾಂಪಿಯನ್ ರನ್ನು ನಿರ್ಧರಿಸಲು ಸರಿಯಾದ ಮಾನದಂಡವಾಗಬಹುದು ಎಂದು ವಿರಾಟ್ ಹೇಳಿದರು.
ಕೋಚ್ ರವಿಶಾಸ್ತ್ರೀ ಕೂಡಾ ಈ ಹಿಂದೆ ಮೂರು ಪಂದ್ಯಗಳ ಫೈನಲ್ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಟೀಂ ಇಂಡಿಯಾ ಇಂಗ್ಲೆಂಡ್ ಗೆ ಪ್ರಯಾಣಿಸುವ ಮೊದಲೇ ನಡೆದ ಸುದ್ದಿಗೋಷ್ಠಿಯಲ್ಲಿ ಕೋಚ್ ಶಾಸ್ತ್ರೀ ಈ ಬಗ್ಗೆ ಉಲ್ಲೇಖ ಮಾಡಿದ್ದರು.