ಸಿಡ್ನಿ: ಭಾರತೀಯರ ದೀಪಾವಳಿ ಸಂಭ್ರಮಕ್ಕೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ದೂರದ ಆಸ್ಟ್ರೇಲಿಯದಿಂದ ಶುಭ ಸಂದೇಶ ರವಾನಿಸಿದ್ದಾರೆ. ಪಟಾಕಿ ಮುಂತಾದ ಸುಡುಮದ್ದುಗಳನ್ನು ಸುಡದೇ ಬೆಳಕು ಮತ್ತು ಸಿಹಿಯೊಂದಿಗೆ ದೀಪಾವಳಿ ಸಂಭ್ರಮವನ್ನು ಆಚರಿಸಿ ಎಂದು ಮನವಿ ಮಾಡಿದ್ದಾರೆ. ಆದರೆ ಪಟಾಕಿ ಸುಡಬೇಡಿ ಎಂದಿದ್ದಕ್ಕೆ ಕ್ಯಾಪ್ಟನ್ ಕೊಹ್ಲಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಜನರು ವಿರೋಧ ವ್ಯಕ್ತಪಡಿಸಿದ್ದಾರೆ.
“ನಿಮಗೆ ಮತ್ತು ನಿಮ್ಮ ಕುಟುಂಬದವರಿಗೆ ದೀಪಾವಳಿ ಹಬ್ಬದ ಶುಭಾಶಯಗಳು. ಶಾಂತಿ, ಸಮೃದ್ಧಿ ಮತ್ತು ಸಂಭ್ರಮ ನಿಮ್ಮದಾಗಲಿ. ಆದರೆ ಒಂದು ನೆನಪಿಡಿ, ಈ ಸಂದರ್ಭದಲ್ಲಿ ದಯವಿಟ್ಟು ಪಟಾಕಿ ಸುಡಬೇಡಿ. ಪರಿಸರವನ್ನು ಸಂರಕ್ಷಿಸಿ. ಮನೆಯಲ್ಲೇ ನಿಮ್ಮ ಪ್ರೀತಿಪಾತ್ರರೊಡನೆ ಸಿಹಿ ಹಂಚಿಕೊಂಡು, ದೀಪಗಳನ್ನು ಬೆಳಗಿಸಿ ಹಬ್ಬವನ್ನು ಆಚರಿಸಿ’ ಎಂದು ಕೊಹ್ಲಿ ಸಂದೇಶ ರವಾನಿಸಿದ್ದಾರೆ
ಐಪಿಎಲ್ ಪಂದ್ಯದ ವೇಳೆ ಪಟಾಕಿ ಸಿಡಿಸಲ್ವಾ, ಅದನ್ನೂ ಬ್ಯಾನ್ ಮಾಡಿ, ನೀನು ಕ್ರಿಕೆಟ್ ಆಡಿದರೆ ಸಾಕು ಸಲಹೆ ನೀಡಬೇಕಾಗಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಕ್ಯಾಪ್ಟನ್ ಕೊಹ್ಲಿಯನ್ನು ಜರೆಯುತ್ತಿದ್ದಾರೆ.
ಇದನ್ನೂ ಓದಿ:ಸೆಹವಾಗ್ ಐಪಿಎಲ್ ತಂಡಕ್ಕೆ ವಿರಾಟ್ ಕೊಹ್ಲಿ ನಾಯಕ!
ಮಾಜಿ ಕ್ರಿಕೆಟಿಗರಾದ ವೀರೇಂದ್ರ ಸೆಹವಾಗ್, ವಿವಿಎಸ್ ಲಕ್ಷ್ಮಣ್ ಕೂಡ ದೀಪಾವಳಿ ಶುಭ ಸಂದೇಶ ರವಾನಿಸಿದ್ದಾರೆ. ಸಂಭ್ರಮ ಮತ್ತು ಸುರಕ್ಷಿತ ಕ್ಷಣಗಳು ನಿಮ್ಮದಾಗಲಿ ಎಂದಿದ್ದಾರೆ. ಆಸ್ಟ್ರೇಲಿಯದ ಆರಂಭಕಾರ ಡೇವಿಡ್ ವಾರ್ನರ್ ಕೂಡ ದೀಪಾವಳಿ ಸಂದೇಶವನ್ನು ರವಾನಿಸಿ ಗಮನ ಸೆಳೆದಿದ್ದಾರೆ.