ದುಬೈ: ಟೀಮ್ ಇಂಡಿಯಾ ಈಗಾಗಲೇ ಏಷ್ಯಾ ಕಪ್ ನ ಸೂಪರ್ 4 ಹಂತಕ್ಕೆ ಅರ್ಹತೆ ಪಡೆದಿದೆ. ಭಾರತ ಮುಂದಿನ ಸೂಪರ್ 4 ರ ಹಂತದ ತನ್ನ ಮೊದಲ ಪಂದ್ಯವನ್ನು ಭಾನುವಾರ ಆಡಲಿದೆ. ಹೀಗಾಗಿ ಇದರ ನಡುವಿನ ಬಿಡುವಿನ ಸಮಯದಲ್ಲಿ ತಂಡದ ಆಟಗಾರರು ದುಬೈ ಬೀಚ್ ನಲ್ಲಿ ಕಳೆದರು.
ಬಿಸಿಸಿಐ ಈ ಬಗ್ಗೆ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದೆ. ಇದು ಸರ್ಪ್, ಸ್ಯಾಂಡ್ ಮತ್ತು ಬೀಚ್ ವಾಲಿಬಾಲ್ ನ ಸಮಯ ಎಂದು ಬಿಸಿಸಿಐ ಬರೆದುಕೊಂಡಿದೆ.
ಇದನ್ನೂ ಓದಿ:ಜಗ್ಗೇಶ್ ಜತೆ ವಿಜಯ ಪ್ರಸಾದ ಬಿಗ್ ಬಜೆಟ್ ‘ತೋತಾಪುರಿ’
ನಾಯಕ ರೋಹಿತ್ ಶರ್ಮಾ, ಮಾಜಿ ನಾಯಕ ವಿರಾಟ್ ಕೊಹ್ಲಿ, ಉಪ ನಾಯಕ ಕೆ.ಎಲ್ ರಾಹುಲ್ ಸೇರಿದಂತೆ ಹಲವರು ಕಡಲ ಕಿನಾರೆಯಲ್ಲಿ ಸರ್ಫಿಂಗ್, ಕಯಾಕಿಂಗ್ ಮಾಡಿ ಆನಂದಿಸಿದರು. ಅಲ್ಲದೆ ತಂಡದ ಉಳಿದ ಆಟಗಾರರು ಬೀಚ್ ವಾಲಿಬಾಲ್ ಸೇರಿದಂತೆ ಮೋಜಿನಲ್ಲಿ ತೊಡಗಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
“ಇದು ರಜೆಯ ದಿನ, ಆದ್ದರಿಂದ ನಾವು ಕೆಲವು ಮೋಜಿನ ಚಟುವಟಿಕೆಗಳನ್ನು ಮಾಡಬೇಕು ಎಂದು ರಾಹುಲ್ ದ್ರಾವಿಡ್ ಸರ್ ನಿರ್ಧರಿಸಿದರು. ನಾವು ಮೋಜು ಮಾಡಿದೆವು. ಎಲ್ಲರೂ ಹೇಗೆ ಸಂತೋಷದಿಂದ ಮತ್ತು ಉತ್ಸುಕರಾಗಿದ್ದಾರೆ ಎಂಬುದನ್ನು ನೀವು ನೋಡಬಹುದು. ಇದು ತಂಡದ ಬಾಂಧವ್ಯವನ್ನು ಉತ್ತಮಗೊಳಿಸಲು ಸಹಾಯ ಮಾಡುತ್ತದೆ ” ಎಂದು ಸ್ಪಿನ್ನರ್ ಚಾಹಲ್ ವಿಡಿಯೋದಲ್ಲಿ ಹೇಳಿದ್ದಾರೆ.
ಏಷ್ಯಾ ಕಪ್ ನ ಲೀಗ್ ಹಂತದ ಎರಡೂ ಪಂದ್ಯಗಳನ್ನು ಗೆದ್ದ ಭಾರತ ತಂಡ ಸೂಪರ್ 4 ಹಂತಕ್ಕೆ ಅರ್ಹತೆ ಪಡೆದಿದೆ. ಇಂದು ನಡೆಯಲಿರುವ ಪಾಕಿಸ್ಥಾನ ಮತ್ತು ಹಾಂಕಾಂಗ್ ನಡುವಿನ ಪಂದ್ಯದಲ್ಲಿ ಗೆದ್ದ ತಂಡವನ್ನು ಭಾರತ ತಂಡ ರವಿವಾರ ಎದುರಿಸಲಿದೆ. ಈ ಪಂದ್ಯವೂ ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆಯಲಿದೆ.