ಗುವಾಹಟಿ: ಶ್ರೀಲಂಕಾ ವಿರುದ್ಧದ ಟಿ20 ಸರಣಿ ಮುಗಿದ ಬಳಿಕ ಟೀಂ ಇಂಡಿಯಾ ಇದೀಗ ಏಕದಿನ ಸರಣಿಗೆ ಅಣಿಯಾಗಿದೆ. ಗುವಾಹಟಿಯ ಬರ್ಸಾಪರ ಕ್ರಿಕೆಟ್ ಮೈದಾನದಲ್ಲಿ ನಡೆಯಲಿರುವ ಪಂದ್ಯದೊಂದಿಗೆ 2023ರ ವಿಶ್ವಕಪ್ ಗೆ ಭಾರತದ ಸಿದ್ದತೆ ಆರಂಭಿಸಲಿದೆ.
ಟಿ20 ಸರಣಿಯಲ್ಲಿ ವಿಶ್ರಾಂತಿ ಪಡೆದಿದ್ದ ಸೀನಿಯರ್ ಗಳು ಮತ್ತೆ ತಂಡಕ್ಕೆ ಮರಳಿದ್ದಾರೆ. ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ತಂಡಕ್ಕೆ ಬಂದಿದ್ದು, ಬಲ ತುಂಬಲಿದೆ.
ತಾನಾಡಿದ ಈ ಹಿಂದಿನ ಏಕದಿನ ಪಂದ್ಯದಲ್ಲಿ ಶತಕ ಸಿಡಿಸಿದ್ದ ವಿರಾಟ್ ಕೊಹ್ಲಿ (ಬಾಂಗ್ಲಾ ಸರಣಿ) ಉತ್ತಮ ಫಾರ್ಮ್ ನಲ್ಲಿದ್ದಾರೆ. ಇದೇ ಫಾರ್ಮ್ ಮುಂದುವರಿಸಿದಲ್ಲಿ ವಿರಾಟ್ ಲಂಕಾ ವಿರುದ್ಧದ ಸರಣಿಯಲ್ಲಿ ಹಲವು ದಾಖಲೆ ಮುರಿಯಲಿದ್ದಾರೆ. ಕ್ರಿಕೆಟ್ ಲೆಜೆಂಡ್ ಸಚಿನ್ ತೆಂಡೂಲ್ಕರ್ ಅವರ ಸಾರ್ವಕಾಲಿಕ ದಾಖಲೆ ಮುರಿಯುವತ್ತ ವಿರಾಟ್ ಹೆಜ್ಜೆಯಿಟ್ಟಿದ್ದಾರೆ.
ಸಚಿನ್ ತೆಂಡೂಲ್ಕರ್ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಏಕದಿನ ಮಾದರಿಯಲ್ಲಿ ಹೆಚ್ಚಿನ ಶತಕಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಸಚಿನ್ ತವರಿನಲ್ಲಿ 20 ಏಕದಿನ ಶತಕ ಬಾರಿಸಿದ್ದಾರೆ. ವಿರಾಟ್ ಕೊಹ್ಲಿ 19 ಶತಕಗಳೊಂದಿಗೆ ಕೇವಲ ಒಂದು ಶತಕ ಹಿಂದೆ ಉಳಿದಿದ್ದಾರೆ. ಮಾಜಿ ಭಾರತ ನಾಯಕ ಶ್ರೀಲಂಕಾ ವಿರುದ್ಧ 3 ಪಂದ್ಯಗಳ ಸರಣಿಯಲ್ಲಿ ಒಂದೆರಡು ಶತಕಗಳನ್ನು ಗಳಿಸಿದರೆ, ಅವರು ತೆಂಡೂಲ್ಕರ್ ಅವರ ದಾಖಲೆಯನ್ನು ಛಿದ್ರಗೊಳಿಸುತ್ತಾರೆ.
ಇದನ್ನೂ ಓದಿ:ಆಸ್ಕರ್ ಗೆ ಅರ್ಹತೆ ಪಡೆದ ದಂತಕಥೆ ʼಕಾಂತಾರʼ: ಸಂತಸ ಹಂಚಿಕೊಂಡ ಹೊಂಬಾಳೆ
ಅಲ್ಲದೆ ಒಂದು ತಂಡದ ವಿರುದ್ಧ ಅತೀ ಹೆಚ್ಚು ಶತಕ ಬಾರಿಸಿದ ದಾಖಲೆಯ ಮೇಲೂ ವಿರಾಟ್ ಕಣ್ಣಿಟ್ಟಿದ್ದಾರೆ. ಕೊಹ್ಲಿ ಈಗಾಗಲೇ ಏಕದಿನ ಮಾದರಿಯಲ್ಲಿ ಶ್ರೀಲಂಕಾ ವಿರುದ್ಧ ಒಟ್ಟು 8 ಶತಕಗಳನ್ನು ಗಳಿಸಿದ್ದಾರೆ. ಸಚಿನ್ ತೆಂಡೂಲ್ಕರ್ ಕೂಡ ಲಂಕಾ ವಿರುದ್ಧ 8 ಶತಕ ಗಳಿಸಿದ್ದಾರೆ. ಈ ಸರಣಿಯಲ್ಲಿ ಈ ದಾಖಲೆ ಮುರಿಯಲು ವಿರಾಟ್ ಗೆ ಅವಕಾಶವಿದೆ. ಆದರೆ, ಏಕೈಕ ಎದುರಾಳಿಯ ವಿರುದ್ಧ ಅತಿ ಹೆಚ್ಚು ಶತಕಗಳನ್ನು ಗಳಿಸಿದ ದಾಖಲೆ ಬೇರೆಯಿದೆ. ವೆಸ್ಟ್ ಇಂಡೀಸ್ ಮತ್ತು ಆಸ್ಟ್ರೇಲಿಯಾ ವಿರುದ್ಧ ಕ್ರಮವಾಗಿ ತೆಂಡೂಲ್ಕರ್ ಮತ್ತು ಕೊಹ್ಲಿ ತಲಾ 9 ಶತಕ ಸಿಡಿಸಿದ್ದು ಜಂಟಿ ದಾಖಲೆ ಹೊಂದಿದ್ದಾರೆ.