ಹೊಸದಿಲ್ಲಿ : ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಈ ವಾರ ಭಾರತೀಯ ಕ್ರಿಕೆಟ್ ಆಟಗಾರರ ಗುತ್ತಿಗೆ ಕುರಿತಾಗಿ ಮಾತುಕತೆ ನಡಸಲಿದೆ. ‘ದೇಶದಲ್ಲಿನ ಕ್ರಿಕೆಟ್ ಸಂಪತ್ತು ಅಗಾಧ ಪ್ರಮಾಣದಲ್ಲಿ ಹೆಚ್ಚುತ್ತಿದೆ. ಅಂತೆಯೇ ತಮಗೂ ಅದರಲ್ಲಿ ಹೆಚ್ಚಿನ ಪಾಲನ್ನು ಕೊಡಬೇಕು’ ಎಂದು ರಾಷ್ಟ್ರೀಯ ತಂಡದ ನಾಯಕ ವಿರಾಟ್ ಕೊಹ್ಲಿ ಧ್ವನಿ ಎತ್ತರಿಸಿದ್ದಾರೆ.
ಭಾರತೀಯ ತಂಡದ ಅಗ್ರ ಆಟಗಾರರ ವಾರ್ಷಿಕ ಗುತ್ತಿಗೆ ಮೊತ್ತವನ್ನು ಈ ವರ್ಷ ದುಪ್ಪಟ್ಟುಗೊಳಿಸಿ 3 ಲಕ್ಷ ಡಾಲರ್‌ಗೆ ಏರಿಸಲಾಗಿತ್ತು.
2018ರಿಂದ 2022ರ ವರೆಗಿನ ಐಪಿಎಲ್ ಪಂದ್ಯಗಳನ್ನು ರೂಪರ್ಟ್ ಮರ್‌ಡೋಕ್ ಅವರ ಸ್ಟಾರ್ ಇಂಡಿಯಾ ಚ್ಯಾನಲ್‌ನಲ್ಲಿ ತೋರಿಸುವುದಕ್ಕೆ 2.5 ಶತಕೋಟಿ ಡಾಲರ್‌ಗಳನ್ನು ಪಡೆಯುವ ವ್ಯವಹಾರವನ್ನು ಕಳೆದ ಸೆಪ್ಟಂಬರ್‌ನಲ್ಲಿ ಬಿಸಿಸಿಐ ಕುದುರಿಸಿಕೊಂಡಿದೆ.
ಈ ಹಿನ್ನೆಲೆಯಲ್ಲಿ ಈ ಶುಕ್ರವಾರದಂದು ಹೊಸದಿಲ್ಲಿಯಲ್ಲಿ ಬಿಸಿಸಿಐ ನಡೆಸಲಿರುವ ಭಾರತೀಯ ಕ್ರಿಕೆಟ್ ತಂಡದ ಆಟಗಾರರ ಗುತ್ತಿಗೆ ನವೀಕರಣ ಕುರಿತಾದ ಮಾತುಕತೆಗೆ ಈಗ ಹೆಚ್ಚಿನ ಮಹತ್ವ ಬಂದಿದೆ.
ಕ್ರಿಕೆಟ್ ಆಟಗಾರರ ಗುತ್ತಿಗೆ ಕಳೆದ ಸೆ.30ರಂದೇ ಮುಗಿದು ಹೋಗಿದೆ ಮತ್ತು ಅವರ ವೇತನವು ಚೌಕಾಶಿ ಮಾತುಕತೆಯ ಪ್ರಧಾನ ವಿಷಯವಾಗಿದೆ.
ಬಿಸಿಸಿಐನ ಹಿರಿಯ ಅಧಿಕಾರಿಯೋರ್ವರು ಅನಾಮಿಕರಾಗಿರಲು ಬಯಸಿ ಎಎಫ್ಪಿಗೆ ತಿಳಿಸಿರುವ ವಿಷಯ ಇಷ್ಟು : ಕ್ರಿಕೆಟ್ ಆಟಗಾರರ ಹೆಚ್ಚಿನ ಮೊತ್ತದ ಸಂಭಾವನೆಯನ್ನು ಬಯಸಿದ್ದಾರೆ. ನಾಯಕ ವಿರಾಟ್ ಕೊಹ್ಲಿ ನೇತೃತ್ವದಲ್ಲಿ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತು ಹಾಲಿ ಕೋಚ್ ರವಿ ಶಾಸ್ತ್ರೀ ಅವರೊಂದಿಗೆ ಈ ಕುರಿತಾಗಿ ಈ ಶುಕ್ರವಾರ ಮಾತುಕತೆ ನಡೆಸಲಿದ್ದಾರೆ.