ಮುಂಬಯಿ: ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದೆದುರು ಏಕಾಂಗಿ ಹೋರಾಟ ನೀಡಿದ ಆರ್‌ಸಿ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ತನ್ನ ತಂಡಕ್ಕೆ ಗೆಲುವು ತಂದುಕೊಡಲು ವಿಫಲರಾದರೂ ಐಪಿಎಲ್‌ನಲ್ಲಿ ಗರಿಷ್ಠ ರನ್ ಪೇರಿಸಿದ ದಾಖಲೆ ಮಾಡಿದರು.
62 ಎಸೆತಗಳಿಂದ 92 ರನ್ ಸಿಡಿಸಿದ ಕೊಹ್ಲಿ ಅವರು ಐಪಿಎಲ್‌ನಲ್ಲಿ ಆಡಿದ 153 ಪಂದ್ಯಗಳಿಂದ 4,619 ರನ್ ಕಲೆ ಹಾಕಿದ ಸಾಧನೆ ಮಾಡಿದರಲ್ಲದೇ ನಂ. ವನ್ ಸ್ಥಾನದಲ್ಲಿದ್ದ ಸುರೇಶ್ ರೈನಾ ಅವರನ್ನು ಹಿಂದಿಕ್ಕಿದರು. ಚೆನ್ನೈ ಸೂಪರ್ ಕಿಂಗ್ಸ್‌ನ ಸುರೇಶ್ ರೈನಾ 4,558 ರನ್ನುಗಳೊಂದಿಗೆ ದ್ವಿತೀಯ ಮತ್ತು ಮುಂಬೈ ನಾಯಕ ರೋಹಿತ್ ಶರ್ಮ ಮೂರನೇ ಸ್ಥಾನದಲ್ಲಿದ್ದಾರೆ. ಅಗ್ರ ಹತ್ತು ಮಂದಿಯಲ್ಲಿ ಭಾರತದ ಏಳು ಮಂದಿ ಬ್ಯಾಟ್ಸ್‌ಮನ್ ಇದ್ದಾರೆ. ಡೇವಿಡ್ ವಾರ್ನರ್, ಕ್ರಿಸ್ ಗೇಲ್ ಮತ್ತು ಎಬಿ ಡಿ’ವಿಲಿಯರ್ ಉಳಿದ ಮೂವರು ಆಟಗಾರರಾಗಿದ್ದಾರೆ.
ಆರೆಂಜ್ ಕ್ಯಾಪ್ ಧರಿಸಿದ ಅನುಭವ ನನಗಾಗುತ್ತಿಲ್ಲ. ಯಾಕೆಂದರೆ ಇದರಿಂದ ಏನೂ ಆಗಿಲ್ಲ ಎಂದು ಕೊಹ್ಲಿ ಹೇಳಿದರು. ಈ ಋತುವಿನಲ್ಲಿ ಆಡಿದ ನಾಲ್ಕು ಪಂದ್ಯಗಳಿಂದ 201 ರನ್ ಗಳಿಸಿರುವ ಕೊಹ್ಲಿ ಬ್ಯಾಟಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
ನಾವು ಗೆಲ್ಲಲು ಶಕ್ತಿಮೀರಿ ಪ್ರಯತ್ನಿಸಿದೆವು. ಉಳಿದ ಆಟಗಾರರು ಉತ್ತಮ ಬೆಂಬಲ ನೀಡಲು ಕೂಡ ವಿಫಲರಾದರು ಎಂದು ಕೊಹ್ಲಿ ವಿವರಿಸಿದರು. ಮುಂಬೈಯ 213 ರನ್ನಿಗೆ ಉತ್ತರವಾಗಿ ಬೆಂಗಳೂರು 8 ವಿಕೆಟಿಗೆ 167 ರನ್ ಗಳಿಸಲಷ್ಟೇ ಶಕ್ತವಾಗಿತ್ತು. ಬೆಂಗಳೂರು ತಂಡ ಇಷ್ಟರವರೆಗೆ 4 ಪಂದ್ಯ ಆಡಿದ್ದು ಇದು ಮೂರನೇ ಸೋಲು ಆಗಿದೆ.
2008ರಲ್ಲಿ ಐಪಿಎಲ್ ಆರಂಭವಾದ ದಿನದಿಂದ 29ರ ಹರೆಯದ ಕೊಹ್ಲಿ ಬೆಂಗಳೂರು ತಂಡದಲ್ಲಿದ್ದಾರೆ. ಆದರೆ ಇಷ್ಟರವರೆಗೆ ಶ್ರೀಮಂತ ಟಿ20 ಲೀಗ್‌ನ ಪ್ರಶಸ್ತಿ ಗೆಲ್ಲಲು ಅವರಿಂದ ಸಾಧ್ಯವಾಗಲಿಲ್ಲ.