ಮೊಹಾಲಿ: ಇಲ್ಲಿನ ಐಎಸ್ ಬಿಂದ್ರಾ ಕ್ರಿಕೆಟ್ ಸ್ಟೇಡಿಯಂ ನಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಮಾಜಿ ನಾಯಕ ಹೊಸ ದಾಖಲೆ ಬರೆದಿದ್ದಾರೆ. ತನ್ನ ನೂರನೇ ಟೆಸ್ಟ್ ಪಂದ್ಯವಾಡುತ್ತಿರುವ ವಿರಾಟ್ ಕೊಹ್ಲಿ ಇದೇ ವೇಳೆ ಟೆಸ್ಟ್ ಕ್ರಿಕೆಟ್ ನಲ್ಲಿ 8000 ರನ್ ಗಳಿಸಿದ ಸಾಧನೆ ಮಾಡಿದರು.
ಮೊದಲ ಇನ್ನಿಂಗ್ಸ್ ನಲ್ಲಿ ಹನುಮ ವಿಹಾರಿ ಜೊತೆಗೆ ಮೂರನೇ ವಿಕೆಟ್ ಗೆ 90 ರನ್ ಜೊತೆಯಾಟವಾಡಿದ ವಿರಾಟ್ ಕೊಹ್ಲಿ 45 ರನ್ ಗಳಿಸಿ ಔಟಾದರು. ಈ ಮೂಲಕ ಶತಕದ ಕಾಯುವಿಕೆಯನ್ನು ಮತ್ತಷ್ಟು ಮಂದುವರಿಸಿದರು.
ಇದೇ ವೇಳೆ ವಿರಾಟ್ 8000 ಟೆಸ್ಟ್ ರನ್ ಪೂರ್ಣಗೊಳಿಸಿದರು. ಈ ಮೂಲಕ ಈ ಸಾಧನೆ ಮಾಡಿದ ಆರನೇ ಭಾರತೀಯ ಎಂಬ ಸಾಧನೆ ಮಾಡಿದರು. ಸಚಿನ್ ತೆಂಡೂಲ್ಕರ್ (15921), ರಾಹುಲ್ ದ್ರಾವಿಡ್ (13288), ಸುನಿಲ್ ಗವಾಸ್ಕರ್ (10122), ವಿವಿಎಸ್ ಲಕ್ಷ್ಮಣ್ (8781) ಮತ್ತು ವೀರೇಂದ್ರ ಸೆಹ್ವಾಗ್ (8586) ಬಳಿಕ ವಿರಾಟ್ ಕೊಹ್ಲಿ ಭಾರತದ 8000 ರನ್ ಕ್ಲಬ್ ಸೇರಿದರು. ಒಟ್ಟಾರೆಯಾಗಿ, ಟೆಸ್ಟ್ ಕ್ರಿಕೆಟ್‌ನಲ್ಲಿ 8000 ವೃತ್ತಿಜೀವನದ ರನ್ ಗಳಿಸಿದ 33 ನೇ ಬ್ಯಾಟರ್ ಆಗಿದ್ದಾರೆ.
ಇದೇ ವೇಳೆ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ 900 ಬೌಂಡರಿ ಬಾರಿಸಿದ ಸಾಧನೆ ಮಾಡಿದರು. ಇಂದಿನ ಇನ್ನಿಂಗ್ ನಲ್ಲಿ ವಿರಾಟ್ ಐದು ಬೌಂಡರಿ ಬಾರಿಸಿದರು.
ಸೆಂಚುರಿ ಟೆಸ್ಟ್: ವಿರಾಟ್ ಕೊಹ್ಲಿ ಇಂದು ತಮ್ಮ ನೂರನೇ ಟೆಸ್ಟ್ ಪಂದ್ಯವಾಡುತ್ತಿದ್ದಾರೆ. ಈ ಸಾಧನೆ ಮಾಡಿದ 12ನೇ ಭಾರತೀಯ ಎಂಬ ಗರಿಮೆಗೆ ವಿರಾಟ್ ಪಾತ್ರರಾದರು. ಸಚಿನ್ ತೆಂಡೂಲ್ಕರ್ (200), ರಾಹುಲ್ ದ್ರಾವಿಡ್ (163), ವಿವಿಎಸ್ ಲಕ್ಷ್ಮಣ್ (134), ಅನಿಲ್ ಕುಂಬ್ಳೆ (132), ಕಪಿಲ್ ದೇವ್ (131), ಸುನಿಲ್ ಗವಾಸ್ಕರ್ (125), ದಿಲೀಪ್ ವೆಂಗ್‌ಸರ್ಕರ್ (116), ಸೌರವ್ ಗಂಗೂಲಿ (113), ಇಶಾಂತ್ ಶರ್ಮಾ (105), ಹರ್ಭಜನ್ ಸಿಂಗ್ (103), ಮತ್ತು ವೀರೇಂದ್ರ ಸೆಹ್ವಾಗ್ (103) ಈ ಸಾಧನೆ ಮಾಡಿದ್ದಾರೆ.