Advertisement

ವಿರಾಟ್‌ ಕೊಹ್ಲಿ ಸೆಂಚುರಿ: ಭಾರತಕ್ಕೆ ಭರ್ಜರಿ ಮುನ್ನಡೆ

06:00 AM Aug 21, 2018 | Team Udayavani |

ನಾಟಿಂಗ್‌ಹ್ಯಾಮ್‌: ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 3 ರನ್ನಿನಿಂದ ಶತಕ ತಪ್ಪಿಸಿಕೊಂಡಿದ್ದ ವಿರಾಟ್‌ ಕೊಹ್ಲಿ, ದ್ವಿತೀಯ ಸರದಿಯಲ್ಲಿ ಸೆಂಚುರಿ ಸಂಭ್ರಮ ಆಚರಿಸಿದ್ದಾರೆ. ಇದರೊಂದಿಗೆ ನಾಟಿಂಗ್‌ಹ್ಯಾಮ್‌ ಟೆಸ್ಟ್‌ನಲ್ಲಿ ಅಮೋಘ ಬ್ಯಾಟಿಂಗ್‌ ಪ್ರದರ್ಶನ ಮುಂದುವರಿಸಿರುವ ಭಾರತ, 7 ವಿಕೆಟಿಗೆ 352 ರನ್‌ ಮಾಡಿ ಡಿಕ್ಲೇರ್‌ ಮಾಡಿದೆ. 

Advertisement

ಇಂಗ್ಲೆಂಡಿಗೆ 521 ರನ್‌ ಗುರಿ ನೀಡಿದೆ.ಭಾರತ 2 ವಿಕೆಟ್‌ ನಷ್ಟಕ್ಕೆ 124 ರನ್‌ ಮಾಡಿದಲ್ಲಿಂದ ಸೋಮವಾರದ ಆಟ ಆರಂಭಿಸಿತ್ತು. ಡಿಕ್ಲೇರ್‌ ಮಾಡುವಾಗ ಹಾರ್ದಿಕ್‌ ಪಾಂಡ್ಯ 52 ರನ್‌ ಸಿಡಿಸಿ ಅಜೇಯರಾಗಿದ್ದರು.  ಪಂದ್ಯವಿನ್ನೂ 2 ದಿನ ಕಾಣಲಿಕ್ಕಿರುವುದರಿಂದ ಭಾರತದ ಮುಂದೆ ಗೆಲುವಿನ ಉತ್ತಮ ಅವಕಾಶವೊಂದು ಎದುರಾಗಿದೆ ಎನ್ನಲಡ್ಡಿಯಿಲ್ಲ.

8 ರನ್‌ ಗಳಿಸಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದ ವಿರಾಟ್‌ ಕೊಹ್ಲಿ 103 ರನ್‌ ಬಾರಿಸಿ ಮೆರೆದರು. 33ರಲ್ಲಿದ್ದ ಚೇತೇಶ್ವರ್‌ ಪೂಜಾರ 72 ರನ್ನುಗಳ ಕೊಡುಗೆ ಸಲ್ಲಿಸಿದರು. ಇವರಿಬ್ಬರ 3ನೇ ವಿಕೆಟ್‌ ಜತೆಯಾಟದಲ್ಲಿ 113 ರನ್‌ ಒಟ್ಟುಗೂಡಿತು. 

ಕೊಹ್ಲಿ: ಸರಣಿಯಲ್ಲಿ 400 ರನ್‌
ಮೊದಲ ಇನ್ನಿಂಗ್ಸ್‌ನಲ್ಲಿ 97 ರನ್‌ ಮಾಡಿ ಔಟಾಗಿದ್ದ ವಿರಾಟ್‌ ಕೊಹ್ಲಿ ಈ ಬಾರಿ ಸೆಂಚುರಿಯನ್ನು ಮಿಸ್‌ ಮಾಡಿಕೊಳ್ಳಲಿಲ್ಲ. 191 ಎಸೆತಗಳಲ್ಲಿ 23ನೇ ಟೆಸ್ಟ್‌ ಶತಕದ ಸಂಭ್ರಮ ಆಚರಿಸಿದರು. ಇದು ಈ ಸರಣಿಯಲ್ಲಿ ಕೊಹ್ಲಿ ಹೊಡೆದ 2ನೇ ಶತಕ. 197 ಎಸೆತಗಳ ಈ ಮನಮೋಹಕ ಇನ್ನಿಂಗ್ಸ್‌ ವೇಳೆ 10 ಬೌಂಡರಿ ಸಿಡಿಯಲ್ಪಟ್ಟಿತು. ಈ ಸಾಧನೆಯ ವೇಳೆ ಕೊಹ್ಲಿ 400 ರನ್ನುಗಳ ಗಡಿಯನ್ನೂ ದಾಟಿದರು. ಇಂಗ್ಲೆಂಡ್‌ನ‌ಲ್ಲಿ ನಡೆದ ಸರಣಿಯೊಂದರಲ್ಲಿ 400 ರನ್‌ ಪೇರಿಸಿದ ಭಾರತದ ದ್ವಿತೀಯ ನಾಯಕ ಹಾಗೂ ಭಾರತದ 6ನೇ ಬ್ಯಾಟ್ಸ್‌ಮನ್‌ ಎಂಬ ಹಿರಿಮೆ ಕೊಹ್ಲಿ ಅವರದ್ದಾಗಿದೆ. ಇದಕ್ಕೂ ಮುನ್ನ ಮೊಹಮ್ಮದ್‌ ಅಜರುದ್ದೀನ್‌ 426 ರನ್‌ ಪೇರಿಸಿದ್ದರು.
ಚೇತೇಶ್ವರ್‌ ಪೂಜಾರ 208 ಎಸೆತ ಎದುರಿಸಿ 72 ರನ್‌ ಮಾಡಿದರು. ಇದರಲ್ಲಿ 9 ಬೌಂಡರಿ ಸೇರಿತ್ತು. ಇದು ಅವರ 18ನೇ ಅರ್ಧ ಶತಕ. ಮೊದಲ ಅವಧಿಯಲ್ಲಿ ಪೂಜಾರ-ಕೊಹ್ಲಿ ಜೋಡಿಯೇ ಕ್ರೀಸ್‌ ಆಕ್ರಮಿಸಿಕೊಂಡಿತು. ಇಂಗ್ಲೆಂಡಿಗೆ ಯಾವುದೇ ಯಶಸ್ಸು ಸಿಗಲಿಲ್ಲ. ಭೋಜನ ವಿರಾಮದ ವೇಳೆ ಭಾರತ 2 ವಿಕೆಟಿಗೆ 194 ರನ್‌ ಗಳಿಸಿತ್ತು.

ಎರಡನೇ ಅವಧಿಯ ಆಟದಲ್ಲಿ ಪೂಜಾರ ವಿಕೆಟ್‌ ಬಿತ್ತು. ಟೀ ವಿರಾಮದ ವೇಳೆ ಭಾರತ 3 ವಿಕೆಟ್‌ ನಷ್ಟಕ್ಕೆ 270 ರನ್‌ ಮಾಡಿತ್ತು. 2ನೇ ಹೊಸ ಚೆಂಡು ತೆಗೆದುಕೊಂಡ ಬಳಿಕ ವಿರಾಟ್‌ ಕೊಹ್ಲಿ ಮತ್ತು ರಿಷಬ್‌ ಪಂತ್‌ (1) ವಿಕೆಟ್‌ ಉರುಳಿಸುವಲ್ಲಿ ಇಂಗ್ಲೆಂಡ್‌ ಯಶಸ್ವಿಯಾಯಿತು. 2ನೇ ದಿನದ ಕೊನೆಯಲ್ಲಿ ಆರಂಭಿಕರಾದ ಕೆ.ಎಲ್‌. ರಾಹುಲ್‌ (36) ಮತ್ತು ಶಿಖರ್‌ ಧವನ್‌ (44) ವಿಕೆಟ್‌ ಉರುಳಿತ್ತು. ಭಾರತದ 329 ರನ್ನುಗಳ ಮೊದಲ ಇನ್ನಿಂಗ್ಸಿಗೆ ಉತ್ತರವಾಗಿ ಇಂಗ್ಲೆಂಡ್‌ 161ಕ್ಕೆ ಆಲೌಟ್‌ ಆಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next