Advertisement

ವಿರಾಟ್‌ ಕೊಹ್ಲಿ: ಸೆಂಚುರಿ ನಂ. 50

06:00 AM Nov 21, 2017 | Harsha Rao |

ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಅವರಿಗೀಗ 50ನೇ ಅಂತಾರಾಷ್ಟ್ರೀಯ ಶತಕ ಸಂಭ್ರಮ! ನೀರಸ ಡ್ರಾದತ್ತ ಸಾಗುತ್ತಿದ್ದ ಕೋಲ್ಕತಾ ಟೆಸ್ಟ್‌ ಪಂದ್ಯಕ್ಕೆ ರೋಚಕ ಸ್ಪರ್ಶ ನೀಡಿದ ಕೊಹ್ಲಿ ಅಜೇಯ 104 ರನ್ನುಗಳೊಂದಿಗೆ ಈ ಮೈಲುಗಲ್ಲನ್ನು ನೆಟ್ಟರು. ಇದು ಅವರ 18ನೇ ಟೆಸ್ಟ್‌ ಶತಕವಾದರೆ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 50ನೆಯದು. ಅವರ ಉಳಿದ 32 ಶತಕಗಳು ಏಕದಿನ ಕ್ರಿಕೆಟ್‌ನಲ್ಲಿ ದಾಖಲಾಗಿವೆ.

Advertisement

ವಿಶ್ವದ 8ನೇ ಬ್ಯಾಟ್ಸ್‌ಮನ್‌
ವಿರಾಟ್‌ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 50 ಪ್ಲಸ್‌ ಶತಕ ಬಾರಿಸಿದ ವಿಶ್ವದ ಕೇವಲ 8ನೇ ಬ್ಯಾಟ್ಸ್‌
ಮನ್‌. ಭಾರತದ 2ನೇ ಸಾಧಕ. ಭರ್ತಿ 100 ಸೆಂಚುರಿ ಹೊಡೆದಿರುವ ಮಾಸ್ಟರ್‌ ಬ್ಲಾಸ್ಟರ್‌ ಖ್ಯಾತಿಯ ಸಚಿನ್‌ ತೆಂಡುಲ್ಕರ್‌ ಅಗ್ರಸ್ಥಾನ ಅಲಂಕರಿಸಿದ್ದಾರೆ. ರಿಕಿ ಪಾಂಟಿಂಗ್‌ 2ನೇ (71 ಶತಕ), ಕುಮಾರ ಸಂಗಕ್ಕರ 3ನೇ ಸ್ಥಾನದಲ್ಲಿದ್ದಾರೆ (63 ಶತಕ).

ಅತೀ ಕಡಿಮೆ ಇನ್ನಿಂಗ್ಸ್‌
ಇದು ವಿರಾಟ್‌ ಕೊಹ್ಲಿ ಅವರ 318ನೇ ಅಂತಾ ರಾಷ್ಟ್ರೀಯ ಪಂದ್ಯ. ಅವರು ಅತೀ ಕಡಿಮೆ 348 ಇನ್ನಿಂಗ್ಸ್‌
ಗಳಲ್ಲಿ 50 ಶತಕ ಬಾರಿಸಿದ ಹಾಶಿಮ್‌ ಆಮ್ಲ ಅವರ ದಾಖಲೆಯನ್ನು ಸರಿದೂಗಿಸಿದರು. ದಾಖಲೆಗಳ ವೀರ ತೆಂಡುಲ್ಕರ್‌ 50 ಶತಕಕ್ಕಾಗಿ 376 ಇನ್ನಿಂಗ್ಸ್‌ ಆಡಿದ್ದರು.

ಕೋಲ್ಕತಾದಲ್ಲಿ ಮೊದಲ ಶತಕ
ಇದು ಕೋಲ್ಕತಾದಲ್ಲಿ ಕೊಹ್ಲಿ ಹೊಡೆದ ಮೊದಲ ಟೆಸ್ಟ್‌ ಶತಕ. ಇಲ್ಲಿ ಆಡಿದ ಹಿಂದಿನ 6 ಇನ್ನಿಂಗ್ಸ್‌ಗಳಲ್ಲಿ ಕೊಹ್ಲಿ ಗಳಿಕೆ ಕೇವಲ 83 ರನ್‌. ಇದರಲ್ಲಿ 4 ಸಲ ಎರಡಂಕೆಯ ಮೊತ್ತ ದಾಖಲಿಸುವಲ್ಲಿ ಅವರು ವಿಫ‌ಲರಾಗಿದ್ದರು. ಆದರೆ ಈಡನ್‌ನಲ್ಲಿ ಆಡಲಾದ ಏಕದಿನ ಪಂದ್ಯಗಳಲ್ಲಿ ಒಂದು ಶತಕ ಹಾಗೂ 6 ಅರ್ಧ ಶತಕ ಹೊಡೆದ ದಾಖಲೆಯನ್ನು ಕೊಹ್ಲಿ ಹೊಂದಿದ್ದಾರೆ.

ನಾಯಕತ್ವದ “ಶತಕ ದಾಖಲೆ’
ವಿರಾಟ್‌ ಕೊಹ್ಲಿ ಈ ವರ್ಷ ಹೊಡೆದ 9ನೇ ಶತಕ ಇದಾಗಿದೆ (ಟೆಸ್ಟ್‌ನಲ್ಲಿ 3, ಏಕದಿನದಲ್ಲಿ 6 ಶತಕ). ಇದರೊಂದಿಗೆ ಕ್ಯಾಲೆಂಡರ್‌ ವರ್ಷವೊಂದರಲ್ಲಿ ಅತ್ಯಧಿಕ ಶತಕ ಬಾರಿಸಿದ ಮೂರನೇ ನಾಯಕನೆಂಬ ವಿಶ್ವದಾಖಲೆಗೂ ಕೊಹ್ಲಿ ಭಾಜನರಾದರು. ರಿಕಿ ಪಾಂಟಿಂಗ್‌ (2005 ಮತ್ತು 2006) ಮತ್ತು ಗ್ರೇಮ್‌ ಸ್ಮಿತ್‌ (2006) ಕೂಡ ನಾಯಕರಾಗಿ ವರ್ಷವೊಂದರಲ್ಲಿ 9 ಶತಕ ಹೊಡೆದಿದ್ದಾರೆ.  ವಿರಾಮ ಪಡೆಯದೇ ಹೋದರೆ ಕೊಹ್ಲಿ ಈ ವರ್ಷ ಇನ್ನೂ 6 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡುವ ಅವಕಾಶ ಹೊಂದಿದ್ದು, ಈ ದಾಖಲೆಯನ್ನು ಇನ್ನಷ್ಟು ವಿಸ್ತರಿಸುವ ಎಲ್ಲ ಸಾಧ್ಯತೆಯನ್ನು ಹೊಂದಿದ್ದಾರೆ.

Advertisement

ಎಲ್ಲದರಲ್ಲೂ 50 ಸರಾಸರಿ
ಈ ಸಾಧನೆಯ ವೇಳೆ ಕೊಹ್ಲಿ ಅವರ ಟೆಸ್ಟ್‌ ಬ್ಯಾಟಿಂಗ್‌ ಸರಾಸರಿ 50ರ ಗಡಿ ದಾಟಿತು (50.53). ಇದರೊಂದಿಗೆ ಎಲ್ಲ 3 ಮಾದರಿಯ ಕ್ರಿಕೆಟ್‌ನಲ್ಲೂ 50 ಪ್ಲಸ್‌ ಸರಾಸರಿ ಹೊಂದಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್‌ ಎಂಬ ಹೆಗ್ಗಳಿಕೆಯೂ ಕೊಹ್ಲಿ ಅವರದಾಯಿತು. ಏಕದಿನದಲ್ಲಿ 52.93, ಟಿ20ಯಲ್ಲಿ 57.13 ಬ್ಯಾಟಿಂಗ್‌ ಸರಾಸರಿಯನ್ನು ಕೊಹ್ಲಿ ಹೊಂದಿದ್ದಾರೆ.

ಸೊನ್ನೆ ಮತ್ತು ಶತಕ
ವಿರಾಟ್‌ ಕೊಹ್ಲಿ ಟೆಸ್ಟ್‌ ಪಂದ್ಯವೊಂದರಲ್ಲಿ ಸೊನ್ನೆ ಹಾಗೂ ಶತಕ ದಾಖಲಿಸಿದ ಭಾರತದ ಪ್ರಥಮ ನಾಯಕ, ವಿಶ್ವದ 18ನೇ ನಾಯಕನೆನಿಸಿದರು. ಕೊನೆಯ ಸಲ ತವರಿನ ಟೆಸ್ಟ್‌ ಪಂದ್ಯದಲ್ಲಿ ಸೊನ್ನೆ ಹಾಗೂ ಶತಕ ಸಾಧನೆಗೈದ ಭಾರತದ ಆಟಗಾರನೆಂದರೆ ದ್ರಾವಿಡ್‌ (ಇಂಗ್ಲೆಂಡ್‌ ಎದುರಿನ 2008ರ ಮೊಹಾಲಿ ಟೆಸ್ಟ್‌).

Advertisement

Udayavani is now on Telegram. Click here to join our channel and stay updated with the latest news.

Next