Advertisement

ಚೇಸಿಂಗ್‌ ವೇಳೆ 18 ಶತಕ; ತೆಂಡುಲ್ಕರ್‌ ದಾಖಲೆ ಮುರಿದ ಕೊಹ್ಲಿ

03:15 AM Jul 08, 2017 | Team Udayavani |

ಕಿಂಗ್‌ಸ್ಟನ್‌ : ಕಿಂಗ್‌ಸ್ಟನ್‌ ಏಕದಿನ ಪಂದ್ಯದಲ್ಲಿ ಅಜೇಯ 111 ರನ್‌ ಬಾರಿಸುವ ಮೂಲಕ ನಾಯಕ ವಿರಾಟ್‌ ಕೊಹ್ಲಿ ನೂತನ ಮೈಲುಗಲ್ಲೊಂದನ್ನು ನೆಟ್ಟರು. ಚೇಸಿಂಗ್‌ ವೇಳೆ 18ನೇ ಶತಕ ಬಾರಿಸಿ ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡುಲ್ಕರ್‌ ಅವರ ವಿಶ್ವದಾಖಲೆಯನ್ನು ಮುರಿದರು. ಸಚಿನ್‌ ಏಕದಿನ ಕ್ರಿಕೆಟ್‌ನಲ್ಲಿ ರನ್‌ ಬೆನ್ನಟ್ಟುವ ವೇಳೆ 17 ಶತಕ ಬಾರಿಸಿದ್ದರು. ಒಟ್ಟಾರೆಯಾಗಿ ಇದು ಕೊಹ್ಲಿ ಹೊಡೆದ 28ನೇ ಶತಕ. ತೆಂಡುಲ್ಕರ್‌ ಈ 17 ಶತಕಗಳಿಗಾಗಿ 232 ಇನ್ನಿಂಗ್ಸ್‌ ಆಡಿದರೆ, ಕೊಹ್ಲಿ 18 ಶತಕಗಳಿಗಾಗಿ ಆಡಿದ್ದು ಕೇವಲ 102 ಇನ್ನಿಂಗ್ಸ್‌ ಮಾತ್ರ!

Advertisement

ಕೊಹ್ಲಿ ವೆಸ್ಟ್‌ ಇಂಡೀಸ್‌ನಲ್ಲಿ 2 ಶತಕ ಬಾರಿಸಿದ ಭಾರತದ ಮೊದಲ ನಾಯಕನೆಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ರಾಹುಲ್‌ ದ್ರಾವಿಡ್‌ ನಾಯಕನಾಗಿ ಒಂದು ಸೆಂಚುರಿ ಹೊಡೆದಿದ್ದರು. ಒಟ್ಟಾರೆಯಾಗಿ ಇದು ವಿಂಡೀಸ್‌ ವಿರುದ್ಧ ಕೊಹ್ಲಿ ಬಾರಿಸಿದ 4ನೇ ಶತಕ.

ನಾಯಕನಾಗಿ 30ನೇ ಏಕದಿನ ಪಂದ್ಯದಲ್ಲಿ ಭಾರತವನ್ನು ಮುನ್ನಡೆಸಿದ ವಿರಾಟ್‌ ಕೊಹ್ಲಿ 22ನೇ ಗೆಲುವನ್ನು ಕಂಡರು. ಏಳರಲ್ಲಿ ಸೋತಿದ್ದು, ಒಂದು ಪಂದ್ಯ ರದ್ದುಗೊಂಡಿದೆ. ನಾಯಕನಾಗಿ ಅವರ ಗೆಲುವಿನ ಸರಾಸರಿ 75.86. ಕನಿಷ್ಠ 7 ಪಂದ್ಯಗಳ ನಾಯಕತ್ವದ ಮಾನದಂಡದ ಪ್ರಕಾರ ಕೊಹ್ಲಿ ಅವರ ಈ ಯಶಸ್ಸಿಗೆ ಅಗ್ರಸ್ಥಾನ ಲಭಿಸುತ್ತದೆ.

ವಿರಾಟ್‌ ಕೊಹ್ಲಿ ಶತಕ ಬಾರಿಸಿದ 28 ಪಂದ್ಯಗಳ ಪೈಕಿ ಭಾರತ 24ರಲ್ಲಿ ಜಯ ಕಂಡಿತು. ಈ ಸಾಧನೆಯಲ್ಲಿ ಅವರು 3ನೇ ಸ್ಥಾನದಲ್ಲಿದ್ದಾರೆ. ಸಚಿನ್‌ ತೆಂಡುಲ್ಕರ್‌ (49 ಶತಕ, 33 ಜಯ) ಮತ್ತು ರಿಕಿ ಪಾಂಟಿಂಗ್‌ (30 ಶತಕ, 25 ಜಯ) ಮೊದಲೆರಡು ಸ್ಥಾನ ಅಲಂಕರಿಸಿದ್ದಾರೆ.

ಏಕದಿನದ ಒಟ್ಟು ಶತಕಗಳ ಸಾಧನೆಯಲ್ಲೂ ಕೊಹ್ಲಿಗೆ ಈಗ 3ನೇ ಸ್ಥಾನ. ತೆಂಡುಲ್ಕರ್‌ 49, ಪಾಂಟಿಂಗ್‌ 30 ಶತಕ ಹೊಡೆದು ಮೊದಲೆರಡು ಸ್ಥಾನದಲ್ಲಿದ್ದಾರೆ. ಸನತ್‌ ಜಯಸೂರ್ಯ ಕೂಡ 28 ಶತಕ ಹೊಡೆದರೂ ಇದಕ್ಕಾಗಿ 445 ಪಂದ್ಯಗಳನ್ನು ಆಡಿದ್ದರು. ಕೊಹ್ಲಿ ಕೇವಲ 189 ಪಂದ್ಯಗಳಲ್ಲಿ 28 ಶತಕ ಸಿಡಿಸಿದ್ದಾರೆ.

Advertisement

ಕೊಹ್ಲಿ ಏಕದಿನದಲ್ಲಿ 23ನೇ ಸಲ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಭಾರತದ ಸಾಧಕರಲ್ಲಿ ಅವರಿಗೆ 4ನೇ ಸ್ಥಾನ. ಮೊದಲ ಮೂವರೆಂದರೆ ಸಚಿನ್‌ ತೆಂಡುಲ್ಕರ್‌ (62), ಸೌರವ್‌ ಗಂಗೂಲಿ (31) ಮತ್ತು ಯುವರಾಜ್‌ ಸಿಂಗ್‌ (27).

Advertisement

Udayavani is now on Telegram. Click here to join our channel and stay updated with the latest news.

Next