ತಿರುವನಂತಪುರಂ; ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ ಮೂರನೇ ಪಂದ್ಯದಲ್ಲಿ ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತೊಂದು ಶತಕ ಸಿಡಿಸಿದ್ದಾರೆ. ಏಕದಿನ ಕ್ರಿಕೆಟ್ ಜೀವನದಲ್ಲಿ 46ನೇ ಶತಕ ಸಿಡಿಸಿದ ವಿರಾಟ್ ಇಂದಿನ ಪಂದ್ಯದಲ್ಲಿ ಹಲವು ದಾಖಲೆಗಳನ್ನು ಬರೆದಿದ್ದಾರೆ.
ಇಂದಿನ ಪಂದ್ಯದಲ್ಲಿ ಕೊಹ್ಲಿ ಏಕದಿನ ಮಾದರಿಯಲ್ಲಿ ಅತಿ ಹೆಚ್ಚು ಸ್ಕೋರ್ ಮಾಡಿದ ಆಟಗಾರರ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೇರಿದರು. ಈ ಪಂದ್ಯದಲ್ಲಿ 62 ರನ್ ಗಳ ಗಡಿ ದಾಟುತ್ತಿದ್ದಂತೆ ಕೊಹ್ಲಿ ಅವರು ಲಂಕಾದ ಮಹೇಲಾ ಜಯವರ್ಧನೆ ಅವರನ್ನು ಹಿಂದಿಕ್ಕಿದರು. ಶ್ರೀಲಂಕಾ ಪರ ಏಕದಿನದಲ್ಲಿ ಜಯವರ್ಧನೆ 12,650 ರನ್ ಗಳಿಸಿದ್ದಾರೆ. ಇಂದಿನ ಇನ್ನಿಂಗ್ಸ್ ಬಳಿಕ ವಿರಾಟ್ 12,754 ರನ್ ಗಳಿಸಿದರು.
46ನೇ ಏಕದಿನ ಶತಕ ದಾಖಲಿಸಿದ ಕೊಹ್ಲಿ ಸಚಿನ್ ತೆಂಡೂಲ್ಕರ್ ಅವರ ಎರಡು ‘ಸಾರ್ವಕಾಲಿಕ ದಾಖಲೆಗಳನ್ನು’ ಮುರಿದರು. ಕೊಹ್ಲಿ ಈಗ ತವರಿನಲ್ಲಿ ಅತಿ ಹೆಚ್ಚು ಏಕದಿನ ಶತಕ ಬಾರಿಸಿದ (21 ಶತಕ) ಪಟ್ಟಿಯಲ್ಲಿ ತೆಂಡೂಲ್ಕರ್ ಅವರನ್ನು ಹಿಂದಿಕ್ಕಿದರು. ಅಲ್ಲದೆ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ನಲ್ಲಿ ಒಂದೇ ತಂಡದ ವಿರುದ್ಧ ಅತಿ ಹೆಚ್ಚು ಶತಕಗಳನ್ನು ಗಳಿಸಿದ ದಾಖಲೆಯನ್ನು ಸಹ ಬರೆದರು. (10 ಶತಕ)
ತಿರುವನಂತಪುರಂ ಪಂದ್ಯದಲ್ಲಿ ಭರ್ಜರಿಯಾಗಿ ಬ್ಯಾಟ್ ಬೀಸಿದ 110 ಎಸೆತಗಳಲ್ಲಿ 166 ರನ್ ಮಾಡಿ ಅಜೇಯರಾಗಿ ಉಳಿದಿದ್ದಾರೆ. ಎಂಟು ಸಿಕ್ಸರ್ ಮತ್ತು 13 ಬೌಂಡರಿ ಬಾರಿಸಿದರು.