Advertisement
ಹೌದು, ಟಿ20 ವಿಶ್ವಕಪ್ ಬಳಿಕ ವಿಶ್ರಾಂತಿಯಲ್ಲಿದ್ದ ವಿರಾಟ್ ಕೊಹ್ಲಿ ದ್ವಿತೀಯ ಟೆಸ್ಟ್‌ಗೆ ತಂಡ ಸೇರಿಕೊಂಡು ನಾಯಕತ್ವ ವಹಿಸಿಕೊಳ್ಳಲಿದ್ದಾರೆ. ಆದ್ದರಿಂದ ಕೊಹ್ಲಿಗಾಗಿ ಯಾರನ್ನು ತಂಡದಿಂದ ಕೈಬಿಡಬೇಕು ಎನ್ನುವುದು ತಲೆನೋವಾಗಿ ಪರಿಣಮಿಸಿದೆ.
ಮೊದಲ ಟೆಸ್ಟ್‌ನಲ್ಲಿ ಕೊಹ್ಲಿ ಸ್ಥಾನದಲ್ಲಿ ಆಡಲಿಳಿದ ಶ್ರೇಯಸ್ ಅಯ್ಯರ್ ತಮ್ಮ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಂಡಿದ್ದರು. ಚೊಚ್ಚಲ ಟೆಸ್ಟ್‌ನಲ್ಲೇ ಶತಕ, ಅರ್ಧ ಶತಕ ಸಿಡಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಗೂ ಪಾತ್ರರಾಗಿದ್ದರು. ಆದ್ದರಿಂದ ಅವರನ್ನು ತಂಡದಿಂದ ಕೈಬಿಡುವ ಪ್ರಶ್ನೆಯೇ ಇಲ್ಲ. ಇನ್ನು ಉಪನಾಯಕ ರಹಾನೆ ಮತ್ತು ಚೇತೇಶ್ವರ್ ಪೂಜಾರ. ಇವರಿಬ್ಬರೂ ಸದ್ಯ ಬ್ಯಾಟಿಂಗ್ ಲಯದಲ್ಲಿಲ್ಲ. ಆದರೆ ಅನುಭವದ ಆಧಾರದಲ್ಲಿ ಉಳಿದುಕೊಳ್ಳಬಹುದು. ಉಳಿದಂತೆ ಸ್ಪಿನ್ ವಿಭಾಗದಲ್ಲಿ ಅಶ್ವಿನ್, ಜಡೇಜ, ಅಕ್ಷರ್ ಉತ್ತಮ ಲಯದಲ್ಲಿರುವುದರಿಂದ ಮತ್ತು ಭಾರತದಲ್ಲಿ ಸ್ಪಿನ್ ಸ್ನೇಹಿ ಪಿಚ್‌ಗಳಿರುವ ಕಾರಣ ಮೂವರು ಸ್ಪಿನ್ನರ್‌ಗಳು ಕಣಕ್ಕಿಳಿಯುವುದ ಬಹುತೇಕ ಖಚಿತ.
Related Articles
Advertisement
ಇಬ್ಬರು ವೇಗಿಗಳಾದ ಇಶಾಂತ್ ಶರ್ಮ, ಉಮೇಶ್ ಯಾದವ್ ಕೂಡ ಪರಿಣಾಮ ಬೀರಿಲ್ಲ. ಇವರಲ್ಲೊಬ್ಬರನ್ನು ಕೈಬಿಡಬಹುದಾದರೂ ಸ್ಟ್ರೈಕ್ ಬೌಲರ್ ಒಬ್ಬರ ಕೊರತೆ ಎದುರಾಗುತ್ತದೆ.
ಮಾಯಾಂಕ್ ಅಗರ್ವಾಲ್ ಸ್ಥಾನಕ್ಕೆ ಕುತ್ತು?ಆರಂಭಿಕ ಆಟಗಾರ ಮಾಯಾಂಕ್ ಅಗರ್ವಾಲ್ ಅವರನ್ನು ಕೈ ಬಿಟ್ಟು ಕೊಹ್ಲಿಯನ್ನು ತಂಡಕ್ಕೆ ಸೇರಿಸಿಕೊಳ್ಳುವ ಮಾರ್ಗವೊಂದಿದೆ. ಆದರೆ ಇಲ್ಲೂ ಒಂದು ಸಮಸ್ಯೆ ಇದೆ. ಆಗ ಕತ್ತು ನೋವಿನಿಂದಾಗಿ ಬಳಲುತ್ತಿರುವ ಭಾರತದ ಪ್ರಧಾನ ಕೀಪರ್ ವೃದ್ಧಿಮಾನ್ ಸಾಹಾ ಅವರನ್ನು ಹೊರಗುಳಿಸಬೇಕಾಗುತ್ತದೆ. ಅವರ ಸ್ಥಾನಕ್ಕೆ ಬರುವ ಶ್ರೀಕರ್ ಭರತ್ ಅವರನ್ನು ಗಿಲ್ ಜತೆಗೆ ಆರಂಭಿಕನಾಗಿ ಇಳಿಸಬಹುದು. ಆಗ ವಿರಾಟ್ ಆಯ್ಕೆ ಸುಲಭ. ಆದರೆ ಇನ್ನೂ ಸ್ಥಿರವಾದ ಓಪನಿಂಗ್ ಕಾಣದ ಭಾರತ ಪದೇಪದೆ ಆರಂಭಿಕರನ್ನು ಬದಲಿಸುವುದು ಎಷ್ಟು ಸರಿ ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ. ಕೊನೆ ಗಳಿಗೆಯಲ್ಲಿ ಒಂದು ಅಸ್ತ್ರವಂತೂ ಇದೆ. ಪೂಜಾರ ಅಥವಾ ರಹಾನೆ ಅವರನ್ನು “ಅನ್‌ಫಿಟ್’ ಎಂದು ಘೋಷಿಸಿ ಹೊರಗಿರಿಸಿ ಕೊಹ್ಲಿಯನ್ನು ಸೇರಿಸಿಕೊಳ್ಳುವುದು!