ಗುವಾಹಟಿ: ಬ್ಯಾಟಿಂಗ್ ಸ್ವರ್ಗ ಎಂದೇ ಕರೆಯಲ್ಪಡುವ ಗುವಾಹಟಿ ಮೈದಾನದಲ್ಲಿ ಮತ್ತೊಮ್ಮೆ ರನ್ ಸುರಿಮಳೆಯಾಗಿದೆ. ಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತದ ಬ್ಯಾಟರ್ ಗಳು ಮೆರೆದಾಡಿದ್ದಾರೆ. ವಿರಾಟ್ ಕೊಹ್ಲಿ ಶತಕ ಇಂದಿನ ಹೈಲೈಟ್ಸ್.
ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಭಾರತ ತಂಡವು ಏಳು ವಿಕೆಟ್ ನಷ್ಟಕ್ಕೆ 373 ರನ್ ಗಳ ಬೃಹತ್ ಮೊತ್ತ ಕಲೆ ಹಾಕಿದೆ.
ಬ್ಯಾಟಿಂಗ್ ಆರಂಭಿಸಿದ ಭಾರತ ತಂಡಕ್ಕೆ ಗಿಲ್ ಮತ್ತು ನಾಯಕ ರೋಹಿತ್ ಶತಕದ ಜೊತೆಯಾಟವಾಡಿ ಆರಂಭ ನೀಡಿದರು. ಇಬ್ಬರೂ ಅರ್ಧ ಶತಕ ಬಾರಿಸಿದರು. ಗಿಲ್ 70 ರನ್ ಬಾರಿಸಿದರೆ, ನಾಯಕ ರೋಹಿತ್ 83 ರನ್ ಗಳಿಸಿದರು. ಬಳಿಕ ಕ್ರೀಸ್ ಗೆ ಬಂದ ವಿರಾಟ್ ಕೊಹ್ಲಿ ಒಂದೆಡೆ ಬ್ಯಾಟ್ ಬೀಸುತ್ತಾ ಬಂದರು. 80 ಎಸೆತಗಳಲ್ಲಿ ಶತಕ ಸಿಡಿಸಿದರು. ಕೊನೆಗೆ 87 ಎಸೆತದಲ್ಲಿ 113 ರನ್ ಗಳಿಸಿ ರಜಿತ ಎಸೆತಕ್ಕೆ ಔಟಾದರು.
ಈ ವೇಳೆ ಲಂಕಾ ವಿರುದ್ಧ ಅತೀ ಹೆಚ್ಚು ಶತಕ ಬಾರಿಸಿದ ದಾಖಲೆ ಬರೆದರು. ಇದು ಲಂಕಾ ವಿರುದ್ಧ ಕೊಹ್ಲಿ ಗಳಿಸಿದ 9ನೇ ಶತಕವಾಗಿದೆ. ಸಚಿನ್ 8 ಶತಕ ಬಾರಿಸಿದ್ದರು. ಅಲ್ಲದರ ತವರಿನಲ್ಲಿ ಅತೀ ಹೆಚ್ಚು ಏಕದಿನ ಶತಕ ಬಾರಿಸಿದ ದಾಖಲೆಯಲ್ಲಿ ಸಚಿನ್ ಅವರನ್ನು ಸರಿಗಟ್ಟಿದರು. ಸಚಿನ್ 160 ಇನ್ನಿಂಗ್ಸ್ ಗಳಲ್ಲಿ 20 ಶತಕ ಗಳಿಸಿದ್ದು, ಕೇವಲ 99 ಇನ್ನಿಂಗ್ಸ್ ಗಳಲ್ಲಿ ವಿರಾಟ್ ಕೊಹ್ಲಿ 20 ಶತಕ ಬಾರಿಸಿದರು.
ಉಳಿದಂತೆ ಶ್ರೇಯಸ್ ಅಯ್ಯರ್ 28, ಕೆಎಲ್ ರಾಹುಲ್ 39 ರನ್ ಗಳಿಸಿದರು. ಲಂಕಾ ಪರ 88 ರನ್ ನೀಡಿದರೂ ಮೂರು ವಿಕೆಟ್ ಕಿತ್ತರು.