ಮುಂಬೈ: ದೇಶದಲ್ಲಿ ತಲ್ಲಣ ಎಬ್ಬಿಸಿರುವ ಮಹಾಮಾರಿ ಕೋವಿಡ್-19 ವಿರುದ್ಧದ ಹೋರಾಟಕ್ಕೆ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಹಾಗೂ ಅವರ ಪತ್ನಿ ಬಾಲಿವುಡ್ ನಟಿ ಅನುಷ್ಕಾ ಶರ್ಮ ದೇಣಿಗೆ ನೀಡಿರುವುದನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದರು.
ಈ ವಿಷಯ ಎಲ್ಲರಿಗೂ ಗೊತ್ತು. ಆದರೆ ಎಷ್ಟು ಹಣ ನೀಡಿದ್ದಾರೆ ಎನ್ನುವುದನ್ನು ಇಬ್ಬರು ಎಲ್ಲಿಯೂ ಪ್ರಕಟಿಸಿರಲಿಲ್ಲ. ಇದೀಗ ಈ ಕುತೂಹಲಕ್ಕೆ ಉತ್ತರ ಸಿಕ್ಕಿದೆ.
ಮೂಲಗಳ ಪ್ರಕಾರ ಅವರಿಬ್ಬರು ಜಂಟಿಯಾಗಿ ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಒಟ್ಟಾರೆ 3 ಕೋಟಿ ರೂ. ನೀಡಿದ್ದಾರೆ ಎಂದು ಬಾಲಿವುಡ್‌ನ ಆಪ್ತ ಮೂಲಗಳು ತಿಳಿಸಿವೆ.
ಭಾರತದ ಒಟ್ಟಾರೆ ಕ್ರೀಡಾ ಕುಟುಂಬ ಕೋವಿಡ್-19 ವಿರುದ್ಧ ಸಮರಕ್ಕೆ ಸರ್ಕಾರದ ಜತೆಗೆ ಕೈ ಜೋಡಿಸಿರುವುದು ಶ್ಲಾಘನೀಯ. ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್, ಸೌರವ್ ಗಂಗೂಲಿ, ಸುರೇಶ್ ರೈನಾ ಸಹಿತ ಹಲವಾರು ಮಂದಿ ದಿಗ್ಗಜರು ತಮ್ಮ ಕೈಯಿಂದಾಗಿರುವ ಧನ ಸಹಾಯವನ್ನು ಮಾಡಿದ್ದಾರೆ.
ಧೋನಿ ಕೂಡ 1 ಲಕ್ಷ ರೂ. ಹಣವನ್ನು ಪುಣೆ ಮೂಲದ ಸರ್ಕಾರೇತರ ಸಂಘ ಸಂಸ್ಥೆಗೆ ನೀಡಿದ್ದರು, ಆದರೆ ಇದು ವಿವಾದಕ್ಕೂ ಕಾರಣವಾಗಿತ್ತು, ಕೋಟ್ಯಂತರ ರೂ.ಗಳ ಒಡೆಯ ಧೋನಿ ಸಣ್ಣ ಮೊತ್ತ ನೀಡಿರುವುದು ಹಲವರ ಕಣ್ಣು ಕೆಂಪಗಾಗಿಸಿತ್ತು. ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಹೀಗಾಗಿಯೋ ಗೊತ್ತಿಲ್ಲ, ಎಲ್ಲೂ ಕೊಹ್ಲಿ -ಅನುಷ್ಕಾ ತಾವು ನೀಡಿರುವ ಹಣದ ಮೊತ್ತವನ್ನು ಎಲ್ಲೂ ಬಹಿರಂಗ ಪಡಿಸಿರಲಿಲ್ಲ.
ತಮ್ಮ ಕೈನಿಂದ ಆಗಿರುವ ಹಣವನ್ನು ಪ್ರಧಾನಮಂತ್ರಿಗಳ ಪರಿಹಾರ ನಿಧಿ ಹಾಗೂ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದೇವೆ ಎಂದಷ್ಟೆ ಪ್ರತಿಕ್ರಿಯಿಸಿದ್ದರು.