ಲಕ್ನೋ: ಖಾಕಿ ತೊಟ್ಟ ಪೊಲೀಸರು ಎಂದರೆ ಕೆಲವರಿಗೆ ಭಯ. ಕಾನೂನು ವಿರುದ್ಧವಾಗಿ ನಾವು ಯಾವುದೇ ಕೆಲಸ ಮಾಡಿದರೂ ಪೊಲೀಸರು ಕಾನೂನಿಗೆ ಅನುಗುಣವಾಗಿ ಕ್ರಮವನ್ನು ಕೈಗೊಳ್ಳುತ್ತಾರೆ. ಆದರೆ ಇಲ್ಲೊಬ್ಬರು ಯುವಕರು ಪೊಲೀಸರ ಗಾಡಿಯನ್ನೇ ಬಳಸಿಕೊಂಡು ರೀಲ್ಸ್ ಮಾಡಿರುವ ವಿಡಿಯೋ ವೈರಲ್ ಆಗಿದೆ.
ಉತ್ತರ ಪ್ರದೇಶದ ಕಾನ್ಪುರದ ಬಜಾರಿಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾದ ಈ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಕಮಿಷನರ್ ಪೊಲೀಸ್ ಜೀಪ್ ನ ಮೇಲೆ ಇಬ್ಬರು ಯುವಕರು ಕೂತು ಇನ್ಸ್ಟ್ರಾಗ್ರಾಮ್ ರೀಲ್ಸ್ ಮಾಡಿದ್ದಾರೆ. ಹಿನ್ನೆಲೆಯಲ್ಲಿ ಹಾಡೊಂದು ಪ್ಲೇ ಆಗುತ್ತಿದ್ದು, ಒಬ್ಬ ಯುವಕ ಕಾಲಿನ ಮೇಲೆ ಕಾಲು ಹಾಕಿಕೊಂಡು ಪೋಸ್ ಕೊಟ್ಟಿದ್ದಾನೆ.
ಯುವಕರಿಬ್ಬರ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ. ಪೊಲೀಸ್ ಜೀಪ್ ನಲ್ಲಿರುವ ಒಬ್ಬ ಯುವಕನ ಹೆಸರು ಫೈಸಲ್ ಮತ್ತೊಬ್ಬನ ಗುರುತು ಇನ್ನಷ್ಟೇ ಆಗಬೇಕಿದೆ. ಪೊಲೀಸ್ ಜೀಪ್ ನ್ನು ರಿಪೇರಿಗೆಂದು ಗ್ಯಾರೇಜ್ ನಲ್ಲಿ ಇಟ್ಟಾಗ ಯುವಕರು ಇದನ್ನು ಬಳಸಿ ಈ ರೀತಿ ಮಾಡಿದ್ದಾರೆ. ಇಬ್ಬರ ವಿರುದ್ದವೂ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಸಿಪಿ ಸಿಸಮೌ ಶಿಖರ್ ಹೇಳಿದ್ದಾರೆ.