ಸಿಂಧನೂರು: ಶಿಕ್ಷಕನ ರಾಸಲೀಲೆ ವಿಡಿಯೋ ವೈರಲ್ ಆದ ಬಳಿಕ ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸಿದ ವಿಚಾರಣೆ ವೇಳೆ ಆರೋಪಕ್ಕೆ ಗುರಿಯಾಗಿರುವ ಶಿಕ್ಷಕ ಜಾಣ ಉತ್ತರ ನೀಡಿ ಪಾರಾಗಲು ಯತ್ನಿಸಿರುವ ಅಂಶ ಬೆಳಕಿಗೆ ಬಂದಿದೆ.
ಗೋರೆಬಾಳ ಕ್ಲಸ್ಟರ್ ವ್ಯಾಪ್ತಿಯ ಶಿಕ್ಷಣ ಸಂಯೋಜಕರು ಜು.1ರಂದು ನಡೆಸಿದ ವಿಚಾರಣೆ ವೇಳೆ ಶಿಕ್ಷಕ ಮೊಹಮ್ಮದ್ ಅಜರುದ್ದೀನ್, ತನ್ನನ್ನು ಮನ್ನಿಸುವಂತೆ ಕೇಳಿಕೊಂಡಿದ್ದಾನೆ. ವೈಯಕ್ತಿಕ ವಿಷಯವಾಗಿರುವುದರಿಂದ ಅದನ್ನು ಕೈ ಬಿಡಬೇಕು ಎಂಬ ಪರೋಕ್ಷ ವಾದ ಮಂಡಿಸಿದ್ದಾನೆ. ಅಲ್ಲದೇ ಲೈಂಗಿಕ ಕ್ರಿಯೆ ನಡೆಸಿರುವ ಮಹಿಳೆ ಕೂಡ ನನ್ನೊಂದಿಗೆ ಸಹಮತ ಹೊಂದಿದ್ದರು ಎಂದು ಸ್ವಯಂ ರಕ್ಷಣೆಯ ಉತ್ತರ ಕೊಟ್ಟಿದ್ದಾನೆ. ಅಚ್ಚರಿ ಎಂದರೆ, ಈ ಹೇಳಿಕೆ ನೀಡಿದ ಮರು ದಿನವೇ ಸಂತ್ರಸ್ತ ಮಹಿಳೆ ಪೊಲೀಸ್ ಠಾಣೆಗೆ ತೆರಳಿ, ತನ್ನನ್ನು ಬ್ಲ್ಯಾಕ್‌ಮೇಲ್ ಮಾಡಿದ್ದಾನೆಂಬ ದೂರು ಸಲ್ಲಿಕೆ ಮಾಡಿದ್ದರಿಂದ ಪ್ರಕರಣ ಗಂಭೀರ ತಿರುವು ಪಡೆದುಕೊಂಡಿದೆ.
ಮೂರು ವರ್ಷದ ಹಿಂದಿನ ವಿಡಿಯೋ: ರಾಸಲೀಲೆಯಲ್ಲಿ ತೊಡಗಿರುವ ವಿಡಿಯೋ ಈಗಿನದಲ್ಲ. ಅದು ಮೂರು ವರ್ಷಗಳ ಹಿಂದೆ ಸ್ವತಃ ನಾನೇ ಮಾಡಿಕೊಂಡಿದ್ದೆ. ಅದು ನನ್ನ ಮೊಬೈಲ್‌ನಲ್ಲಿಯೇ ಉಳಿಸಿಕೊಂಡಿತ್ತು. ವಿಡಿಯೋವನ್ನು ಕಾರಟಗಿಯ ನನ್ನ ಮನೆಯಲ್ಲಿ ಮಾಡಿಕೊಂಡಿದ್ದು, ಅವರು ವಿವಾಹಿತ ಮಹಿಳೆ. ಆದರೆ, ಈ ವಿಷಯ ಅವರ ಕುಟುಂಬದವರಿಗೆ ಗೊತ್ತಿಲ್ಲ ಎಂದು ಶಿಕ್ಷಕ ಲಿಖಿತವಾಗಿ ಹೇಳಿಕೆ ನೀಡಿದ್ದಾನೆ.
ನನ್ನ ಮೊಬೈಲ್ ಕಳ್ಳತನವಾಗಿತ್ತು: ಹದಿನೈದು ದಿನಗಳ ಹಿಂದೆ ನನ್ನ ಮೊಬೈಲ್ ಕಳವಾಗಿತ್ತು. ನನ್ನ ಮೊಬೈಲ್‌ನಲ್ಲಿ ಇರುವ ವಿಡಿಯೋವನ್ನು ಕೆಲವರು ದುರುದ್ದೇಷದಿಂದ ಹಣಕ್ಕಾಗಿ ಬೇಡಿಕೆಯಿಟ್ಟು ವೈರಲ್ ಮಾಡಿದ್ದಾರೆ. ತಿಂಗಳ ಹಿಂದೆ ಕಾರಟಗಿಯ ನಿವಾಸಿ ಮುಸ್ತಾಕ್ ಎನ್ನುವ ಹುಡುಗ ನನ್ನ ವಿಡಿಯೋ ವೈರಲ್ ಮಾಡಿದ್ದಾನೆ. ಈತನ ಜತೆಗೆ ರಾಮ್, ವಿನಯ್ ಎನ್ನುವವರು ಸೇರಿಕೊಂಡು ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡಿದ್ದಾರೆ ಎಂಬುದಾಗಿ ಶಿಕ್ಷಣ ಸಂಯೋಜಕರ ವರದಿಯಲ್ಲಿ ಉಲ್ಲೇಖೀಸಲಾಗಿದೆ.
ದೂರು ನೀಡದಿರುವುದು ಏಕೆ?: ಶಿಕ್ಷಕ ವಿಚಾರಣೆಯ ಸಂದರ್ಭ ಒಂದಕ್ಕೊಂದು ತಾಳೆಯಾಗದ ರೀತಿ ಉತ್ತರಿಸಿರುವುದು ಸ್ಪಷ್ಟವಾಗಿದ್ದು, ಪ್ರಕರಣದಿಂದ ಪಾರಾಗಲು ಪ್ರಯತ್ನಿಸಿರುವುದು ಬಯಲಾಗಿದೆ. ಕಳ್ಳತನವಾಗಿತ್ತು ಎಂಬ ಹೇಳಿಕೆ ನೀಡುವ ಜತೆಗೆ ವೈರಲ್ ಮಾಡಿದವರ ಹೆಸರನ್ನು ಹೇಳಿಕೆಯಲ್ಲಿ ಉಲ್ಲೇಖೀಸಿದ್ದು, ಅಚ್ಚರಿಗೆ ಕಾರಣವಾಗಿದೆ. ಶಿಕ್ಷಣ ಸಂಯೋಜಕರ ವಿಚಾರಣಾ ವರದಿ ಹಾಗೂ ಶಿಕ್ಷಕನ ಹೇಳಿಕೆ ಪ್ರತಿ “ಉದಯವಾಣಿ’ಗೆ ಲಭ್ಯವಾಗಿದ್ದು, ಇಲಾಖೆಯನ್ನು ಯಾಮಾರಿಸುವ ರೀತಿಯಲ್ಲಿ ಅಧಿಕಾರಿಗಳು ನಡೆದುಕೊಳ್ಳುತ್ತಿದ್ದಾರೆಂಬ ಆರೋಪ ಕೇಳಿಬಂದಿದೆ.
ಪ್ರಕರಣದಲ್ಲಿ ಬಿಇಒ ಪಾತ್ರ ಏನು?
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವುದಾದರೆ ಬಿಇಒ ಶರಣಪ್ಪ ವಟಗಲ್ ಸಿಂಗಾಪುರ ಗ್ರಾಮದ ಶಾಲೆಗೆ ಭೇಟಿ ನೀಡಬಹುದಿತ್ತು. ಆದರೆ, ಆ ನಿಟ್ಟಿನಲ್ಲಿ ಯಾವುದೇ ಆಸಕ್ತಿ ತೋರಿಲ್ಲ. ಎರಡು ವರ್ಷದ ಹಿಂದೆ ಆತನ ಪತ್ನಿ ದೂರು ಕೊಟ್ಟಾಗಲೂ ಡಿಡಿಪಿಐ ಪತ್ರ ಬಂದರೂ ವಿಚಾರಣೆ ನಡೆಸಿಲ್ಲ. ಈ ಪ್ರಕರಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಲೋಪ ಇದೆ ಎಂಬ ಆರೋಪವೂ ಕೇಳಿ ಬಂದಿದೆ.
ನಾವೇನ್ ಮಾಡಬೇಕ್ರಿ. ಅಲ್ಲಿಗೆ ಹೋದಾಗ ಗ್ರಾಮಸ್ಥರು ನಮಗೆ ಬಾಯಿಗೆ ಬಂದಂತೆ ಬೈದು ಛೀಮಾರಿ ಹಾಕಿದರು. ಇಂತಹ ಶಿಕ್ಷಕನನ್ನು ಇಲಾಖೆಯಲ್ಲಿ ಏಕೆ ಇಟ್ಟುಕೊಂಡಿದ್ದೀರಿ ಎಂದು ಪ್ರಶ್ನಿಸಿದರು. ನಮ್ಮ ಕೆಲಸ ಮುಗಿಸಿಕೊಂಡು ಮೌನವಾಗಿ ಬರಬೇಕಾಯಿತು.
-ಹೆಸರು ಹೇಳಲಿಚ್ಛಿಸದ ವಿಚಾರಣಾ ತಂಡದ ಅಧಿಕಾರಿ, ಸಿಂಧನೂರು
-ಯಮನಪ್ಪ ಪವಾರ