ಬೆಂಗಳೂರು: ತುಮಕೂರು ಜಿಲ್ಲೆಯ ಹೆಬ್ಬೂರು ಗ್ರಾಪಂ ಕಲ್ಕೆರೆ ಗ್ರಾಮದ ಅಭ್ಯರ್ಥಿಯೊಬ್ಬರು ಮತದಾರರಲ್ಲಿ ಮಾಡಿರುವ ಮನವಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ನಗೆಯ ಬುಗ್ಗೆ ಮೂಡಿಸಿದೆ.
ಚಪ್ಪಲಿ ಗುರುತಿನ ಅಭ್ಯರ್ಥಿ ಗಂಗಮ್ಮ ಎಚ್ ಎಂಬವರು ಮತದಾರರಿಗೆ ಮನವಿ ಮಾಡಿ ಹೊರಡಿಸಿರುವ ಪ್ರಕಟಣೆಯಲ್ಲಿ “ಗೆದ್ದರೆ ಮಾಡುವ ಕೆಲಸಗಳು’ ಮತ್ತು “ಸೋತರೆ ಮಾಡುವ ಕೆಲಸಗಳು’ ಎಂಬ ಪಟ್ಟಿ ನೀಡಿದ್ದು, ಇದೀಗ ವೈರಲ್ ಆಗಿದೆ. ಸಚಿವ ಸುರೇಶ್ ಕುಮಾರ್ ಆದಿಯಾಗಿ ಅನೇಕರು ಇದರ ಫೋಟೋ ಹಂಚಿಕೊಂಡಿದ್ದು, ಭಾರೀ ಸಂಖ್ಯೆಯ ಪ್ರತಿಕ್ರಿಯೆಗಳು ಬಂದಿವೆ.
ಅದರಲ್ಲಿ ಅಂಥದ್ದೇನಿದೆ ಎಂದು ಯೋಚಿಸುತ್ತಿದ್ದೀರಾ? ಎಲ್ಲ ಅಭ್ಯರ್ಥಿಗಳೂ ಗೆದ್ದರೆ ಮಾಡುವ ಕೆಲಸಗಳನ್ನು ಪಟ್ಟಿ ಮಾಡುವ ಮೂಲಕ ಮತದಾರರನ್ನು ಸೆಳೆಯಲು ಯತ್ನಿಸುವುದು ಸಾಮಾನ್ಯ. ಆದರೆ, ಗಂಗಮ್ಮ ಅವರು ತಾವು ಸೋತರೆ ಮಾಡುವ ಕೆಲಸಗಳನ್ನೂ ತಿಳಿಸುವ “ಪ್ರಯತ್ನ’ ಮಾಡಿದ್ದಾರೆ.
ಇದನ್ನೂ ಓದಿ:ರೈತರಿಗೆ ತೊಂದರೆಯಾಗುವ ಪ್ರದೇಶದಲ್ಲಿ ಕಸ್ತೂರಿ ರಂಗನ್ ವರದಿ ಜಾರಿ ಇಲ್ಲ: ಮುಖ್ಯಮಂತ್ರಿ
ಅನರ್ಹವಾಗಿ ಪಡೆದಿರುವ 25 ಕುಟುಂಬಗಳ ಪಡಿತರ ಚೀಟಿ ರದ್ದು ಮಾಡಿಸುತ್ತೇನೆ, ಸರ್ಕಾರಕ್ಕೆ ಸುಳ್ಳು ಮಾಹಿತಿ ಕೊಟ್ಟು ಹಣ ಪಡೆಯುತ್ತಿರುವ 40 ಕುಟುಂಬಗಳಿಗೆ ಹಣ ಬರದಂತೆ ತಡೆಯುತ್ತೇನೆ, ಸರ್ವೆ ನಂ.86ರಲ್ಲಿ ಹಳೇ ದಾಖಲೆಯಂತೆ ಸ್ಮಶಾನ ನಿರ್ಮಿಸುತ್ತೇನೆ. ಮೂಲ ದಾಖಲಾತಿ ಇಲ್ಲದೇ 11 ಕುಟುಂಬಗಳು ಒತ್ತುವರಿ ಮಾಡಿರುವ ಜಾಗ ತೆರವುಗೊಳಿಸಲು ಹೋರಾಟ ಮಾಡುತ್ತೇನೆ ಎಂದು ಉಲ್ಲೇಖೀಸಿದ್ದಾರೆ.