ಲಕ್ನೋ: ಪಾಕಿಸ್ತಾನದ ಸೀಮಾ ಹೈದರ್ ಎನ್ನುವ ನಾಲ್ಕು ಮಕ್ಕಳ ತಾಯಿ ಫೇಸ್‌ಬುಕ್‌ನಲ್ಲಿ ಪರಿಚಯವಾದ ನೋಯ್ಡಾ ಮೂಲದ ಸಚಿನ್‌ಗಾಗಿ ಅಕ್ರಮವಾಗಿ ಗಡಿ ದಾಟಿ ಭಾರತಕ್ಕೆ ಬಂದು ನೆಲೆಸಿರುವುದು ಗೊತ್ತೇ ಇದೆ. ಇದೀಗ ಅಂಥದ್ದೇ ಮತ್ತೊಂದು ಘಟನೆ ನಡೆದಿರುವುದು ವರದಿಯಾಗಿದೆ. ಈ ಬಾರಿ ಉತ್ತರ ಪ್ರದೇಶದ ಯುವಕನೊಬ್ಬ ಅಕ್ರಮವಾಗಿ ಪಾಕ್ ಗೆಳತಿಯನ್ನು ಭೇಟಿ ಆಗಲು ತೆರಳಿದ್ದಾನೆ.
ಏನಿದು ಘಟನೆ?: ಉತ್ತರ ಪ್ರದೇಶದ ಅಲಿಗಢದ ನಾಗ್ಲಾ ಖಟ್ಕರಿ ಗ್ರಾಮದ ನಿವಾಸಿ ಬಾದಲ್ ಬಾಬು(30) ಎನ್ನುವ ಯುವಕ ಫೇಸ್ ಬುಕ್‌ನಲ್ಲಿ ಪಾಕ್ ಮೂಲದ ಯುವತಿಯ ಜತೆ ಕಳೆದ ಕೆಲ ಸಮಯದಿಂದ ಚಾಟ್ ಮಾಡುತ್ತಿದ್ದ. ದಿನ ಕಳೆಯುತ್ತಿದ್ದಂತೆ ಇಬ್ಬರ ನಡುವೆ ಆತ್ಮೀಯತೆ ಹೆಚ್ಚಾಗಿ ಸ್ನೇಹ ಪ್ರೀತಿಯ ಸಂಬಂಧಕ್ಕೆ ತಿರುಗಿದೆ.
ತಾನು ಚಾಟ್ ಮಾಡುತ್ತಿರುವ ಪಾಕ್ ಮೂಲದ ಯುವತಿಯನ್ನು ಹೇಗಾದರೂ ಮಾಡಿ ಭೇಟಿ ಆಗಬೇಕೆನ್ನುವ ನಿಟ್ಟಿನಲ್ಲಿ ಬಾದಲ್ ಬಾಬು ಪಾಕ್‌ಗೆ ತೆರಳಲು ಉದ್ದೇಶಿಸುತ್ತಾನೆ ಆದರೆ ಆತನ ಬಳಿ ವೀಸಾ ಅಥವಾ ಪ್ರಯಾಣ ದಾಖಲೆಗಳಿರುವುದಿಲ್ಲ.
ಈ ಕಾರಣದಿಂದ ಎರಡು ಬಾರಿ ಪಾಕ್‌ಗೆ ಹೋಗುವ ಪ್ರಯತ್ನ ಮಾಡಿ ಬಾಬು ವಿಫಲನಾಗಿರುತ್ತಾನೆ. ಆದರೆ ಮೂರನೇ ಬಾರಿ ಅಕ್ರಮವಾಗಿ ಪಾಕ್ ಗಡಿಯೊಳಗೆ ಹೋಗಿ ಪೊಲೀಸರ ಅತಿಥಿಯಾಗಿದ್ದಾನೆ.
ಡಿಸೆಂಬರ್ 27 ರಂದು ಫೇಸ್ ಬುಕ್ ಗೆಳತಿಯನ್ನು ಭೇಟಿಯಾಗುವ ನಿಟ್ಟಿನಲ್ಲಿ ಅಕ್ರಮವಾಗಿ ಪಾಕ್ ಗಡಿಗೆ ನುಗ್ಗಿದ ಬಾಬು ಅವರನ್ನು ಪಾಕಿಸ್ತಾನದ ಪಂಜಾಬ್ ಪೊಲೀಸರು ಮಂಡಿ ಬಹೌದ್ದೀನ್ ನಗರದಲ್ಲಿ ಸಂಶಯಗೊಂಡು ಬಂಧಿಸಿದ್ದಾರೆ.
ಡಿಸೆಂಬರ್ 27 ರಂದು ಯಾವುದೇ ಪ್ರಯಾಣದ ದಾಖಲೆಗಳನ್ನು ಸಲ್ಲಿಸದ ಹಿನ್ನೆಲೆಯಲ್ಲಿ ಬಾಬು ಅವರನ್ನು ಬಂಧಿಸಲಾಗಿದೆ. ಆ ಬಳಿಕ ಪೊಲೀಸರು ವಿಚಾರಣೆ ನಡೆಸಿದ ನಂತರ ಬಾಬು ತಾನು ಯಾರು ಯಾಕೆ ಬಂದೆ, ಉದ್ದೇಶವೇನು ಎನ್ನುವುದರ ಬಗ್ಗೆ ವಿಚಾರಣೆಯಲ್ಲಿ ಸತ್ಯ ಬಾಯಿಬಿಟ್ಟಿದ್ದಾನೆ.
ಅದರಂತೆ ಪಾಕಿಸ್ತಾನದ ವಿದೇಶಿಯರ ಕಾಯಿದೆ, 1946 ರ ಸೆಕ್ಷನ್ 13 ಮತ್ತು 14 ರ ಅಡಿಯಲ್ಲಿ ಬಾಬು ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ನಂತರ ಬಾಬು ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಜನವರಿ 10ಕ್ಕೆ ಅವರನ್ನು ಮತ್ತೆ ಕೋರ್ಟ್‌ಗೆ ಹಾಜರುಪಡಿಸಲಾಗುತ್ತದೆ ಎಂದು ವರದಿ ತಿಳಿಸಿದೆ.
ಪಾಕಿಸ್ತಾನಕ್ಕೆ ತಲುಪಿದ ಬಳಿಕ ಬಾಬು ತಾನು ಇಷ್ಟಪಡುತ್ತಿದ್ದ ಫೇಸ್ ಬುಕ್ ಗೆಳತಿಯನ್ನು ಭೇಟಿ ಆಗಿದ್ದಾರೆ ಎನ್ನಲಾಗಿದೆ.
ಮನೆಯಿಂದ ದೂರವಿದ್ದ ಬಾಬು:
ಸೋಶಿಯಲ್ ಮೀಡಿಯಾದಲ್ಲಿ ಬಾಬು ಬಂಧನದ ಸುದ್ದಿ ವೈರಲ್ ಆಗುತ್ತಿದ್ದಂತೆ ಆತನ ಮನೆಯವರಿಗೆ ವಿಚಾರ ಗೊತ್ತಾಗಿದೆ.
ದೀಪಾವಳಿಗೆ 20 ದಿನಗಳ ಮೊದಲು ಬಾಬು ಮನೆಗೆ ಬಂದಿದ್ದ ಎಂದು ಅವರ ತಂದೆ ಕೃಪಾಲ್ ಸಿಂಗ್ ಹೇಳಿರುವುದಾಗಿ ʼನ್ಯೂಸ್ 18 ಹಿಂದಿʼ ವರದಿ ಮಾಡಿದೆ.
ನವೆಂಬರ್ 30 ರಂದು ವಿಡಿಯೋ ಕಾಲ್ ಮೂಲಕ ಕೊನೆಯದಾಗಿ ಮಗನ ಜೊತೆ ಕೃಪಾಲ್ ಮಾತನಾಡಿದ್ದರು. ಆಗ ಬಾಬು ನನ್ನ ಕೆಲಸ ಮುಗಿದಿದೆ ಎಂದು ಮನೆಯವರಿಗೆ ತಿಳಿಸಿದ್ದರು. ಆ ನಂತರ ಮನೆಯವರು ಆತನೊಂದಿಗೆ ಮಾತನಾಡಿರಲಿಲ್ಲ. ಇದೀಗ ಬಾಬು ಅವರನ್ನು ವಾಪಸ್ ಕರೆತರುವಂತೆ ಸರ್ಕಾರಕ್ಕೆ ಮನವಿ ಮಾಡುತ್ತಿದ್ದಾರೆ ಎಂದು ವರದಿ ತಿಳಿಸಿದೆ.
ಈ ಬಗ್ಗೆ ಪಾಕಿಸ್ತಾನ ಅಥವಾ ಭಾರತೀಯ ರಾಯಭಾರ ಕಚೇರಿಯಿಂದ ಇನ್ನೂ ಯಾವುದೇ ಮಾಹಿತಿ ಬಂದಿಲ್ಲ ಎಂದು ಅಲಿಗಢ ಎಸ್‌ಎಸ್‌ಪಿ ಸಂಜೀವ್ ಸುಮನ್ ʼನ್ಯೂಸ್ 18 ಹಿಂದಿʼಗೆ ತಿಳಿಸಿದ್ದಾರೆ. ಪೊಲೀಸರು ಕುಟುಂಬ ಸದಸ್ಯರೊಂದಿಗೆ ಮಾತುಕತೆ ನಡೆಸಿ ಮಾಹಿತಿ ಕಲೆಹಾಕುತ್ತಿದ್ದಾರೆ.