Advertisement

Viral fever: ರಾಜಧಾನಿಯಲ್ಲಿ ವೈರಲ್‌ ಜ್ವರದ ಹಾವಳಿ

12:40 PM Aug 24, 2023 | Team Udayavani |

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ವೈರಲ್‌ ಜ್ವರದ ಹಾವಳಿ ಹೆಚ್ಚಾಗಿದ್ದು, ಸಾಮಾನ್ಯಕ್ಕಿಂತ ಶೇ.3ರಷ್ಟು ಹೆಚ್ಚಿನ ಜನರು ಜ್ವರದಿಂದ ಬಳಲುತ್ತಿರುವುದನ್ನು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

Advertisement

ಬೆಂಗಳೂರಿನಲ್ಲಿ ಹೆಚ್ಚಿನ ವೈರಲ್‌ ಫಿವರ್‌ ಶೇ.3 ರಿಂದ 5ರಷ್ಟು ಪ್ರಮಾಣದಲ್ಲಿ ಏರಿಕೆಯಾಗಿದೆ. ಸೂಕ್ತ ಮುನ್ನೆಚ್ಚರಿಕೆ ಅಗತ್ಯವೆಂದು ತಜ್ಞ ವೈದ್ಯರು ಸಲಹೆ ನೀಡಿದ್ದಾರೆ. ಕಳೆದ 3-4 ವಾರಗಳಿಂದ ಬೆಂಗಳೂರಿನಲ್ಲಿ ವೈರಲ್‌ ಜ್ವರದ ಹಾವಳಿ ಹೆಚ್ಚಿದೆ. ವೈರಸ್‌ನಿಂದ ಹರಡುವ ವೈರಲ್‌ ಜ್ವರದ ಪ್ರಮಾಣ ಬೆಂಗಳೂರಿನಲ್ಲಿ ಜಾಸ್ತಿಯಾಗಿದೆ. ಜ್ವರದ ಪ್ರಮಾಣ ಮಿತಿ ಮೀರಿ ಹೋಗಿಲ್ಲ. ಹೀಗಾಗಿ ಈ ವೈರಸ್‌ ಬಗ್ಗೆ ನಿರ್ದಿಷ್ಟವಾಗಿ ಅಧ್ಯಯನ ನಡೆಸಿಲ್ಲ. ಇತ್ತೀಚೆಗೆ ವೈರಸ್‌ನಿಂದ ಹರಡುತ್ತಿರುವ ಜ್ವರವು ಬ್ಯಾಕ್ಟಿರಿಯಲ್‌ ಚಿಕಿತ್ಸೆಯಿಂದಲೂ ಕೆಲವೊಮ್ಮೆ ನಿಯಂತ್ರಣಕ್ಕೆ ಬರುತ್ತಿಲ್ಲ. ಇತ್ತೀಚೆಗೆ ಕಂಡು ಬಂದಿರುವ ವೈರಸ್‌ಗಳ ಬಗ್ಗೆ ನಿರ್ದಿಷ್ಟವಾಗಿ ಮಾಹಿತಿ ಇಲ್ಲ. ವೈರಾಲಜಿ ವಿಭಾಗದಿಂದ ಈ ಬಗ್ಗೆ ಅಧ್ಯಯನಗಳು ನಡೆಯುತ್ತಿವೆ ಎಂದು ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕಿ ಡಾ.ಬಿ.ಎಲ್‌.ಸುಜಾತ ರಾಥೋಡ್‌ ಉದಯವಾಣಿಗೆ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಜ್ವರ ಹೆಚ್ಚಳ ಏಕೆ?: ಹವಾಮಾನದಲ್ಲಿ ವೈಪರೀತ್ಯ, ಆಗಾಗ ಏಕಾಏಕಿ ಮಳೆ ಬೀಳುತ್ತಿರುವುದು, ಅತೀಯಾದ ಬಿಸಿಲು ಹಾಗೂ ರಾತ್ರಿ ಹೊತ್ತು ಚಳಿಯ ಅನುಭವ ಸೇರಿದಂತೆ ವಿವಿಧ ಬಗೆಯ ಹವಾಮಾನಗಳ ವೈಪರೀತ್ಯದಿಂದ ಒಂದು ಮಾದರಿಯ ವೈರಲ್‌ ಜ್ವರಗಳು ಸಂಭವಿಸುತ್ತಿವೆ. ಕಳೆದ ಒಂದು ತಿಂಗಳಿನಿಂದ ಮಳೆಯ ಪ್ರಮಾಣ ಕಡಿಮೆಯಾಗಿ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವ ಬೆನ್ನಲ್ಲೇ ಭೂಮಿಯ ಮೇಲಿನ ತೇವಾಂಶವೂ ಕಡಿಮೆಯಾಗುತ್ತದೆ.  ವಾತಾವರಣ ಶುಷ್ಕತೆಯಿಂದ ಕೂಡಿರುವುದರಿಂದ ಬ್ಯಾಕ್ಟಿರಿಯಾ, ವೈರಸ್‌ಗಳು ತೀವ್ರವಾಗಿ ಹರಡುತ್ತವೆ. ವೈರಲ್‌, ಕಾಲರಾ, ಟೈಫಾಯ್ಡ ಜ್ವರಗಳು, ಬಿಸಿನಿಲಿಂದ ತಲೆ ಸುತ್ತು ಸಮಸ್ಯೆಗಳು ಹೆಚ್ಚಾಗಿವೆ. ಬೆಂಗಳೂರಿನಲ್ಲಿ ಅತೀಯಾದ ಜ್ವರ ಬಂದು ಆಸ್ಪತ್ರೆಗೆ ದಾಖಲಾದವರಿಗೆ ಡೆಂಘಿ, ಕೋವಿಡ್‌ ಪರೀಕ್ಷೆ ನಡೆಸಲಾಗುತ್ತಿದೆ. ಈ ಪೈಕಿ ಡೆಂಘಿ ಜ್ವರ ಕೊಂಚ ಏರಿಕೆ ಕಂಡು ಬಂದರೂ ಕೋವಿಡ್‌ ಹೆಚ್ಚಳವಾಗಿಲ್ಲ. ಆಗಾಗ ಉತ್ಪತ್ತಿಯಾಗುವ ಹೊಸ ವೈರಸ್‌ಗಳು ಜ್ವರಕ್ಕೆ ಪ್ರಮುಖ ಕಾರಣವಾಗುತ್ತದೆ ಎಂಬುದು ತಜ್ಞ ವೈದ್ಯರ ಅಭಿಪ್ರಾಯ.

ಒಂದು ವಾರದಿಂದ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಕೆ.ಸಿ.ಜನರಲ್‌ ಆಸ್ಪತ್ರೆ, ವಿಕ್ಟೋರಿಯಾ ಆಸ್ಪತ್ರೆ, ವಾಣಿವಿಲಾಸ ಆಸ್ಪತ್ರೆ ಹೀಗೆ ಬೆಂಗಳೂರಿನ ಅನೇಕ ಆಸ್ಪತ್ರೆಗಳಿಗೆ ಜ್ವರಕ್ಕೆ ಚಿಕಿತ್ಸೆ ಪಡೆಯಲು ಬರುತ್ತಿರುವ ರೋಗಿಗಳ ಪ್ರಮಾಣ ಹೆಚ್ಚಾಗಿದೆ. ಸದ್ಯ ಜ್ವರ ನಿಯಂತ್ರಣಕ್ಕೆ ಬರಲು ಹಲವು ದಿನಗಳು ಹಿಡಿಯುತ್ತಿದೆ ಎನ್ನಲಾಗಿದೆ. ಇತ್ತೀಚೆಗೆ ಹೆಚ್ಚಳವಾಗಿರುವ ಜ್ವರದ ಜೊತೆಗೆ ಶೀತ, ಕೆಮ್ಮು, ಸುಸ್ತಿನ ಲಕ್ಷಣಗಳು ಕಂಡು ಬರುತ್ತಿದೆ. ಮಕ್ಕಳಿಂದ ಇಳಿವಯಸ್ಸಿನ ಎಲ್ಲಾ ವಯೋಮಾನದವರಿಗೂ ಬಾಧಿಸುವ ಸಾಂಕ್ರಾಮಿಕ ರೋಗಗಳು ಮತ್ತೆ ನಗರದಲ್ಲಿ ಪ್ರತ್ಯಕ್ಷವಾಗಿರುವುದು ಆತಂಕಕ್ಕೀಡು ಮಾಡಿದೆ.

ಮುಂಜಾಗ್ರತಾ ಕ್ರಮಗಳು:

  1. ಹೊರಗೆ ಓಡಾಡುವ ವೇಳೆ ಮಾಸ್ಕ್ ಧರಿಸಿದರೆ ಉತ್ತಮ
  2. ದಿನಕ್ಕೆ ಕನಿಷ್ಠ 2 ಲೀಟರ್‌ ನೀರು ಸೇವಿಸಿ
  3. ದೇಹಕ್ಕೆ ಚೈತನ್ಯ ತುಂಬುವಂತಹ ತರಕಾರಿ, ಹಣ್ಣಿನ ರಸ, ಪಾನೀಯ ಸೇವಿಸಿ
  4. ನಿಂಬೆಹಣ್ಣಿನ ಜ್ಯೂಸ್‌, ಎಳನೀರು, ಬೆಲ್ಲ ಮಿಶ್ರಿತ ನೀರು ಸೇವನೆ ಸೂಕ್ತ
  5. ತಾಜಾ ಆಹಾರಗಳನ್ನೇ ಹೆಚ್ಚಾಗಿ ಸೇವಿಸಿದರೆ ಉತ್ತಮ
  6. ಕೊಬ್ಬಿನಾಂಶ ಇರುವ ಆಹಾರದಿಂದ ದೂರ ಇರುವುದು ಒಳಿತು
Advertisement

ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಕಂಡು ಬರುತ್ತಿದ್ದ ಜ್ವರಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಜ್ವರ ಪ್ರಕರಣ ವರದಿಯಾಗುತ್ತಿವೆ. ಜ್ವರದ ಲಕ್ಷಣ ಕಂಡು ಬಂದರೆ ಕೂಡಲೇ ವೈದ್ಯರಲ್ಲಿ ಭೇಟಿ ನೀಡಿ ಪರೀಕ್ಷಿಸಿದರೆ ಉತ್ತಮ.-ಡಾ.ಬಿ.ಎಲ್‌.ಸುಜಾತ ರಾಥೋಡ್‌, ನಿರ್ದೇಶಕಿ, ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ

ವೈರಲ್‌ ಜ್ವರಗಳು ಇತ್ತೀಚೆಗೆ ಕೊಂಚ ಹೆಚ್ಚಳವಾಗಿವೆ. ಆದರೆ, ಜನ ಸಾಮಾನ್ಯರು ಆತಂಕ ಪಡುವ ಅಗತ್ಯವಿಲ್ಲ. ಬೆಂಗಳೂರಿನಲ್ಲಿ ಮಿತಿ ಮೀರಿದ ಜ್ವರದ ಪ್ರಕರಣ ಪತ್ತೆಯಾಗಿಲ್ಲ.-ಡಾ.ನವೀನ್‌ ಭಟ್‌, ನಿರ್ದೇಶಕ, ರಾಷ್ಟ್ರೀಯ ಆರೋಗ್ಯ ಅಭಿಯಾನ

Advertisement

Udayavani is now on Telegram. Click here to join our channel and stay updated with the latest news.

Next