Advertisement

Viral fever: ವೈರಲ್‌ ಫೀವರ್‌ಗೆ ಆಸ್ಪತ್ರೆಗಳು ಭರ್ತಿ!

02:58 PM Nov 07, 2023 | Team Udayavani |

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಒಂದಡೆ ಝೀಕಾ ವೈರಸ್‌ ತಂದಿರುವ ಆತಂಕದ ಜೊತೆಗೆ ಜನರಲ್ಲಿ ವಿಪರೀತ ವೈರಲ್‌ ಫೀವರ್‌ ಕಾಣಿಸಿಕೊಂಡಿದ್ದು, ಈಗಾಗಲೇ ಬರದಿಂದ ಕಂಗೆಟ್ಟಿರುವ ಜಿಲ್ಲೆಯ ಜನರಲ್ಲಿ ಜ್ವರದ ಪ್ರಕರಣಗಳು ಆತಂಕ ಸೃಷ್ಟಿಸಿವೆ.

Advertisement

ಹಲವು ದಿನಗಳಿಂದ ಜಿಲ್ಲೆಯ, ಕೆಮ್ಮು, ನೆಗಡಿ, ಗಂಟಲು ನೋವು ಮತ್ತಿತರ ಲಕ್ಷಣಗಳು ಇರುವ ವೈರಲ್‌ ಫೀವರ್‌ ಜ್ವರ ಹೆಚ್ಚಾಗಿ ಕಾಣಿಸಿಕೊಂಡು ಜನರನ್ನು ತೀವ್ರ ಹೈರಾಣ ಮಾಡುತ್ತಿದ್ದು ಪರಿಣಾಮ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು ರೋಗಿಗಳಿಂದ ತುಂಬಿ ತುಳುಕುತ್ತಿವೆ. ನಗರದ ಜಿಲ್ಲಾಸ್ಪತ್ರೆಯಲ್ಲಿ ಅಂತೂ ಕಾಲಿಡದಟ್ಟು ರೋಗಿಗಳ ದಟ್ಟಣೆ ಇದ್ದು ಜಿಲ್ಲೆಯ ವಿವಿಧ ತಾಲೂಕುಗಳಿಂದ ಸಾರ್ವಜನಿಕರು ಜ್ವರದಿಂದ ಬಳಲಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬರುತ್ತಿದ್ದು ರೋಗಿಗಳ ಜೊತೆ ಸಂಬಂಧಿಕರು ಆಸ್ಪತ್ರೆ ಕಡೆಗೆ ಬರುತ್ತಿರುವುದರಿಂದ ಆಸ್ಪತ್ರೆಗಳು ರೋಗಿಗಳಿಂದ ಭರ್ತಿಯಾಗಿವೆ. ಇತ್ತೀಚಿನ ದಿನಗಳಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಸಿಗುವ ಚಿಕಿತ್ಸೆ ದುಬಾರಿ ಆಗಿರುವ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆಗೆ ಬರುವರ ಸಂಖ್ಯೆ ಕೂಡ ಅಧಿಕವಾಗಿದೆ.

ಹಲವು ದಿನಗಳಿಂದ ಮಹಿಳೆಯರು, ಮಕ್ಕಳು, ವೃದ್ಧರು ಎನ್ನದೇ ಜನರಲ್ಲಿ ವೈರಲ್‌ ಫೀವರ್‌ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದರಿಂದ ಚಿಕಿತ್ಸೆಗೆ ಬರುವವರ ಸಂಖ್ಯೆ ಹೆಚ್ಚಾಗಿದೆ. ಮೂಲ ಸೌಕರ್ಯ ಕೊರತೆ: ಸರ್ಕಾರಿ ವೈದ್ಯಕೀಯ ಕಾಲೇಜಿನ ವ್ಯಾಪ್ತಿಗೆ ಒಳಪಟ್ಟರೂ ಜಿಲ್ಲಾಸ್ಪತ್ರೆಯ ಅವ್ಯವಸ್ಥೆ ಸರಿ ಹೋಗುವ ಲಕ್ಷಣಗಳು ಕಾಣುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರ ಹಾದಿಯಾಗಿ ಶಾಸಕರು, ಜಿಲ್ಲಾಧಿಕಾರಿಗಳು ಹಲವು ಬಾರಿ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದರೂ ಮೂಲ ಸೌಕರ್ಯಗಳ ಕೊರತೆ ನೀಗುತ್ತಿಲ್ಲ, ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ. ವೈದ್ಯರು ಹೊರಗೆ ಔಷಧ ಚೀಟಿ ಬರೆದು ಕೊಡುವುದು ನಿಂತಿಲ್ಲ. ಸಕಾಲದಲ್ಲಿ ವೈದ್ಯಕೀಯ ಸಿಬ್ಬಂದಿ ಬರಲ್ಲ ಎನ್ನುವ ಅಪವಾದಗಳು ಕೇಳಿ ಬರುತ್ತಲೇ ಇವೆ.

ಝೀಕಾಗೆ ಬೆದರಿ ರಕ್ತ ಪರೀಕ್ಷೆ ಗೆ ದುಂಬಾಲು: ರಾಜ್ಯದಲ್ಲೇ ಮೊದಲು ಜಿಲ್ಲೆಯ ತಲಕಾಯಬೆಟ್ಟದಲ್ಲಿ ಝೀಕಾ ವೈರಸ್‌ ಕಾಣಿಸಿಕೊಂಡಿರುವುದು ಜಿಲ್ಲೆಯ ಜನರನ್ನು ಬೆಚ್ಚಿಬೀಳಿಸುತ್ತಿದೆ. ಈಗಾಗಲೇ ವೈರಸ್‌ ಕಾಣಿಸಿಕೊಂಡ ಅಸುಪಾಸಿನ ಗ್ರಾಮಗಳಲ್ಲಿ ಆರೋಗ್ಯ ಇಲಾಖೆ ನಿಗಾ ವಹಿಸಿದೆ. ಗ್ರಾಮಸ್ಥರ ರಕ್ತದ ಮಾದರಿಗಳನ್ನು ಪರೀಕ್ಷೆಗೂ ಕಳುಹಿಸಿದೆ. ಇದರ ನಡುವೆ ಜಿಲ್ಲಾಸ್ಪತ್ರೆ ಸೇರಿದಂತೆ ಖಾಸಗಿ ಆಸ್ಪತ್ರೆಗಳಲ್ಲಿ ರಕ್ತ ಪರೀಕ್ಷೆಗೆ ಜನ ಮುಗಿ ಬಿದ್ದಿದ್ದಾರೆ. ವೈರಸ್‌ ಆತಂಕದಿಂದ ಜನ ಜ್ವರಕ್ಕೆ ಚಿಕಿತ್ಸೆ ಪಡೆಯುವುದರ ಜೊತೆಗೆ ಮುನ್ನೆಚ್ಚರಿಕೆ ಕ್ರಮವಾಗಿ ರಕ್ತ ಪರೀಕ್ಷೆಗೆ ಮುಂದಾಗಿರುವುದರಿಂದ ನಗರದ ಜಿಲ್ಲಾಸ್ಪತ್ರೆಯಲ್ಲಿ ರಕ್ತ ಪರೀಕ್ಷೆ ನಡೆಸುವ ಕೊಠಡಿಗಳ ಮುಂದೆ ಜನರ ನೂಕುನುಗ್ಗಲು ಏರ್ಪಟ್ಟಿತ್ತು.

ಹುಸಿಯಾದ ಶಾಸಕರ ಸೌಲಭ್ಯ ಭರವಸೆ!: ಇತ್ತೀಚೆಗೆ ಕ್ಷೇತ್ರದ ಶಾಸಕ ಪ್ರದೀಪ್‌ ಈಶ್ವರ್‌ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆಯ ಮೂಲ ಸೌಕರ್ಯಗಳನ್ನು ಖುದ್ದು ಪರಿಶೀಲಿಸಿದ್ದರು. ಅಲ್ಲದೇ ಭದ್ರತೆಗಾಗಿ ಗೃಹ ರಕ್ಷಕರನ್ನು ನೇಮಿಸುವ ಭರವಸೆಯು ನೀಡಿದ್ದರು. ಆದರೆ ಶಾಸಕರ ಭೇಟಿ ಬಳಿಕವೂ ಆಸ್ಪತ್ರೆಯ ಅವ್ಯವಸ್ಥೆಗಳು ಹಾಗೆ ಎದ್ದು ಕಾಣುತ್ತಿದ್ದವು. ಭದ್ರತೆಗೆ ಗೃಹ ರಕ್ಷಕರನ್ನು ನೇಮಿಸುವ ಶಾಸಕರ ಭರವಸೆ ಹುಸಿ ಆಗಿದ್ದು ಆಸ್ಪತ್ರೆಯಲ್ಲಿನ ಹೊರ ರೋಗಿಗಳ ನೋಂದಣಿ ಕೇಂದ್ರಗಳ ಮುಂದೆ ಎಂದಿನಂತೆ ನೂಕುನುಗ್ಗಲು ಎದ್ದು ಕಾಣುತ್ತಿತ್ತು.

Advertisement

ಸಹಜವಾಗಿ ವೈರಲ್‌ ಫೀವರ್‌ ಕಾಣಿಸಿಕೊಂಡಿದೆ. ಇದರಿಂದ ಯಾರೂ ಆತಂಕಗೊಳ್ಳಬೇಕಿಲ್ಲ. ಜಿಲ್ಲೆಯಲ್ಲಿ ಝೀಕಾ ವೈರಸ್‌ ಕಾಣಿಸಿಕೊಂಡಿರುವುದರಿಂದ ಕೆಲವರು ಆತಂಕಗೊಂಡು ಸಾಮಾನ್ಯ ಜ್ವರ ಕಾಣಿಸಿಕೊಂಡಿದ್ದರೂ ಆಸ್ಪತ್ರೆಗೆ ಬರುತ್ತಿದ್ದಾರೆ. ಝೀಕಾ ವೈರಸ್‌ ತಡೆಗೆ ಆರೋಗ್ಯ ಇಲಾಖೆ ನಿಗಾವಹಿಸಿ, ಜನರಲ್ಲಿ ಜಾಗೃತಿ ಮೂಡಿಸುತ್ತಿವೆ. -ಡಾ|ಎಸ್‌.ಎಸ್‌.ಮಹೇಶ್‌ ಕುಮಾರ್‌, ಜಿಲ್ಲಾ ಆರೋಗ್ಯಾಧಿಕಾರಿ.

-ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next