Advertisement

Viral fever: ನಿರ್ಲಕ್ಷ್ಯ ಬೇಡ ಸೂಕ್ತ ಚಿಕಿತ್ಸೆ ಪಡೆಯಿರಿ

09:27 PM Nov 24, 2023 | Team Udayavani |

ಚೀನಾದಲ್ಲಿ ಕಳೆದ ಕೆಲವು ವಾರಗಳಿಂದೀಚೆಗೆ ಮಕ್ಕಳನ್ನು ತೀವ್ರವಾಗಿ ಬಾಧಿಸುತ್ತಿರುವ ನ್ಯುಮೋನಿಯಾ ಮಾದರಿಯ ವೈರಲ್‌ ಜ್ವರ ಈಗ ದೇಶ ಮಾತ್ರವಲ್ಲದೆ ವಿಶ್ವಾದ್ಯಂತ ಒಂದಿಷ್ಟು ಆತಂಕ ಸೃಷ್ಟಿಸಿದೆ. ನಾಲ್ಕು ವರ್ಷಗಳ ಹಿಂದೆ ಇದೇ ಸಮಯದಲ್ಲಿ ಚೀನಾದಲ್ಲಿ ಕೊರೊನಾ ವೈರಸ್‌ ಕಾಣಿಸಿಕೊಂಡು ಆ ಬಳಿಕ ತಿಂಗಳುಗಳ ಅಂತರದಲ್ಲಿ ವಿಶ್ವವ್ಯಾಪಿಯಾಗಿ ಹರಡಿ ಜನಜೀವನವನ್ನು ಅಕ್ಷರಶಃ ತಲ್ಲಣಗೊಳಿಸಿತ್ತು. ಈ ಸಂದರ್ಭದಲ್ಲಿ ಚೀನಾ ಈ ಸಾಂಕ್ರಾಮಿಕದ ಬಗ್ಗೆ ಸಮರ್ಪಕ ಮಾಹಿತಿ ನೀಡದೆ ವಿಶ್ವ ಸಮುದಾಯದ ಹಾದಿ ತಪ್ಪಿಸಿತ್ತು. ಈಗ ಚೀನಾದ ಉತ್ತರ ಭಾಗದಲ್ಲಿ ಮಕ್ಕಳನ್ನು ವ್ಯಾಪಕವಾಗಿ ಬಾಧಿಸತೊಡಗಿರುವ ಸಾಂಕ್ರಾಮಿಕದ ಕುರಿತಂತೆ ಇತ್ತೀಚೆಗೆ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದ ಬಳಿಕವಷ್ಟೇ ಆ ದೇಶದ ಸರ್ಕಾರ ಈ ಸೋಂಕಿನ ನಿಯಂತ್ರಣಕ್ಕೆ ಕ್ರಮಗಳನ್ನು ಕೈಗೊಂಡಿದೆ.

Advertisement

ನ್ಯುಮೋನಿಯಾ ಮಾದರಿಯ ಈ ಸೋಂಕು ಮಕ್ಕಳು, ವಿವಿಧ ರೋಗಗಳಿಂದ ಅದರಲ್ಲೂ ಮುಖ್ಯವಾಗಿ ಅಸ್ತಮಾ, ಹೃದಯ ಸಂಬಂಧಿ ಸಮಸ್ಯೆಗಳಾದಿಯಾಗಿ ಉಸಿರಾಟ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಬಲುಬೇಗ ತಗಲುತ್ತಿದೆ. ಇದರಿಂದಾಗಿ ಸದ್ಯ ಚೀನಾ ಆಸ್ಪತ್ರೆಗಳು ಜ್ವರಪೀಡಿತ ಮಕ್ಕಳು, ವೃದ್ಧರಿಂದ ತುಂಬಿವೆ. ಕೋವಿಡ್‌ ನಿರ್ಬಂಧಗಳನ್ನು ಸಂಪೂರ್ಣವಾಗಿ ಹಿಂದೆಗೆದುಕೊಂಡುದದರಿಂದ ಈ ಪರಿಸ್ಥಿತಿ ಸೃಷ್ಟಿಯಾಗಿದೆ. ಕಳೆದ ಕೆಲವು ವಾರಗಳಿಂದೀಚೆಗೆ ವೈರಲ್‌ ಜ್ವರದ ತೀವ್ರತೆ ಕಡಿಮೆಯಾಗಿದ್ದು ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆಯೂ ಇಳಿಮುಖವಾಗಿದೆ ಎಂದು ಅಲ್ಲಿನ ಸರ್ಕಾರ ತಿಳಿಸಿದೆ.

ಆದರೆ ಚೀನಾದಲ್ಲಿನ ಒಟ್ಟಾರೆ ಬೆಳವಣಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಂದಿಷ್ಟು ಆತಂಕಕ್ಕೆ ಕಾರಣವಾಗಿದ್ದು ಎಲ್ಲ ರಾಷ್ಟ್ರಗಳು ಬೆಳವಣಿಗೆಗಳ ಮೇಲೆ ನಿಗಾ ಇಡುವುದರ ಜತೆಯಲ್ಲಿ ತಮ್ಮ ದೇಶದ ಜನರ ಆರೋಗ್ಯದ ಬಗೆಗೆ ವಿಶೇಷ ಕಾಳಜಿ ವಹಿಸಲಾರಂಭಿಸಿವೆ. ಇತ್ತ ಕೇಂದ್ರ ಸರ್ಕಾರ ಕೂಡ ದೇಶದಲ್ಲಿ ವೈರಲ್‌ ಜ್ವರ ಹರಡದಂತೆ ಕಟ್ಟೆಚ್ಚರ ವಹಿಸಿದೆಯಲ್ಲದೆ ಸಂಭಾವ್ಯ ಪರಿಸ್ಥಿತಿಯನ್ನು ಎದುರಿಸಲು ಸನ್ನದ್ಧವಾಗಿದೆ. ನ್ಯುಮೋನಿಯಾ, ಯಾವುದೇ ತೆರನಾದ ವೈರಲ್‌ ಜ್ವರ, ಹಕ್ಕಿಜ್ವರಕ್ಕೆ ಕಾರಣವಾಗಿರುವ ಎಚ್‌9ಎನ್‌2 ವೈರಸ್‌, ಉಸಿರಾಟ ಸಂಬಂಧಿ ಸಮಸ್ಯೆಗಳು ಕಾಣಿಸಿಕೊಂಡಲ್ಲಿ ಅಂಥ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸುವಂತೆ ಮತ್ತು ಈ ಎಲ್ಲ ಸಾಂಕ್ರಾಮಿಕ ಕಾಯಿಲೆಗಳ ಚಿಕಿತ್ಸೆಗೆ ಪರ್ಯಾಪ್ತ ವ್ಯವಸ್ಥೆಯನ್ನು ಮಾಡಿಕೊಳ್ಳುವಂತೆ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ.

ರಾಜ್ಯದಲ್ಲೂ ಈಗ ಮಳೆಗಾಲ ಮುಗಿದು ಚಳಿಗಾಲ ಆರಂಭಗೊಂಡಿರುವ ಹಿನ್ನೆಲೆಯಲ್ಲಿ ಹವಾಮಾನದಲ್ಲಿ ಒಂದಿಷ್ಟು ಬದಲಾವಣೆ ಸಹಜವಾಗಿದ್ದು ರಾಜ್ಯದ ಅಲ್ಲಲ್ಲಿ ಜನರನ್ನು ವೈರಲ್‌ ಜ್ವರ ಬಾಧಿಸತೊಡಗಿದೆ. ಮಕ್ಕಳು, ವಿವಿಧ ರೋಗಗಳಿಂದ ಬಳಲುತ್ತಿರುವವರು, ವೃದ್ಧರು, ಗರ್ಭಿಣಿಯರು, ಉಸಿರಾಟ ಮತ್ತು ಹೃದಯ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿರುವವರಲ್ಲಿ ವೈರಲ್‌ ಜ್ವರ ಕಾಣಿಸಿಕೊಂಡಲ್ಲಿ ತತ್‌ಕ್ಷಣವೇ ಆಸ್ಪತ್ರೆಗಳಿಗೆ ದಾಖಲಾಗಿ ಸೂಕ್ತ ಚಿಕಿತ್ಸೆಗಳನ್ನು ಪಡೆದುಕೊಳ್ಳಬೇಕು.ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡದೆ ಮತ್ತು ಅನವಶ್ಯಕ ಭೀತಿಗೊಳಗಾಗದೆ ಅಗತ್ಯ ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸಿಕೊಂಡು ಸೂಕ್ತ ಚಿಕಿತ್ಸೆಯನ್ನು ಪಡೆಯುವುದು ವೈಯಕ್ತಿಕ ಆರೋಗ್ಯ ಮತ್ತು ಸ್ವಸ್ಥ ಸಮಾಜದ ದೃಷ್ಟಿಯಿಂದ ಸೂಕ್ತ ಪರಿಹಾರಮಾರ್ಗವಾಗಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next