ಮಡಿಕೇರಿ: ವಿರಾಜಪೇಟೆ ತಾಲೂಕಿನ ಸಿದ್ದಾಪುರ ಘಟ್ಟದಳ ಸಮೀಪದ ಟಾಟಾ ಸಂಸ್ಥೆಯ ಮಾರ್ಗೊಲ್ಲಿ ಎಸ್ಟೇಟ್ ಹಾಗೂ ಪಾಲಿಬೆಟ್ಟದ ದುಬಾರೆ ಎಸ್ಟೇಟ್‌ನಲ್ಲಿ ಹುಲಿಯ ಹೆಜ್ಜೆ ಗುರುತುಗಳು ಪತ್ತೆಯಾಗಿವೆ.
ಈ ಎರಡೂ ಕಡೆ ಹುಲಿ ದಾಳಿಗೆ 2 ಹಸುಗಳು ಮೃತಪಟ್ಟಿವೆ. ಒಂದೇ ಹುಲಿಯಿಂದ ಹಸುಗಳ ಮೇಲೆ ದಾಳಿ ನಡೆದಿದೆಯೇ ಎನ್ನುವುದು ದೃಢಪಟ್ಟಿಲ್ಲ.
ಘಟ್ಟದಳ ಸಮೀಪದ ಟಾಟಾ ಸಂಸ್ಥೆಯ ಮಾರ್ಗೊಲ್ಲಿ ಎಸ್ಟೇಟ್‌ನ ಸಿಸಿಟಿವಿಯಲ್ಲಿ ತೋಟದಲ್ಲಿ ಹಸುವಿನ ಕಳೇಬರದ ಬಳಿ ಹುಲಿ ಇರುವ ದೃಶ್ಯ ಸೆರೆಯಾಗಿದೆ. ಕೆಲವು ದಿನಗಳ ಹಿಂದೆಯಷ್ಟೇ ಎಸ್ಟೇಟ್‌ನಲ್ಲಿ ಹುಲಿಯ ಹೆಜ್ಜೆ ಗುರುತುಗಳು ಪತ್ತೆಯಾಗಿ, ಸಿಸಿ ಕೆಮರಾ ಅಳವಡಿಸಲಾಗಿತ್ತು.
ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯದಲ್ಲಿ ಕಂಡಿರುವಂತೆ ಹುಲಿ ದಷ್ಟಪುಷ್ಟವಾಗಿದ್ದು, ಸುಮಾರು 8 ವರ್ಷದ್ದೆಂದು ಅಂದಾಜಿಸ ಲಾಗಿದೆ. ಸ್ಥಳಕ್ಕೆ ತಿತಿಮತಿ ವಲಯ ಅರಣ್ಯಾಧಿಕಾರಿ ಅಶೋಕ್, ಉಪವಲಯ ಅರಣ್ಯಾಧಿಕಾರಿ ಶ್ರೀನಿವಾಸ್ ಹಾಗೂ ಸಿಬಂದಿ ಭೇಟಿ ನೀಡಿದ್ದು, ಶೋಧ ಆರಂಭಿಸುವುದಾಗಿ ತಿಳಿಸಿದ್ದಾರೆ.
ಪಾಲಿಬೆಟ್ಟದಲ್ಲೂ ಆತಂಕ
ಬುಧವಾರ ರಾತ್ರಿ ಪಾಲಿಬೆಟ್ಟದ ದುಬಾರೆ ಎಸ್ಟೇಟ್‌ನಲ್ಲಿ ಹುಲಿ ದಾಳಿಗೆ ಹಸುವೊಂದು ಮೃತಪಟ್ಟಿದ್ದು, ಹುಲಿಯ ಹೆಜ್ಜೆ ಗುರುತುಗಳು ಪತ್ತೆಯಾಗಿವೆ. ಅರಣ್ಯ ಇಲಾಖೆ ಆ ಸ್ಥಳದಲ್ಲಿ ಕೆಮರಾ ಅಳವಡಿಸಿದ್ದು, ಶುಕ್ರವಾರದ ವರೆಗೆ ಹುಲಿಯ ಚಲನವಲನದ ಸುಳಿವು ದೊರಕಿಲ್ಲ. ಹುಲಿ ಸಂಚಾರ ಇದೆ ಎನ್ನುವ ಭೀತಿಯಿಂದಾಗಿ ಕಾರ್ಮಿಕರು ಕೆಲಸಕ್ಕೆ ಹೋಗುತ್ತಿಲ್ಲ, ಗ್ರಾಮಸ್ಥರು ಕೂಡ ಆತಂಕಕ್ಕೆ ಒಳಗಾಗಿದ್ದಾರೆ.