ಮಡಿಕೇರಿ: ಗಾಂಜಾ ಮತ್ತು ಎಂಡಿಎಂಎ ಮಾದಕ ಪದಾರ್ಥವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಐವರು ಆರೋಪಿಗಳನ್ನು ವಿರಾಜಪೇಟೆ ಪೊಲೀಸರು ಬಂಧಿಸಿದ್ದಾರೆ.
ವೀರಾಜಪೇಟೆ ಅಮ್ಮತ್ತಿ ಗ್ರಾಮದ ನಿವಾಸಿ ಕುಟ್ಟಂಡ ಬೋಪಣ್ಣ (42) ಪಿರಿಯಪಟ್ಟಣ ತಾಲೂಕು ಪಂಚವಳ್ಳಿ ನಿವಾಸಿ ಜಬಿವುಲ್ಲಾ ಖಾನ್ (41), ಕಡಂಗ ಅರಪಟ್ಟು ಗ್ರಾಮದ ನಿವಾಸಿ ಕೆ.ಎಸ್.ಫರೀದ್ (22), ಕೊಟ್ಟಮುಡಿ ಗ್ರಾಮದ ನಿವಾಸಿ ಎಂ.ಕೆ.ಹೈದರ್ ಆಲಿ ಅಲಿಯಾಸ್ ಆಲಿಶಾಜ್ (24) ಹಾಗೂ ಅಮ್ಮತ್ತಿ ಕಾವಾಡಿ ಗ್ರಾಮದ ನಿವಾಸಿ ಕೆ.ವಿ.ಸುನೀಲ್ (26) ಬಂಧಿತರು.
ಬಂಧಿತರಿಂದ 760 ಗ್ರಾಂ. ಗಾಂಜಾ ಮತ್ತು 15.5 ಗ್ರಾಂ. ಮಾದಕ ಪದಾರ್ಥ, 3,700 ರೂ. ನಗದು, ಅಕ್ರಮಕ್ಕೆ ಬಳಸಿದ್ದ 5 ಮೊಬೈಲ್ ಫೋನ್, ಎರಡು ಬೈಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ.
ಮಾದಕ ವಸ್ತುವಿನ ಒಟ್ಟು ಮೌಲ್ಯ ರೂ. 46,500, ಗಾಂಜಾ ಮೌಲ್ಯ 20 ಸಾವಿರ ರೂ. ಮತ್ತು ಬೈಕ್‌ಗಳ ಒಟ್ಟು ಮೌಲ್ಯ 1ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ವಿರಾಜಪೇಟೆಯ ಸುಂಕದಕಟ್ಟೆ ಬಳಿ ಆರೋಪಿಗಳು ಮಾದಕ ವಸ್ತುಗಳ ಮಾರಾಟಕ್ಕೆ ತಂತ್ರ ರೂಪಿಸುತ್ತಿದ್ದಾಗ ಪೊಲೀಸರು ದಾಳಿ ನಡೆಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಯಾಪ್ಟನ್ ಎಂ.ಎ. ಅಯ್ಯಪ್ಪ ಹಾಗೂ ವಿರಾಜಪೇಟೆ ಉಪ ವಿಭಾಗದ ಉಪಅಧೀಕ್ಷಕ ನಿರಂಜನ್ ರಾಜೇ ಅರಸ್ ಅವರ ಮಾರ್ಗದರ್ಶನದಲ್ಲಿ ವಿರಾಜಪೇಟೆ ವೃತ್ತ ನಿರೀಕ್ಷಕ ಶಿವರುದ್ರ ಅವರ ನಿರ್ದೇಶನದ ಮೇರೆಗೆ ನಗರ ಠಾಣೆಯ ಠಾಣಾಧಿಕಾರಿ ಸಿ.ವಿ.ಶ್ರೀಧರ, ಎಎಸ್‌ಐಗಳಾದ ಬಿ.ಎಂ.ಮೊಹಮ್ಮದ್, ಎಂ.ಎಂ.ಮೊಹಮ್ಮದ್, ಸಿಬಂದಿಗಳಾದ ಬಿ.ವಿ. ಸತೀಶ್, ಮಧು, ಸುಬ್ರಮಣಿ, ರವಿ, ಮುಸ್ತಫ, ಗಿರೀಶ್, ಕಿರಣ್ ಕುಮಾರ್, ರಜನ್ ಕುಮಾರ್, ಮಹಂತೇಶ್, ಸೆಟ್ಟಪ್ಪ ಭಾಗೇವಾಡಿ, ಸಂತೋಷ್ ದೊಡ್ಡಮನಿ, ಸಂಗಮೇಶ ಶಿವಪುರ, ಕೆ.ಎಂ.ಧರ್ಮ, ಸಾಗರ್, ಚಾಲಕರಾದ ರಮೇಶ್ ಹಾಗೂ ಅಭಿಷೇಕ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.