ಆಳಂದ: ತಾಲೂಕಿನ ಕೊರಳ್ಳಿ ಗ್ರಾಮದಲ್ಲಿ ಶುಕ್ರವಾರ ನಡೆದ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಪುರವಂತರ ಸಾಂಪ್ರದಾಯಿಕ ಕುಣಿತ, ವಾದ್ಯ, ವೈಭವಗಳೊಂದಿಗೆ ಪ್ರಮುಖ ರಸ್ತೆಗಳ ಮೂಲಕ ಪಲ್ಲಕ್ಕಿ ಉತ್ಸವ, ಸಾಗಿದ ಬಳಿಕ ದೇವಸ್ಥಾನ ಹತ್ತಿರ ಭಕ್ತಾದಿಗಳು ಪ್ರಜ್ವಲಿಸಿದ ಅಗ್ನಿ ಪೂಜಿಸಿ ಹಾಯ್ದರು.
ವಿಶೇಷವಾಗಿ ಗ್ರಾಮದಿಂದ ಮದುವೆಯಾಗಿ ಪರಊರಿಗೆ ಹೋದ ಮಹಿಳೆಯರು ಗ್ರಾಮದ ಜಾತ್ರೆಯಲ್ಲಿ ಕುಟುಂಬದ ಸಮೇತವಾಗಿ ಪಾಲ್ಗೊಂಡು ದೇವರ ದರ್ಶನ ಪಡೆದು ಅಗ್ನಿಯನ್ನು ಹಾಯುವ ವಿಶೇಷ ಸಂಪ್ರದಾಯ ಈ ಬಾರಿಯೂ ನಡೆಯಿತು.
ನೆರೆಯ ಭೂಸನೂರ, ಸಂಗೋಳಗಿ, ಧುತ್ತರಗಾಂವ, ಅನೇಕ ಗ್ರಾಮಗಳ ಗ್ರಾಮಸ್ಥರು ಸೇರಿ ಗ್ರಾಮಸ್ಥರೆಯಲ್ಲರು ಜಾತ್ರೆಯಲ್ಲಿ ಪಾಲ್ಗೊಂಡು ವೀರಭದ್ರೇಶ್ವರರ ದರ್ಶನ ಪಡೆದರು. ಆರಂಭದಲ್ಲಿ ವೀರಭದ್ರೇಶ್ವರ ಮೂರ್ತಿಯನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ 11 ಜನ ಪುರವಂತರ ಕುಣಿತ ಹಾಗೂ ಗ್ರಾಮದ ಯುವ ಪುರವಂತನು ಉದ್ದನೆ ಶಸ್ತ್ರವನ್ನು ಚುಚಿಕೊಂಡು ಅಗ್ನಿ ಹಾಯುವ ಮೂಲಕ ದೇವರ ಮೂರ್ತಿಯ ವರೆಗೆ ಶಸ್ತ್ರವನ್ನು ಎಳೆಯುತ್ತ ಬಂದು ಗಮನ ಸೆಳೆದರು.
ಧುತ್ತರಗಾಂವದ ಸೂರ್ಯಕಾಂತ ಶಾಸ್ತ್ರಿಗಳು 11 ದಿನಗಳ ಸಾಗಿಬಂದ ವೀರಭದ್ರೇಶ್ವರ ಪುರಾಣವನ್ನು ಮಹಾ ಮಂಗಲಗೊಳಿಸಿದರು. ಕಲಾವಿದ ಬಸವರಾಜ ಆಳಂದ ತಬಲಾ ಸಾತ್ ನೀಡಿದರು.
ಕೃಷಿಕ ಸಮಾಜದ ತಾಲೂಕು ಅಧ್ಯಕ್ಷ ಗುರುಶರಣ ಪಾಟೀಲ ಕೊರಳ್ಳಿ, ಬಿಜೆಪಿ ಮಂಡಲ ಅಧ್ಯಕ್ಷ ಆನಂದರಾವ್ ಪಾಟೀಲ, ಗ್ರಾಪಂ ಅಧ್ಯಕ್ಷ ಸುಭಾಷ ರಾಠೊಡ, ಜಯಕರ್ನಾಟಕ ಜಿಲ್ಲಾ ಅಧ್ಯಕ್ಷ ಮಲ್ಲಿಕಾರ್ಜುನ ಸಾರವಾಡ, ದಯಾನಂದ ಚೌಲ್, ಮಹೇಶ ಉಡಗಿ, ಸಿದ್ಧಣ್ಣಾ ಬರಮದಿ, ಚಂದ್ರಯ್ನಾ ಸ್ವಾಮಿ, ಎಲ್.ಎಸ್.ಬೀದಿ, ಚಂದ್ರಕಾಂತ ಮಂಠಾಳೆ, ಡಾ| ಶಿವಶರಣಪ್ಪ ಮದಗುಣಕಿ, ರಮೇಶ ಉಡಗಿ, ಚಂದ್ರಶೇಖರ ಪಾಟೀಲ, ಷಣ್ಮಖಯ್ಯ ಸ್ವಾಮಿ, ಮಡಿಯವಾಳ ಸ್ವಾಮಿ, ಸಂತೋಷ ಹಾಗೂ ನೂರಾರು ಭಕ್ತರು ಪಾಲ್ಗೊಂಡಿದ್ದರು.