Advertisement

ವಿ.ಐ.ಪಿ. ಕಾಲಂ : ನಾನು ಎಂದೂ ತೃಪ್ತನಲ್ಲ

03:25 AM Feb 03, 2017 | Karthik A |

ಪ್ರತೀ ಪಂದ್ಯ ಆಡಲು ಇಳಿಯುವಾಗ ಗೆಲ್ಲುವ ಆತ್ಮವಿಶ್ವಾಸದ ಜತೆಗೇ ಸಣ್ಣದೊಂದು ನರ್ವಸ್‌ ಟೆನ್ಶನ್‌ ನನ್ನನ್ನು ಕಾಡುತ್ತಿರುತ್ತದೆ. ನನ್ನ ಪ್ರಕಾರ ದೊಡ್ಡ ಸಾಧನೆ ಸಿದ್ಧಿಸಲು ಇವೆರಡೂ ಬೇಕು. ಟೆನಿಸ್‌ ಪ್ರಿಯರು ನನ್ನ ಬಗ್ಗೆ ಅಭಿಮಾನ ಪಡುತ್ತಾರೆ, ನಾನು ಅವರನ್ನು ರೋಮಾಂಚನಗೊಳಿಸುತ್ತೇನೆ- ಈ ಪ್ರಕ್ರಿಯೆ ನನ್ನಲ್ಲಿ ಇನ್ನಷ್ಟು ಸ್ಫೂರ್ತಿಯನ್ನು ತುಂಬುತ್ತದೆ. ಹೀಗಾಗಿಯೇ ಆದರೆ – ಗೀದರೆಗಳೊಂದೂ ಇಲ್ಲದೆ ಈ ವಯಸ್ಸಿನಲ್ಲಿಯೂ ಅತ್ಯಂತ ಶ್ರೇಷ್ಠ ಟೆನಿಸ್‌ ಆಡುವುದು ನನ್ನಿಂದ ಸಾಧ್ಯವಾಗಿದೆ.

Advertisement

ಆಸ್ಟ್ರೇಲಿಯನ್‌ ಓಪನ್‌ ಗೆದ್ದು, ಹದಿನೆಂಟನೆಯ ಗ್ರ್ಯಾನ್‌ಸ್ಲಾಮ್‌ ಕಿರೀಟ ಧರಿಸಿದಾಗ ನನಗೂ ಆಟದ ಅಂಗಣದಲ್ಲಿನ ನನ್ನ ಶ್ರೇಷ್ಠ ಎದುರಾಳಿಗಳಿಗೂ ನಡುವಣ ಅಂತರ ಇನ್ನಷ್ಟು ಹೆಚ್ಚಿತು, ಫೆಡರರ್‌ ಈ ರೇಸ್‌ನಲ್ಲಿ ಬಹಳ ಮುಂದೆ ಹೋಗಿಬಿಟ್ಟ ಎಂದು ಭಾವಿಸುವವರಿದ್ದಾರೆ. ಪ್ರಾಮಾಣಿಕವಾಗಿ ಹೇಳುವುದಿದ್ದರೆ ಅದು ಈ ಕ್ರೀಡೆಯ ಒಂದು ಬಹಳ ಸಣ್ಣ ಭಾಗ. ನನ್ನ ಪಾಲಿಗೆ ಮುಖ್ಯವಾದದ್ದು ನಾನು ನನ್ನ ಆಟದ ಲಯವನ್ನು ಮರಳಿ ಕಂಡುಕೊಂಡದ್ದು, ನಡಾಲ್‌ ಜತೆಗೆ ಸುದೀರ್ಘ‌ ಆಟ ಆಡಿದ್ದೇ ಮುಖ್ಯ. ಅದೂ ಆಸ್ಟ್ರೇಲಿಯದಲ್ಲಿ; ಇಲ್ಲಿನ ಜನರ ಬೆಂಬಲ, ಪ್ರೋತ್ಸಾಹ ಸದಾ ನನ್ನ ನೆನಪಿನಲ್ಲಿ ಇರುತ್ತದೆ. ಸುದೀರ್ಘ‌ ಐದು ವರ್ಷಗಳ ಬಳಿಕ, ನನ್ನ ಈ ವಯಸ್ಸಿನಲ್ಲಿ ಒಂದು ಗ್ರ್ಯಾನ್‌ಸ್ಲಾಮ್‌ ಗೆಲ್ಲುವುದು ಎಷ್ಟು ಸುಂದರವಾದ ಅನುಭವ ಗೊತ್ತಾ!

ಆಸ್ಟ್ರೇಲಿಯದಲ್ಲಿ ಆಸ್ಟ್ರೇಲಿಯನ್‌ ಓಪನ್‌ ಗೆಲುವು ಎಂದಲ್ಲ, ಈ ಸಾಧನೆ ಎಲ್ಲೇ ದಾಖಲಾಗಿದ್ದರೂ ನನಗೆ ಇಷ್ಟೇ ಸಂತೋಷವಾಗುತ್ತಿತ್ತು. ಎಂದೂ ನಾನು ಈ ಗ್ರ್ಯಾನ್‌ಸ್ಲಾಮ್‌ ಕೂಟವನ್ನು ಮಿಸ್‌ ಮಾಡಿಕೊಂಡಿಲ್ಲ. ಹಾಗೆಯೇ ಫ್ರೆಂಚ್‌ ಓಪನ್‌ ಕೂಡ. ಕಳೆದ ವರ್ಷ ಯುಎಸ್‌ ಓಪನ್‌ನಲ್ಲಿ ಆಡುವುದನ್ನು ತಪ್ಪಿಸಿಕೊಂಡಿದ್ದೆ. ಆದರೆ ಈ ಕೂಟವನ್ನು ಎಂದೂ ತಪ್ಪಿಸಿಕೊಂಡಿಲ್ಲ. ನನ್ನ ಯಶಸ್ಸು ಹುಟ್ಟಿ ಬೆಳೆದದ್ದು ಇಲ್ಲೇ. 1999ರಲ್ಲಿ ಇದೇ ಕೂಟದ ಕ್ವಾರ್ಟರ್‌ ಫೈನಲ್ಸ್‌ ಆಡಿದ್ದೆ, 1998ರಲ್ಲಿ ಜ್ಯೂನಿಯರ್‌ ಟೂರ್ನಿಯಲ್ಲಿ ಆಡಿದ್ದೆ. ಇಲ್ಲಿಗೆ ಬರುವುದನ್ನು, ಇಲ್ಲಿ ಆಡುವುದನ್ನು ನಾನು ತುಂಬಾ ಇಷ್ಟಪಡುತ್ತೇನೆ. ಇಲ್ಲಿ ಗೆದ್ದ ಬಳಿಕ ಸ್ವದೇಶಕ್ಕೆ ಹೋಗುವುದು ಒಂದು ಸಮಸ್ಯೆಯೇ ಅನ್ನಿಸುವುದಿಲ್ಲ. ಆದರೆ, ಸೋತು ಮರಳುವುದು ಒಂದು ಭೀಭತ್ಸ ಅನುಭವ!

ರಫಾನಂಥ ಎದುರಾಳಿ ಬೇಕು
ರಫೆಲ್‌ ನಡಾಲ್‌ ನನ್ನ ಅತಿದೊಡ್ಡ, ಅತಿ ಕಠಿನ ಎದುರಾಳಿ ಅನ್ನುತ್ತಾರೆ. ನೊವಾಕ್‌ ಜೊಕೋವಿಕ್‌ ಕೂಡ ನನಗೆ ತೀವ್ರ ಸ್ಪರ್ಧೆ ಒಡ್ಡಿದ್ದಾರೆ. ರ್ಯಾಡಿಕ್‌ ಮತ್ತು ಹೆವಿಟ್‌ ಕೂಡ ಹಾಗೆಯೇ. ಆದರೆ, ನಿಜ ಹೇಳಬೇಕು ಅಂದರೆ, ಯಾರಿಗೂ ನಾನು ಮಣಿಯಲಾರೆ. ಏನೇ ಹೇಳಿ, ನಡಾಲ್‌ ಎದುರಾಳಿಯಾಗಿ ಸಿಗದೇ ಇದ್ದರೆ ನನ್ನಿಂದ ಇಷ್ಟು ಶ್ರೇಷ್ಠ ಮಟ್ಟದ ಟೆನಿಸ್‌ ಹೊರಹೊಮ್ಮುತ್ತಿರಲಿಲ್ಲ. ನನ್ನ ಟೆನಿಸ್‌ ಕೆರಿಯರ್‌ ಅರಳುವುದರಲ್ಲಿ ಆತನ ಪಾತ್ರ ಬಹಳ ಮುಖ್ಯ. ನಡಾಲ್‌ ಎದುರು ಆಡುವುದು ನಾನು ಎದುರಿಸುವ ಭಾರೀ ಸವಾಲುಗಳಲ್ಲಿ ಒಂದು. ಗ್ರ್ಯಾನ್‌ಸ್ಲಾಮ್‌ ಫೈನಲ್‌ ಒಂದರಲ್ಲಿ ಆತನನ್ನು ಸೋಲಿಸದೆ ಬಹಳ ಬಹಳ ಸಮಯವಾಗಿತ್ತು, ಹೀಗಾಗಿ ಈ ಗೆಲುವು ತುಂಬಾ ಸಿಹಿಯಾದದ್ದು. ನಮಗಿಬ್ಬರಿಗೂ ಇದು ಪುನರಾಗಮನ ಪಂದ್ಯವಾಗಿತ್ತು; ಇಬ್ಬರಲ್ಲಿ ಯಾರೇ ಗೆದ್ದಿದ್ದರೂ ಅವರವರ ಪಾಲಿಗೆ ಅದು ಸಂಭ್ರಮವೇ ಆಗಿರುತ್ತಿತ್ತು ಎಂಬುದರಲ್ಲಿ ಸಂಶಯವಿಲ್ಲ. ಆದರೆ, ಟೆನಿಸ್‌ನಲ್ಲಿ ಡ್ರಾ ಎಂಬುದು ಇಲ್ಲವಲ್ಲ!

ಕ್ರೀಡೆಯ ಗೆಲುವು
ಮಿಲಿಯಗಟ್ಟಲೆ ಮಂದಿ ಈ ಮ್ಯಾಚನ್ನು ನೋಡಿರಬಹುದು. ನಡಾಲ್‌, ವೀನಸ್‌ ವಿಲಿಯಮ್ಸ್‌, ಸೆರೆನಾ ವಿಲಿಯಮ್ಸ್‌ -ನಮಗೆಲ್ಲರಿಗೂ ಈ ಟೂರ್ನಿಯೇ ವಿಶೇಷವಾದುದಾಗಿತ್ತು. ಯಾರೇ ಗೆಲ್ಲಲಿ, ಯಾರೇ ಸೋಲಲಿ; ಅಂತಿಮವಾಗಿ ಗೆಲುವು ಕ್ರೀಡೆಯದ್ದು. ಕ್ರೀಡೆ ಎಂಬುದು ಒಂದು ಭಾರೀ ಶಕ್ತಿಯುತವಾದ ಸಂಗತಿ, ಅದು ಜನರನ್ನು ರೋಮಾಂಚನಗೊಳಿಸುತ್ತದೆ, ಸಂತೋಷಪಡಿಸುತ್ತದೆ. ಪಂದ್ಯದ ಫ‌ಲಿತಾಂಶ ಏನೇ ಆಗಿರಲಿ, ಮುಂಚೂಣಿಯಲ್ಲಿ ಮತ್ತು ಕೇಂದ್ರದಲ್ಲಿ ಸದಾ ಇರುವುದು ಒಂದೇ – ಅದು ಕ್ರೀಡೆ.

Advertisement

ಈ ವಯಸ್ಸಿನಲ್ಲಿ ಪುನರಾಗಮನ, ಗ್ರ್ಯಾನ್‌ಸ್ಲಾಮ್‌ ಗೆಲುವಿನ ಬಗ್ಗೆ ಅನೇಕರು ಅಚ್ಚರಿ ವ್ಯಕ್ತಪಡಿಸುತ್ತಾರೆ. ಆ ಬಗ್ಗೆ ಆಶ್ಚರ್ಯಗೊಳ್ಳದ ವ್ಯಕ್ತಿ ಪ್ರಾಯಃ ನಾನೊಬ್ಬನೇ ಇರಬೇಕು. ನಾನು ಆರೋಗ್ಯವಾಗಿದ್ದೇನೆ, ಸ್ಫೂರ್ತಿವಂತನಾಗಿದ್ದೇನೆ. ನನ್ನಲ್ಲಿ ಎಷ್ಟು ಕಾಲ ಟೆನಿಸ್‌ ಕಾರಂಜಿ ಚಿಮ್ಮುತ್ತಿರುತ್ತದೆಯೋ ಅಷ್ಟು ಕಾಲ ಆಡುತ್ತೇನೆ. ಪ್ರತೀ ಪಂದ್ಯದಲ್ಲೂ ‘ನಾನಿದನ್ನು ಗೆಲ್ಲುತ್ತೇನೆ’ ಎಂದುಕೊಂಡೇ ಆಡಲು ಇಳಿಯುವುದು ನನ್ನ ಗುಣ. ಅಂಥ ವಿಶ್ವಾಸವೊಂದು ಇಲ್ಲದಿದ್ದರೆ ಶ್ರೇಷ್ಠ ಆಟವನ್ನು ಆಡಲಾಗುವುದಿಲ್ಲ. ಆತ್ಮವಿಶ್ವಾಸ ಇಲ್ಲದೆ ಟೆನಿಸ್‌ ಕೋರ್ಟ್‌ ಮಾತ್ರ ಅಲ್ಲ; ಯಾವುದೇ ಕೆಲಸಕ್ಕೆ ಇಳಿಯುವುದರಲ್ಲಿ ಅರ್ಥವೇ ಇಲ್ಲ. 

ನಾನು ಎಂದೂ ತೃಪ್ತನಲ್ಲ
ನಾನು ಎಂದೂ ಯಾವುದೇ ಒಂದು ಗೆಲುವಿನಲ್ಲಿ ತೃಪ್ತಿ ಕಂಡವನಲ್ಲ. ಒಂದು ಗೆದ್ದ ಮೇಲೆ ಇನ್ನೊಂದು, ಒಂದು ಪ್ರಶಸ್ತಿ ಇನ್ನೊಂದರ ದಾಹ ಹುಟ್ಟಿಸುತ್ತದೆ ನನಗೆ. ದೊಡ್ಡ ದೊಡ್ಡ ವಿಜಯಗಳು ಹುಟ್ಟಿಸುವ ರೋಮಾಂಚನ ನನ್ನನ್ನು ಸದಾ ಆಕರ್ಷಿಸುತ್ತದೆ. ಅದಕ್ಕೆ ವಯಸ್ಸು ಒಂದು ಅಡ್ಡಿಯೇ ಅಲ್ಲ ಎಂದು ನಾನು ಭಾವಿಸಿದ್ದೇನೆ. ಆಂದ್ರೆ ಅಗಾಸ್ಸಿ ನನಗೆ ಸ್ಫೂರ್ತಿಯಾಗಿದ್ದಾರೆ. ಅವರು ಕೂಡ ನನ್ನ ಹಾಗೆಯೇ ಒಂದು ಬಾರಿ ವೃತ್ತಿ ಜೀವನದಲ್ಲಿ ಕುಸಿತವನ್ನು ಕಂಡು ಮತ್ತೆ ಆಟದ ಲಯ ಕಂಡುಕೊಂಡವರು. ಒಂದೇ ಗುರಿಯನ್ನು ಹಾಕಿಕೊಂಡು, ವ್ಯವಸ್ಥಿತವಾಗಿ ವೃತ್ತಿಜೀವನವನ್ನು ಹೇಗೆ ಮರುರೂಪಿಸಿಕೊಳ್ಳಬಹುದು ಅನ್ನುವುದನ್ನು ನಾನು ಅವರಿಂದ ಕಲಿತೆ. 

2013ರಲ್ಲಿ ನನಗೆ ಏನಾಯಿತು ನೋಡಿ. ಸೋಲುಗಳು ಮತ್ತು ಗಾಯಗಳ ನೋವು ಮೇಲಿಂದ ಮೇಲೆ ನನ್ನನ್ನು ಕಾಡಿದ್ದವು. ನನ್ನ ಟೆನಿಸ್‌ ಜೀವನ ಮುಗಿದೇ ಹೋಯಿತು ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ಸ್ಟೀಫ‌ನ್‌ ಎಡºರ್ಗ್‌ ಅವರ ಗುರುತ್ವದಲ್ಲಿ ಆಟದ ಹೊಸ ಲಯವನ್ನು ನಾನು ಕಂಡುಕೊಂಡೆ, ನನ್ನನ್ನು ನಾನು ಬದಲಾಯಿಸಿಕೊಂಡೆ. ಇನ್ನಷ್ಟು ಆಕ್ರಮಣಕಾರಿಯಾಗಿ, ಎದುರಾಳಿಗೆ ಮೇಲುಗೈ ಹೊಂದಲು ಅವಕಾಶವೇ ಸಿಗದ ಹಾಗೆ ಆಡುವುದನ್ನು ಅಭ್ಯಾಸ ಮಾಡಿಕೊಂಡೆ. ಹೀಗೆ ಕಾಲಕ್ಕೆ, ವಯಸ್ಸಿಗೆ ತಕ್ಕಂತೆ ನಮ್ಮನ್ನು ನಾವು ರೀ ಇನ್ವೆಂಟ್‌ ಮಾಡಿಕೊಂಡರೆ ನಮ್ಮ ವೃತ್ತಿ ಜೀವನಕ್ಕೆ ಸಾವಿರುವುದಿಲ್ಲ. ತಲೆಯನ್ನು ಸದಾ ಎತ್ತಿ ನಡೆಯುವುದು, ನಿಮ್ಮ ಸಾಮರ್ಥ್ಯದ ಬಗ್ಗೆ ನಿಮಗೆ ಯಾವುದೇ ಸಂಶಯವಿಲ್ಲದೆ ಸದಾ ಆತ್ವವಿಶ್ವಾಸದಿಂದ ತುಂಬಿ ತುಳುಕುವುದು ಮತ್ತು ಯಾವಾಗಲೂ ಹೊಸತನಕ್ಕೆ ಹಾತೊರೆಯುವುದು ಗೆಲುವಿನ ಬದುಕನ್ನು ಬದುಕಲು ತುಂಬಾ ಮುಖ್ಯ.  

ಒಬ್ಬ ಶ್ರೇಷ್ಠ ಮಾರ್ಗದರ್ಶಕ
ನನ್ನ ಬಾಲ್ಯದಲ್ಲಿ ಸ್ಟೀಫ‌ನ್‌ ಎಡºರ್ಗ್‌ ಅವರ ಅಭಿಮಾನಿಯಾಗಿದ್ದೆ. ಅವರನ್ನೇ ಕೋಚ್‌ ಆಗಿ ಪಡೆಯುವುದು ಒಂದು ಅದೃಷ್ಟವಲ್ಲವೆ? ಎಡºರ್ಗ್‌ ಬರಿಯ ಕೋಚ್‌ ಅಲ್ಲ; ನನ್ನ ಪಾಲಿಗೆ ಗುರು, ಮಾರ್ಗದರ್ಶಕ. ಕೆಲವೊಮ್ಮೆ ನಾವು ಗಂಟೆಗಟ್ಟಲೆ ಮಾತನಾಡುತ್ತಾ ಕುಳಿತಿರುತ್ತೇವೆ – ಟೆನಿಸ್‌ ಅಲ್ಲ; ಸೀಗಲ್‌ ಹಕ್ಕಿಗಳು ಹಾರುವ ಬಗ್ಗೆ, ಆಕಾಶದಲ್ಲಿರುವ ಚಂದ್ರ, ನಕ್ಷತ್ರಗಳ ಬಗ್ಗೆ. ಒಬ್ಬ ಯೋಗ್ಯ ಮಾರ್ಗದರ್ಶಕ ಇಂಥ ಮಾತುಕತೆಗಳ ಮೂಲಕವೂ ನೀವು ನಡೆಯಬೇಕಾದ ದಾರಿಯನ್ನು ತೋರಿಸಬಲ್ಲ. ನಾನೊಬ್ಬನೇ ಇರುವಾಗ ಕೆಲವು ಬಾರಿ ಯೋಚಿಸುವುದಿದೆ – ಬಾಲ್ಯದಲ್ಲಿ ದೇವರು ಎಂದುಕೊಂಡಿದ್ದ ವ್ಯಕ್ತಿಯೊಂದಿಗೆ ಈಗ ಇರುವುದು ನಿಜವೇ?! ನಿಜ, ನಮ್ಮ ಸಾಧನೆ ಎಲ್ಲವನ್ನೂ ನಮ್ಮ ಬಳಿಗೆ ಕರೆತರುತ್ತದೆ.

ಯೌವ್ವನದಲ್ಲಿ ನಾನು ಅನ್ನುವುದು ನಿಮಗೆ ಗೊತ್ತಿರಬಹುದು. ಎದುರಾಳಿಗಳು, ಅಂಪಾಯರ್‌ಗಳ ಜತೆಗೆ ಸದಾ ಜಗಳ ತೆಗೆಯುವ ಹುಂಬ ನಾನಾಗಿದ್ದೆ. ಕೋರ್ಟ್‌ನಲ್ಲಿ ನಾನು ಮುರಿದು ಹಾಕಿದ ರ್ಯಾಕೆಟ್‌ಗಳಿಗೆ ಲೆಕ್ಕವಿಲ್ಲ. ಬಾಲ್ಯದಲ್ಲಿ ಟೆನಿಸ್‌ ಬಿಟ್ಟರೆ ಫ‌ುಟ್ಬಾಲ್‌ ನನ್ನ ಇಷ್ಟದ ಆಟವಾಗಿತ್ತು. ಅದೃಷ್ಟವಶಾತ್‌ ನಾನು ಟೆನಿಸನ್ನೇ ಆಯ್ದುಕೊಂಡೆ. ಫ‌ುಟ್ಬಾಲಿಗನಾಗಿದ್ದರೆ ರೆಫ್ರೀ, ಸಹ ಆಟಗಾರರು, ಎದುರಾಳಿಗಳು ಹೀಗೆ ಎಲ್ಲರ ಜತೆಗೂ ಜಗಳ ಮಾಡುತ್ತಿದ್ದೆ. ಆದರೆ ಟೆನಿಸ್‌ನಲ್ಲಿ ಹಾಗಿಲ್ಲ; ಸೋಲು, ಹತಾಶೆಗೆ ಪ್ರತಿಕ್ರಿಯೆಯನ್ನು ನಾನು ನನ್ನ ವಿರುದ್ಧವೇ ಪ್ರದರ್ಶಿಸಬೇಕು! ಈ ಜಗಳಗಂಟತನ ಮಿತಿಮೀರುವ ಹಾಗಿದ್ದ ಒಂದು ದಿನ ನಾನು ನನ್ನಷ್ಟಕ್ಕೇ ಯೋಚಿಸಿದೆ – ಒಂದೋ ಇದನ್ನೆಲ್ಲ ನಿಲ್ಲಿಸಬೇಕು ಇಲ್ಲವೇ ಆಟಕ್ಕೆ ವಿದಾಯ ಹೇಳಬೇಕು. ಅದು ಟರ್ನಿಂಗ್‌ ಪಾಯಿಂಟ್‌ ಆಗಿತ್ತು. ಕ್ರೋಧವನ್ನು ಗೆಲ್ಲಲು ಕಲಿತೆ. ಶಾಂತನಾಗಿ ಆದರೆ ದೃಢ ನಿಲುವಿನಿಂದ ಆಡುವುದನ್ನು ಅಭ್ಯಾಸ ಮಾಡಿಕೊಂಡೆ. ಆಟ, ಕಲೆ, ವೃತ್ತಿ – ಯಾವುದೇ ಆಗಿರಲಿ; ಅದನ್ನು ನಾವು ನಮಗಿಂತ ಹೆಚ್ಚು ಪ್ರೀತಿಸಿದಾಗ ಇಂಥ ಬದಲಾವಣೆ ಸಾಧ್ಯವಾಗುತ್ತದೆ. ನಾವು ಪ್ರೀತಿಸುವ ಅದಕ್ಕಾಗಿ ನಮ್ಮನ್ನು ನಾವು ಪರಿವರ್ತಿಸಿಕೊಳ್ಳುತ್ತೇವೆ. 

ನಿವೃತ್ತಿಯ ಬಳಿಕ?
ನನ್ನನ್ನು ಸಾರ್ವಕಾಲಿಕ ಶ್ರೇಷ್ಠ ಟೆನಿಸಿಗ ಎಂದು ಹೇಳುವವರಿದ್ದಾರೆ. ಹಾಗಾದರೆ, ನನ್ನ ಟೆನಿಸ್‌ ವೃತ್ತಿಜೀವನ ಕೊನೆಗೊಂಡ ಬಳಿಕ ಏನಾಗುತ್ತದೆ‌? ಆ ಬಗ್ಗೆ ನಾನು ಇನ್ನೂ ಯೋಚಿಸಿಲ್ಲ. ಯಾಕೆಂದರೆ, ಅದು ನನ್ನ ಈಗಿನ ಆಟವನ್ನು ಹಾಳುಗೆಡವಬಲ್ಲುದು. ನಾಳೆಯದ್ದು ನಾಳೆಗೇ ಇರಲಿ; ಗಮನವನ್ನು ಇವತ್ತಿಗಷ್ಟೇ ಕೇಂದ್ರೀಕರಿಸೋಣ. ಅಂಥ ಒಂದು ದಿನ ಬಂದರೆ, ಮಡದಿಯಿದ್ದಾಳೆ, ಮುದ್ದಾದ ನಾಲ್ಕು ಮಂದಿ ಮಕ್ಕಳಿದ್ದಾರೆ. ತಿರುಗಾಡಲು ಈ ಜಗತ್ತು ವಿಶಾಲವಾಗಿದೆ. ಅದಕ್ಕಿಂತ ಹೆಚ್ಚಿನ ಸಂತೋಷ ಇನ್ನೇನು?!

– ರೋಜರ್‌ ಫೆಡರರ್‌ ; ಟೆನಿಸ್‌ ಆಟಗಾರ

Advertisement

Udayavani is now on Telegram. Click here to join our channel and stay updated with the latest news.

Next