Advertisement

ಗರ್ಭನಿರೋಧಕಗಳ‌ ಜಾದೂ..!

01:27 AM Jun 16, 2017 | Karthik A |

ಹೊಸ ತಲೆಮಾರಿನ ಯುವತಿಯರಿಗೆ ಗರ್ಭನಿರೋಧಕಗಳು ಲಭ್ಯವಿರುವುದನ್ನು ನೋಡಿ ಅನಿತಾ ಉತ್ಸಾಹದಿಂದ ಮಾತನಾಡುತ್ತಾಳೆ: ‘ನಾನೆದುರಿಸಿದಂಥ ಕಷ್ಟ ನನ್ನ ಸೊಸೆಯಾಗಿ ಬರುವವಳಿಗೆ ಎದುರಾಗಬಾರದು’ ಎನ್ನುತ್ತಾಳಾಕೆ. ಅನಿತಾಳ ಜೀವನ ಮಕ್ಕಳ ಆರೈಕೆಯಲ್ಲೇ ಮುಗಿದುಹೋಗುತ್ತಿದೆೆ!

Advertisement

ನನಗೆ ಪರಿಚಯವಿರುವ ಬಹಳಷ್ಟು ಮಹಿಳೆಯರಂತೆಯೇ ನಾನೂ ಕೂಡ ಹಲವಾರು ವರ್ಷಗಳಿಂದ ಗರ್ಭನಿರೋಧಕಗಳನ್ನು ಬಳಸುತ್ತಲೇ ಬಂದಿದ್ದೇನೆ. ಮೊದಲಿನಿಂದಲೂ ನನಗೆ ‘ತಾಯಿಯಾಗುವ ಮುನ್ನ ಮತ್ತು ನಂತರವೂ’ ಕೆಲಸ ಮಾಡಬೇಕೆಂಬ ಗುರಿ ಇತ್ತು. ಹೀಗಾಗಿ ಯಾವಾಗ ನನಗೆ ಮತ್ತು ಪತಿ ಬಿಲ್‌ ಗೇಟ್ಸ್‌ಗೆ ನಮ್ಮದೇ ಕುಟುಂಬವನ್ನು ಆರಂಭಿಸಲು ಸಿದ್ಧವಿದ್ದೇವೆ ಎನ್ನುವುದು ಖಾತ್ರಿಯಾಯಿತೋ ಅಲ್ಲಿಯವರೆಗೂ ನಾನು ಗರ್ಭಧಾರಣೆಯನ್ನು ಮುಂದೂಡುತ್ತಾ ಹೋಗಿದೆ. ಈಗ ನಮಗೆ ಮೂವರು ಮಕ್ಕಳು, ಈ ಮೂವರ ನಡುವಿನ ವಯೋ ಅಂತರವೂ ಸರಿಯಾಗಿ ಮೂರು ವರ್ಷಗಳಷ್ಟಿದೆ. ಅಂದರೆ ನಾವು ಪೋಷಕರಾಗಿದ್ದು ಪ್ಲ್ಯಾನ್‌ ಮಾಡಿಯೇ ಹೊರತು, ಇದೆಲ್ಲ ಅಚಾನಕ್ಕಾಗಿ ಆಗಲಿಲ್ಲ.

‘ಯಾವಾಗ ಗರ್ಭ ಧರಿಸಬೇಕು?’ ಎನ್ನುವ ನಿರ್ಧಾರದ ಹಿಂದೆ ನನ್ನ ಮತ್ತು ನನ್ನ ಕುಟುಂಬದ ಹಿತಾಸಕ್ತಿಯಿತ್ತು. ಹಾಗೆ ನೋಡಿದರೆ ಈ ವಿಷಯದಲ್ಲಿ ನಾನು ಬಹಳ ಲಕ್ಕಿ ಎಂದು ಭಾವಿಸುತ್ತೇನೆ. ಏಕೆಂದರೆ ಇಂದಿಗೂ ಜಗತ್ತಿನ 22 ಕೋಟಿ 50 ಲಕ್ಷ ಮಹಿಳೆಯರಿಗೆ ಆಧುನಿಕ ಗರ್ಭನಿರೋಧಕಗಳು ಸಿಗುತ್ತಿಲ್ಲ. ಈ ಕಾರಣದಿಂದಾಗಿ ಗರ್ಭಧಾರಣೆಯ ವಿಚಾರದಲ್ಲಿ ಅವರಿಗೆ ಸ್ವಂತ ನಿರ್ಧಾರ ಕೈಗೊಳ್ಳಲು, ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯವಾಗುತ್ತಲೇ ಇಲ್ಲ. 

ಬಿಲ್‌ ಮತ್ತು ನಾನು ‘ಫೌಂಡೇಷನ್‌’ ಆರಂಭಿಸಿದ ನಂತರದಿಂದ, ಜಗತ್ತಿನಾದ್ಯಂತ ಸಂಚರಿಸಿ ಅನೇಕ ಮಹಿಳೆಯರನ್ನು ಮಾತನಾಡಿಸಿದ್ದೇವೆ. ಜಗತ್ತಿನ ಪ್ರತಿಯೊಂದು ದೇಶದ ಮಹಿಳೆಯರೂ ತಮಗೆ ತಮ್ಮ ಜೀವನದ ಮೇಲೆ ಹಿಡಿತ ಸಿಕ್ಕಿರುವುದರಲ್ಲಿ ಗರ್ಭನಿರೋಧಕಗಳು ಪ್ರಮುಖ ಪಾತ್ರ ವಹಿಸುತ್ತಿವೆ ಎನ್ನುತ್ತಾರೆ. ಯಾವಾಗ ಮಹಿಳೆಯೊಬ್ಬಳು ಗರ್ಭನಿರೋಧಕಗಳನ್ನು ಬಳಸಲಾರಂಭಿಸುತ್ತಾಳ್ಳೋ ಆಗ ಆಕೆ ಮತ್ತು ಆಕೆಯ ಕುಟುಂಬದ ಸ್ಥಿತಿ ಉತ್ತಮವಾಗುತ್ತದೆ, ಆದಾಯ ಸಂಗ್ರಹ ಪ್ರಮಾಣ ಹೆಚ್ಚುತ್ತದೆ, ಬಡತನದ ಮಟ್ಟ ಕುಸಿಯುತ್ತದೆ, ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಮತ್ತು ತಾನೂ ಸುಶಿಕ್ಷಿತಳಾಗಲು ಸಮಯ ಮತ್ತು ಅವಕಾಶ ಸಿಗುತ್ತದೆ.  

ಗರ್ಭನಿರೋಧಕಗಳಿಲ್ಲದೆ ಒದ್ದಾಡುತ್ತಿರುವ ಮಹಿಳೆಯರಿಗೆ ಸಹಾಯ ಮಾಡುವ ಕಾರಣಕ್ಕಾಗಿ 2012ರಲ್ಲಿ ನಾವು ಜಾಗತಿಕ ನಾಯಕರನ್ನೊಳಗೊಂಡ ಒಂದು ಸಭೆ ನಡೆಸಿದೆವು. ‘ಫ್ಯಾಮಿಲಿ ಪ್ಲ್ಯಾನಿಂಗ್‌ 2020’ ಎಂಬ ಮಹತ್ವಾಕಾಂಕ್ಷಿ ಯೋಜನೆ ಆಗ ಜನ್ಮತಾಳಿತು. 2020ರ ವೇಳೆಗೆ ಜಗತ್ತಿನ ಕನಿಷ್ಠ 12 ಕೋಟಿ ಮಹಿಳೆಯರಿಗೆ ಗರ್ಭನಿರೋಧಕಗಳು ಲಭಿಸುವಂತೆ ಮಾಡುವುದು ಈ ಯೋಜನೆಯ ಉದ್ದೇಶವಾಗಿದೆ. ಮೇಲ್ನೋಟಕ್ಕೆ ಈ ಗುರಿ ಬಹಳ ಕಠಿಣವೆನಿಸುತ್ತದಾದರೂ ಅಸಾಧ್ಯವೇನೂ ಅಲ್ಲ ಎನ್ನುವುದು ನಮಗೆ ಅಂದು ತಿಳಿದಿತ್ತು. 

Advertisement

ದುರದೃಷ್ಟವಶಾತ್‌, ನಮ್ಮ ಗುರಿಯೆಡೆಗಿನ ಪಯಣದಲ್ಲಿ ನಿರೀಕ್ಷಿಸಿದಷ್ಟು ಪ್ರಗತಿಯಾಗಿಲ್ಲ. ಅದಾಗಲೇ 2020 ಸಮೀಪವಾಗುತ್ತಿದೆ. ನಿಗದಿತ ಅವಧಿಯೊಳಗೆ ಈ 12 ಕೋಟಿ ಮಹಿಳೆಯರನ್ನು ತಲುಪುವ ಒತ್ತಡ ಹೆಚ್ಚಾಗುತ್ತಿದೆ. ಇದುವರೆಗೂ ಅಂದರೆ, ಜುಲೈ 2016ರೊಳಗೆ ನಾವು 2.4 ಕೋಟಿ ಮಹಿಳೆಯರನ್ನು ತಲುಪಿ ಅವರಿಗೆ ಕುಟುಂಬ ಯೋಜನೆ ಸೇವೆಗಳನ್ನು ಒದಗಿಸಿದ್ದೇವೆ. ಜಗತ್ತಿನಾದ್ಯಂತ ಮಹಿಳೆಯರ ಬದುಕನ್ನು ಬದಲಿಸುವ ಈ ಮಹೋನ್ನತ ಉದ್ದೇಶ ಈಡೇರಬೇಕೆಂದರೆ ನಾವು ಈಗ ಉಳಿದಿರುವ ಸಮಯವನ್ನು ಸಕ್ಷಮವಾಗಿ ಬಳಸಿಕೊಳ್ಳಲೇಬೇಕಿದೆ. ಗರ್ಭನಿರೋಧಕಗಳ ವಿಷಯದ ಬಗ್ಗೆ ಯೋಚನೆ ಬಂದಾಗಲೆಲ್ಲ, ನನಗೆ ನೆನಪಾಗುವುದು ಅನಿತಾ ಮತ್ತು ಸುಶೀಲಾರ ಕಥೆ. ಇವರಿಬ್ಬರನ್ನು 2015ರಲ್ಲಿ ನಾನು ಭಾರತದ ಕಮ್ರಾವಾ ಎನ್ನುವ ಹಳ್ಳಿಯಲ್ಲಿ ಭೇಟಿಯಾಗಿದ್ದೆ.

ಅನಿತಾಗೆ ತನ್ನ ವಯಸ್ಸು ಎಷ್ಟು ಎನ್ನುವುದು ಸ್ಪಷ್ಟವಾಗಿ ತಿಳಿಯದು. 40 ವರ್ಷ ಇರಬಹುದು ಎಂದು ಊಹಿಸಿ ಹೇಳುವ ಆಕೆ ಜೀವನಪರ್ಯಂತ ಗರ್ಭನಿರೋಧಕಗಳ ಅಲಭ್ಯತೆಯಲ್ಲೇ ಕಳೆದಿದ್ದಾಳೆ. ಹದಿಹರೆಯದಲ್ಲೇ ವಿವಾಹವಾದ ಅನಿತಾ, ಮದುವೆಯಾದ ಒಂದು ವರ್ಷದಲ್ಲೇ ಗರ್ಭಧರಿಸಿಬಿಟ್ಟಳು. ಒಂದರ ನಂತರ ಒಂದರಂತೆ 5 ಮಕ್ಕಳಿಗೆ ಜನ್ಮ ನೀಡಿದಳು. ಈ ಯಾವ ಪ್ರಗ್ನೆನ್ಸಿಯನ್ನೂ ಅನಿತಾ ಮತ್ತು ಆಕೆಯ ಪತಿ ಪ್ಲ್ಯಾನ್‌ ಮಾಡಿರಲಿಲ್ಲ. ಗರ್ಭನಿರೋಧಕಗಳಿಲ್ಲದೇ ಪ್ಲ್ಯಾನ್‌ ಮಾಡುವ ಆಯ್ಕೆಯಾದರೂ ಆಕೆಯ ಮುಂದೆ ಎಲ್ಲಿತ್ತು?

‘ಇಷ್ಟು ಕಡಿಮೆ ಆದಾಯದಲ್ಲಿ 5 ಮಕ್ಕಳನ್ನು ಹೇಗೆ ಸಾಕುತ್ತಿದ್ದೀರಾ?’ ಎಂದು ಪ್ರಶ್ನಿಸಿದಾಗ ಆಕೆ ಬಹಳ ದುಃಖಕ್ಕೀಡಾದಳು. ‘ನಾನು ಬಹಳ ಕಷ್ಟ ಅನುಭವಿಸಿದ್ದೇನೆ’ ಎಂದಳು ಅನಿತಾ. ಆಕೆ ತನ್ನ ಬಹುತೇಕ ಬದುಕನ್ನು ಕುಟುಂಬವನ್ನು ಸಲಹುವುದರಲ್ಲೇ ಕಳೆದಿದ್ದಾಳೆ. ತನ್ನ ಬಗ್ಗೆ ಯೋಚಿಸುವುದಕ್ಕೆ ಅನಿತಾಗೆ ಸಮಯವೇ ಸಿಕ್ಕಿಲ್ಲ. ಅಡುಗೆ ಮಾಡುವುದು, ಹಸುಗಳನ್ನು ಮೇಯಿಸುವುದು, ಹೊರಗಿನಿಂದ ನೀರು ಹೊತ್ತು ತಂದು ಮನೆಯನ್ನು ಸ್ವಚ್ಛವಾಗಿರಿಸುವುದು… ನಿತ್ಯವೂ ಈ ಕೆಲಸ ಪುನರಾವರ್ತನೆಯಾಗುತ್ತಲೇ ಇರುತ್ತದೆ. ಈ ಕಾರಣದಿಂದಲೇ ಆಕೆಗೆ ಜೀವನದಲ್ಲಿ ಬೇರೇನನ್ನೂ ಮಾಡಲು ಆಗಲಿಲ್ಲ, ಮನೆಯ ಖರ್ಚನ್ನು ನಿಭಾಯಿಸಲು ಯಾವುದಾದರೂ ಕೆಲಸಕ್ಕೆ ಸೇರುವುದಕ್ಕೂ ಅನಿತಾಗೆ ಆಗುತ್ತಿಲ್ಲ. ಅಭಾವ, ಕಷ್ಟ ಮತ್ತು ಅಂತ್ಯವಿಲ್ಲದ ಚಿಂತೆಯ ಜೀವನ ಆಕೆಯದ್ದು.

ಆದರೀಗ ಕಮ್ರಾವಾದ ಹೊಸ ತಲೆಮಾರಿನ ಪರಿಸ್ಥಿತಿ ಭಿನ್ನವಾಗಿದೆ. ಈಗ ಅಲ್ಲಿನ ಮಹಿಳೆಯರಿಗೆಲ್ಲ ಗರ್ಭನಿರೋಧಕಗಳು ಸಿಗುತ್ತಿವೆ. ಇದರಿಂದಾಗಿ ತಾವು ಯಾವಾಗ ಗರ್ಭ ಧರಿಸಬೇಕು ಎನ್ನುವ ಪ್ರಮುಖ ನಿರ್ಧಾರ ಈಗ ಅವರ ಹಿಡಿತಕ್ಕೆ ಸಿಕ್ಕಿದೆ. ತತ್ಪರಿಣಾಮವಾಗಿ, ಆ ಭಾಗದ ಕುಟುಂಬಗಳಲ್ಲಿನ ಜನರ ಸಂಖ್ಯೆ ಕಡಿಮೆಯಾಗುತ್ತಿದೆ, ಇರುವ ಒಂದೆರಡು ಮಕ್ಕಳನ್ನು ಉತ್ತಮ ಶಾಲೆಗಳಿಗೆ ಕಳುಹಿಸುವ, ಪೌಷ್ಠಿಕ ಆಹಾರವನ್ನು ಒದಗಿಸುವ ಆರ್ಥಿಕ ಶಕ್ತಿ ಫೋಷಕರಿಗೆ ಬಂದಿದೆ. ಈಗ ಕಮ್ರಾವಾ ಹಳ್ಳಿ ಆರೋಗ್ಯವಂತವಾಗಿ ಮತ್ತು ಹೆಚ್ಚು ಸಮೃದ್ಧವಾಗಿ ಬದಲಾಗಿದೆ. ಆದಾಗ್ಯೂ ಈ ಸ್ವಾತಂತ್ರ್ಯ ಅನಿತಾಗೆ ಸಿಗಲಿಲ್ಲ. ಆದರೂ ಹೊಸ ತಲೆಮಾರಿನ ಯುವತಿಯರಿಗೆ ಗರ್ಭನಿರೋಧಕಗಳು ಲಭ್ಯವಿರುವುದನ್ನು ನೋಡಿ ಆಕೆ ಉತ್ಸಾಹದಿಂದ ಮಾತನಾಡುತ್ತಾಳೆ: ‘ನಾನೆದುರಿಸಿದಂಥ ಕಷ್ಟ ಮುಂದೆ ನನ್ನ ಸೊಸೆಯಾಗಿ ಬರುವವಳಿಗೆ ಎದುರಾಗಬಾರದು’ ಎನುವ ಬಯಕೆ ಅನಿತಾಳದ್ದು.

ನಾನು ಭೇಟಿಯಾದ ಮತ್ತೂಬ್ಬ ಮಹಿಳೆಯೆಂದರೆ 28 ವರ್ಷದ ಸುಶೀಲಾ. ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ಈಕೆ ಗರ್ಭನಿರೋಧಕಗಳ ಬಳೆಕೆಯ ಮೂಲಕ ತನ್ನ ಮತ್ತು ತನ್ನ ಕುಟುಂಬದ ಭವಿಷ್ಯವನ್ನು ಪ್ಲ್ರಾನ್‌ ಮಾಡುತ್ತಿದ್ದಾಳೆ. ಸುಶೀಲಾಗೆ 5 ವರ್ಷದ ಮಗ ಮತ್ತು 2 ವರ್ಷದ ಮಗಳಿದ್ದಾಳೆ. ತನ್ನ ತಾಯ್ತನವನ್ನು ಬಹಳ ಎಂಜಾಯ್‌ ಮಾಡುತ್ತಿದ್ದಾಳೆ ಸುಶೀಲಾ. ಆದರೆ ತಮಗೆ ಮತ್ತೂಂದು ಮಗು ಬೇಡ ಎಂದು ಸುಶೀಲಾ ಮತ್ತು ಆಕೆಯ ಪತಿ ನಿರ್ಧರಿಸಿದ್ದಾರೆ. ತಮ್ಮ ಮಗ ಮತ್ತು ಮಗಳಿಗೆ ಉತ್ತಮ ಜೀವನವನ್ನು ಕೊಡುವ ಉದ್ದೇಶದಿಂದ ಅವರು ಈ ನಿರ್ಧಾರಕ್ಕೆ ಬಂದಿದ್ದಾರಂತೆ.

ತನ್ನ ಇಬ್ಬರು ಮಕ್ಕಳು ಶಾಲೆಗೆ ಸೇರುತ್ತಿದ್ದಂತೆಯೇ, ವಾಪಸ್‌ ಹಳ್ಳಿಗೆ ಹೋಗಿ ಶಿಕ್ಷಕ ವೃತ್ತಿಯನ್ನು ಮುಂದುವರಿಸುವ ಯೋಚನೆ ಸುಶೀಲಾಗೆ ಇದೆಯಂತೆ. ಒಂದು ತಲೆಮಾರಿನ ಹಿಂದೆ ತಿರುಗಿ ನೋಡಿದರೆ ಆಗ ಕಮ್ರಾವಾದಂಥ ಹಳ್ಳಿಯಲ್ಲಿ ಉದ್ಯೋಗಸ್ಥ ಮಹಿಳೆಯರೇ ಇರಲಿಲ್ಲ. ಮಹಿಳೆಯರು ಉದ್ಯೋಗಸ್ಥರಾಗಬಲ್ಲರು ಎನ್ನುವ ಕಲ್ಪನೆಯೂ ಆಗ ಇರಲಿಲ್ಲ. ಪರಿಸ್ಥಿತಿಯೂ ಅದಕ್ಕೆ ಪೂರಕವಾಗಿರಲಿಲ್ಲ. ಆದರೆ ಈಗ ಅಲ್ಲಿನ ಯುವತಿಯರು, ಮಹಿಳೆಯರ ಮುಂದೆ ಉತ್ತಮ ಭವಿಷ್ಯ ನಿರ್ಮಾಣದ ಹಲವು ಆಯ್ಕೆಗಳು ಎದುರಾಗಿವೆ.

ಅನಿತಾ ಮತ್ತು ಸುಶೀಲಾಳ ಜೀವನದಲ್ಲಿನ ಭಿನ್ನತೆಯನ್ನು ಗಮನಿಸಿದಾಗ, ಹಳ್ಳಿಗಾಡಿನಲ್ಲೂ ಪ್ರಗತಿ ಅಸಾಧ್ಯವೇನೂ ಅಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಈಗ ನಮ್ಮ ಮುಂದೆ, ಅಂದರೆ ಜಗತ್ತಿನ ಮುಂದೆ ಪ್ರಮುಖ ಪ್ರಶ್ನೆಯೊಂದು ಎದುರಾಗಿದೆ. ಜಗತ್ತಿನಾದ್ಯಂತ ಇಂದಿಗೂ ಗರ್ಭನಿರೋಧಕಗಳಿಲ್ಲದೇ ಒದ್ದಾಡುತ್ತಿರುವ ಮಹಿಳೆಯರ ರಕ್ಷಣೆಗೆ ನಾವು ಯಾವಾಗ ಪರಿಣಾಮಕಾರಿಯಾಗಿ ಮುಂದಾಗುತ್ತೇವೆ? ಅವರ ಸಹಾಯಕ್ಕಾಗಿ ಬೇಕಾದ ಸಂಪನ್ಮೂಲಗಳನ್ನು ಕ್ರೋಡೀಕರಿಸುತ್ತೇವೆ? 2012ರಲ್ಲಿ ಜಗತ್ತಿನ ನಾಯಕರೆಲ್ಲ ಸೇರಿ ಜಗತ್ತಿನ ಮಹಿಳೆಯರಿಗೆ ಒಂದು ಭರವಸೆ ನೀಡಿದ್ದೆವು. ಮುಂದಿನ ಮೂರು ವರ್ಷಗಳಲ್ಲಿ ನಮ್ಮ ಮಾತನ್ನು ನಾವು ಉಳಿಸಿಕೊಳ್ಳುತ್ತೇವೋ ಇಲ್ಲವೋ ಎನ್ನುವುದಕ್ಕೆ ಉತ್ತರ ಸಿಗಲಿದೆ. ಸತ್ಯವೇನೆಂದರೆ, ಈ ಉತ್ತರ ನಮ್ಮ ಕಾರ್ಯತತ್ಪರತೆಯನ್ನು ಅವಲಂಬಿಸಿದೆ!

– ಮೆಲಿಂದಾ ಗೇಟ್ಸ್‌, ಬಿಲ್‌ – ಮೆಲಿಂದಾ ಗೇಟ್ಸ್‌ ಫೌಂಡೇಶನ್‌ ಸ್ಥಾಪಕಿ

Advertisement

Udayavani is now on Telegram. Click here to join our channel and stay updated with the latest news.

Next