Advertisement

ಪ. ಬಂಗಾಲ, ಪಂಜಾಬ್‌ನಲ್ಲಿ ಹಿಂಸಾಚಾರ

06:14 AM May 20, 2019 | Team Udayavani |

ಹೊಸದಿಲ್ಲಿ: ಒಂದೂವರೆ ತಿಂಗಳ ಕಾಲ ರಾಜಕೀಯ ಪಕ್ಷಗಳ ಪ್ರಚಾರದ ಅಬ್ಬರ ಮತ್ತು ಮತದಾನದ ಸಂಭ್ರಮದಲ್ಲಿ ಮುಳುಗಿದ್ದ ದೇಶ ಕೊನೆಗೂ ಶಾಂತವಾಗಿದೆ. ಕೊನೆಯ ಹಂತದಲ್ಲಿ ಬಾಕಿ ಉಳಿದಿದ್ದ 8 ರಾಜ್ಯಗಳ 59 ಕ್ಷೇತ್ರಗಳಿಗೂ ರವಿವಾರ ಮತದಾನ ಮುಗಿದಿದ್ದು, ಈ ಮೂಲಕ ಪ್ರಸಕ್ತ ಲೋಕಸಭೆ ಚುನಾವಣೆಗೆ ತೆರೆ ಬಿದ್ದಿದೆ. ಈಗ ಎಲ್ಲರ ಗಮನ ಮೇ 23ರ ಫ‌ಲಿತಾಂಶದತ್ತ ನೆಟ್ಟಿದೆ.

Advertisement

ಕೊನೆಯ ಹಂತದಲ್ಲೂ ಹಿಂಸಾಚಾರ, ಇವಿಎಂ ದೋಷಗಳು, ಮತದಾನ ಬಹಿಷ್ಕಾರದಂಥ ಘಟನೆ ನಡೆದಿವೆ. ಪ. ಬಂಗಾಲ, ಪಂಜಾಬ್‌ನಲ್ಲಿ ಹಿಂಸಾಚಾರ ನಡೆದಿದ್ದು, ಬಿಹಾರ ಮತ್ತು ಉತ್ತರಪ್ರದೇಶದಲ್ಲಿ ರಾಜಕೀಯ ಪಕ್ಷಗಳ ಕಾರ್ಯಕರ್ತರು ಕೈ ಕೈ ಮಿಲಾಯಿಸಿದ್ದಾರೆ.

ಹಿಂಸೆಯ ನರ್ತನ
ರವಿವಾರ ಪ.ಬಂಗಾಲದ ಟಿಎಂಸಿ ಅಭ್ಯರ್ಥಿ ಮದನ್‌ ಮಿತ್ರಾ ಕಾರಿನ ಮೇಲೆ ದುಷ್ಕರ್ಮಿಗಳು ಬಾಂಬ್‌ ಮತ್ತು ಇಟ್ಟಿಗೆಗಳನ್ನು ಎಸೆದಿದ್ದಾರೆ. ಭತ್ಪಾರಾದಲ್ಲಿ ಟಿಎಂಸಿ ಕಚೇರಿಗೆ ಬೆಂಕಿ ಹಚ್ಚಲಾಗಿದೆ. ಇದೇ ವೇಳೆ ಗಿರೀಶ್‌ ಪಾರ್ಕ್‌ ಕ್ಷೇತ್ರದಲ್ಲಿ ಕಚ್ಚಾ ಬಾಂಬ್‌ ಎಸೆದ ಘಟನೆ ನಡೆದಿದೆ ಎಂದು ಬಿಜೆಪಿಯ ಉತ್ತರ ಕೋಲ್ಕತ್ತಾ ಅಭ್ಯರ್ಥಿ ರಾಹುಲ್ ಸಿನ್ಹಾ ಆರೋಪಿಸಿದ್ದಾರೆ. ಆದರೆ ಇದನ್ನು ಪೊಲೀಸರು ಪಟಾಕಿ ಸದ್ದು ಎಂದು ಸ್ಪಷ್ಟಪಡಿಸಿದ್ದಾರೆ. ಇನ್ನು ಬಿಜೆಪಿ ಅಭ್ಯರ್ಥಿಗಳಾದ ನೀಲಾಂಜನ್‌ ರಾಯ್‌ ಮತ್ತು ಅನುಪಮ್‌ ಹಜ್ರಾ ಅವರ ಕಾರಿನ ಮೇಲೆ ಟಿಎಂಸಿ ಕಾರ್ಯಕರ್ತರು ದಾಳಿ ನಡೆಸಿದ್ದಾರೆ. ಇನ್ನು ಕೇಂದ್ರದ ಭದ್ರತಾ ಪಡೆಗಳು ಮತದಾರರಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಟಿಎಂಸಿ ಆರೋಪಿಸಿದ್ದು, ಇದೇ ವಿಚಾರಕ್ಕೆ ಸಂಬಂಧಿಸಿ ಕೋಲ್ಕತಾದಲ್ಲಿ ವ್ಯಾಪಕ ಹಿಂಸಾಚಾರ ನಡೆದಿದೆ. ಕೇಂದ್ರದ ಪಡೆಗಳು ಅಂಗವಿಕಲರನ್ನೂ ಬಿಡದೆ ಹಿಂಸಿಸುತ್ತಿದ್ದಾರೆ ಎಂದು ಟಿಎಂಸಿ ನಾಯಕ ಡೆರಿಕ್‌ ಒಬ್ರಿಯಾನ್‌ ಆರೋಪಿಸಿದ್ದಾರೆ. ನೀತಿ ಸಂಹಿತೆ ಜಾರಿಯಲ್ಲಿ ಇರುವವರೆಗೆ ಕೇಂದ್ರದ ಪಡೆಗಳನ್ನು ರಾಜ್ಯದಲ್ಲೇ ಉಳಿಸುವಂತೆ ಚು. ಆಯೋಗಕ್ಕೆ ಬಿಜೆಪಿ ಮನವಿ ಮಾಡಿದೆ.

ಬಿಹಾರ, ಯುಪಿಯಲ್ಲೂ ದಾಂಧಲೆ
ಬಿಹಾರದಲ್ಲಿ ಆರ್‌ಜೆಡಿ ನಾಯಕ ತೇಜ್‌ ಪ್ರತಾಪ್‌ ಯಾದವ್‌ ಅವರ ಕಾರಿನ ಕಿಟಕಿ ಗಾಜನ್ನು ಒಡೆದು ಹಾಕಿದ ಕೆಮರಾ ಮ್ಯಾನ್‌ ಮೇಲೆ ಅವರ ಭದ್ರತಾ ಸಿಬಂದಿ ಹಲ್ಲೆ ನಡೆಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಮಹೇಂದ್ರನಾಥ್‌ ಪಾಂಡೆ ಮರು ಆಯ್ಕೆ ಬಯಸಿರುವಂಥ ಉತ್ತರಪ್ರದೇಶದ ಚಂಡೌಲಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಸಮಾಜವಾದಿ ಪಕ್ಷದ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದ್ದು, ಕೊನೆಗೆ ಪೊಲೀಸರ ಮಧ್ಯಪ್ರವೇಶದಿಂದ ಪರಿಸ್ಥಿತಿ ಹತೋಟಿಗೆ ಬಂದಿದೆ.

ಪಂಜಾಬ್‌ನಲ್ಲೂ ಘರ್ಷಣೆ
ಪಂಜಾಬ್‌ನ ಭಟಿಂಡಾ ಮತ್ತು ಗುರುದಾಸ್ಪುರದಲ್ಲಿ ಅಕಾಲಿ-ಬಿಜೆಪಿ ಮತ್ತು ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ಗುಂಪು ಘರ್ಷಣೆ ನಡೆದಿದೆ. ಆಡಳಿತಾರೂಢ ಕಾಂಗ್ರೆಸ್‌ ಕಾರ್ಯಕರ್ತರು ಗುಂಡು ಹಾರಿಸಿದ್ದಾಗಿ ಅಕಾಲಿದಳ ಆರೋಪಿಸಿದೆ.
Advertisement

Udayavani is now on Telegram. Click here to join our channel and stay updated with the latest news.

Next