Advertisement

Violence: ಸಂಘರ್ಷ ಪೀಡಿತ ಮಣಿಪುರ ಮತ್ತೆ ಧಗ-ಧಗ; ಮಾಜಿ ಹವಿಲ್ದಾರ್‌ರನ್ನು ಥಳಿಸಿ ಹತ್ಯೆ

12:57 AM Sep 11, 2024 | Team Udayavani |

ಇಂಫಾಲ: ಸಂಘರ್ಷ ಪೀಡಿತ ಮಣಿಪುರದಲ್ಲಿ ಹಿಂಸಾಚಾರ ಮತ್ತೆ ಭುಗಿಲೆದ್ದಿದೆ. ಬಂಡುಕೋರರ ದಾಳಿಯಿಂದ ಹೊತ್ತಿ ಉರಿಯುತ್ತಿರುವ ತಾಂಗ್‌ಬುಹ್‌ ಗ್ರಾಮದಲ್ಲಿ ಪ್ರತೀಕಾರವಾಗಿ ಭದ್ರತಾ ಪಡೆಯ ನಿವೃತ್ತ ಹವಿಲ್ದಾರ್‌ ಒಬ್ಬರನ್ನು ಜನರ ಗುಂಪು ಥಳಿಸಿ ಕೊಂದಿದೆ. ಮತ್ತೂಂದೆಡೆ ಜನಾಂಗೀಯ ಸಂಘರ್ಷದಲ್ಲಿ ಬುಡಕಟ್ಟು ಸಮುದಾಯಕ್ಕೆ ಸೇರಿದ ಓರ್ವ ಮಹಿಳೆಯೂ ಮೃತಪಟ್ಟಿದ್ದಾರೆ.

Advertisement

ಕಾನೂನು ವ್ಯವಸ್ಥೆ ಹದಗೆಟ್ಟಿರುವುದನ್ನು ಖಂಡಿಸಿ ಮಣಿಪುರದ ವಿದ್ಯಾರ್ಥಿಗಳು ಬೃಹತ್‌ ಪ್ರತಿಭಟನೆ ನಡೆಸಿ, ರಾಜಭವನ ಮುತ್ತಿಗೆಗೆ ಮುಂದಾಗಿದ್ದು, ಪೊಲೀಸರು ಮತ್ತು ವಿದ್ಯಾರ್ಥಿಗಳ ನಡುವೆ ತೀವ್ರ ಸಂಘರ್ಷ ಏರ್ಪಟ್ಟಿದೆ. ಮೃತ ಹವಿಲ್ದಾರ್‌ರನ್ನು ನೆಂಗ್ಜೋಖೋಲ್‌ ಹಾಕಿಪ್‌ (50) ಎಂದು ಗುರುತಿಸಲಾಗಿದ್ದು, ಕಾಂಗ್ಪೋಪಿ ಜಿಲ್ಲೆಯ ಸೆಕ್ಮೈ ಎಂಬಲ್ಲಿ ಅವರ ಮೃತ ದೇಹ ಪತ್ತೆಯಾಗಿದೆ ಎಂದು ಭದ್ರತಾ ಪಡೆ ಅಧಿಕಾರಿಗಳು ತಿಳಿಸಿದ್ದಾರೆ.

ಹಿಂಸಾಚಾರ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮಣಿಪುರ ಸರ್ಕಾರ ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಿದೆ. ಆದರೆ, ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದು, ರಾಜ್ಯದ ಅಸಮರ್ಥ ಹಾಗೂ ಕುಕಿ ಸಮುದಾಯಕ್ಕೆ ಸೇರದ ಶಾಸಕರೆಲ್ಲರೂ ರಾಜೀನಾಮೆ ನೀಡಿ ಎಂದು ಆಗ್ರಹಿಸಿದ್ದಾರೆ. ಸೆಪ್ಟೆಂಬರ್‌ 1ರಿಂದಲೂ ಮಣಿಪುರದಲ್ಲಿ ಬಂಡುಕೋರರ ದಾಳಿ, ಜನಾಂಗೀಯ ಸಂಘರ್ಷ ಹೆಚ್ಚಾಗಿದ್ದು, ಈ ವರೆಗೆ 11 ಮಂದಿ ಮೃತಪಟ್ಟಿದ್ದಾರೆ.

ವಿದ್ಯಾರ್ಥಿಗಳು v/s ಪೊಲೀಸರು:
ಕೇಂದ್ರ ಗೃಹ ಸಚಿವ ಅಮಿತ್‌ ಶಾ ಪ್ರತಿಕೃತಿ ದಹಿಸಿ ವಿದ್ಯಾರ್ಥಿಗಳು ಆಕ್ರೋಶ ಹೊರಹಾಕಿದ್ದಾರೆ. ಪೂರ್ವ ಇಂಫಾಲ-ಪಶ್ಚಿಮ ಇಂಫಾಲಗಳಲ್ಲಿ ಕರ್ಫ್ಯೂ ವಿಧಿಸಿರುವ ನಡುವೆಯೂ ಬಿ.ಟಿ. ರಸ್ತೆಯಲ್ಲಿರುವ ರಾಜಭವನಕ್ಕೆ ಮುತ್ತಿಗೆ ಹಾಕಲು ವಿದ್ಯಾರ್ಥಿಗಳು ಮುಂದಾದ ಕಾರಣ ಪೊಲೀಸರು ಅವರ ವಿರುದ್ಧ ಅಶ್ರುವಾಯು ಪ್ರಯೋಗಿಸಿದ್ದಾರೆ. ಮಹಿಳೆಯರೂ ಕೂಡ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು, ಪೊಲೀಸರು ನಡೆಸಿದ ಅಶ್ರುವಾಯು ಪ್ರಯೋಗದಲ್ಲಿ 40ಕ್ಕೂ ಅಧಿಕ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ರಾಜ್ಯ ಕಾರ್ಯಲಯ ಮುತ್ತಿಗೆಗೂ ಯತ್ನಿಸಿದ್ದು, ಭದ್ರತಾಪಡೆಗಳು ಆ ಪ್ರಯತ್ನವನ್ನು ವಿಫ‌ಲಗೊಳಿಸಿವೆ.

ನಾವೂ ಭಾರತೀಯರು, ಕೇಂದ್ರದ ವಿರುದ್ಧ ಕಿಡಿ:
“ನಾವೂ ಭಾರತೀಯರು ಎಂಬುದಕ್ಕಾದರೂ ಮಣಿಪುರ ಉಳಿಸಿ’ ಎಂಬ ಬ್ಯಾನರ್‌ಗಳನ್ನು ಹಿಡಿದು ವಿದ್ಯಾರ್ಥಿಗಳು ಪ್ರತಿಭಟಿಸಿದ್ದಾರೆ. ರಾಜ್ಯದ ಭದ್ರತೆಗೆ ಸಂಬಂಧಿಸಿದ ಏಕೀಕೃತ ಕಮಾಂಡ್‌ ವ್ಯವಸ್ಥೆಯನ್ನು ಕೇಂದ್ರ ಗೃಹ ಸಚಿವಾಲಯವು ಮುಖ್ಯಮಂತ್ರಿಗಳಿಗೆ ಹಸ್ತಾಂತರಿಸಬೇಕೆಂದೂ ಪಟ್ಟು ಹಿಡಿದಿದ್ದಾರೆ. ತೌಬಾಲ್‌ ಜಿಲ್ಲೆಯಲ್ಲೂ ಇದೇ ರೀತಿಯ ಪ್ರತಿಭಟನೆಗಳು ಭುಗಿಲೆದ್ದಿವೆ. ಡಿಜಿಪಿ ಮತ್ತು ರಾಜ್ಯದ ಭದ್ರತಾ ಸಲಹೆಗಾರರು ರಾಜೀನಾಮೆ ನೀಡಬೇಕು, ರಾಜ್ಯದಲ್ಲಿ ನಿಯೋಜನೆಗೊಂಡಿರುವ ಅಸ್ಸಾಂ ರೈಫ‌ಲ್ಸ್‌ ಮತ್ತು ಕೇಂದ್ರ ಪಡೆಗಳನ್ನು ಹಿಂಪಡೆಯಬೇಕೆಂದೂ ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

Advertisement

5 ದಿನ ಇಂಟರ್‌ನೆಟ್‌ ಸ್ಥಗಿತ ಸಿಆರ್‌ಪಿಎಫ್ ನ   2,000 ಸಿಬ್ಬಂದಿ ಮಣಿಪುರಕ್ಕೆ ದೌಡು:
ಪ್ರತಿಭಟನೆಗಳು ಭುಗಿಲೇಳುತ್ತಿದ್ದಂತೆಯೇ ರಾಜ್ಯ ಸರ್ಕಾರವು ಮುಂದಿನ 5 ದಿನಗಳ ವರೆಗೆ ರಾಜ್ಯದ ಎಲ್ಲೆಡೆ ಅಂತರ್ಜಾಲ ಬಳಕೆ ಸ್ಥಗಿತಗೊಳಿಸಿದೆ. ಅಲ್ಲದೇ, ಕೇಂದ್ರ ಸರ್ಕಾರ ಕೂಡ ಪರಿಸ್ಥಿತಿ ಹತೋಟಿಗೆ ತರುವುದಕ್ಕಾಗಿ ಸಿಆರ್‌ಪಿಎಫ್ ಬೆಟಾಲಿಯನ್‌ನ 2,000 ಸಿಬ್ಬಂದಿಯನ್ನು ಮಣಿಪುರಕ್ಕೆ ರವಾನಿಸಿದೆ. ಮಣಿಪುರದಲ್ಲಿ ನಿಯೋಜನೆಗೊಂಡಿದ್ದ ಅಸ್ಸಾಂ ರೈಫ‌ಲ್‌ನ 2 ತುಕಡಿಯನ್ನು ಜಮ್ಮು-ಕಾಶ್ಮೀರ ಮತ್ತು ಈಶಾನ್ಯದ ಕೆಲವು ಭಾಗಗಳ ಕಾರ್ಯಾಚರಣೆಗೆಂದು ಕರೆಸಿಕೊಳ್ಳಲಾಗಿತ್ತು. ಈ ಹಿನ್ನೆಲೆಯಲ್ಲಿ ಮಣಿಪುರದ ಸದ್ಯದ ಉದ್ವಿಗ್ನ ಶಮನಕ್ಕಾಗಿ ಆರ್‌ಪಿಎಫ್ನ 2 ತುಕಡಿ ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next