Advertisement
ಕಾನೂನು ವ್ಯವಸ್ಥೆ ಹದಗೆಟ್ಟಿರುವುದನ್ನು ಖಂಡಿಸಿ ಮಣಿಪುರದ ವಿದ್ಯಾರ್ಥಿಗಳು ಬೃಹತ್ ಪ್ರತಿಭಟನೆ ನಡೆಸಿ, ರಾಜಭವನ ಮುತ್ತಿಗೆಗೆ ಮುಂದಾಗಿದ್ದು, ಪೊಲೀಸರು ಮತ್ತು ವಿದ್ಯಾರ್ಥಿಗಳ ನಡುವೆ ತೀವ್ರ ಸಂಘರ್ಷ ಏರ್ಪಟ್ಟಿದೆ. ಮೃತ ಹವಿಲ್ದಾರ್‌ರನ್ನು ನೆಂಗ್ಜೋಖೋಲ್ ಹಾಕಿಪ್ (50) ಎಂದು ಗುರುತಿಸಲಾಗಿದ್ದು, ಕಾಂಗ್ಪೋಪಿ ಜಿಲ್ಲೆಯ ಸೆಕ್ಮೈ ಎಂಬಲ್ಲಿ ಅವರ ಮೃತ ದೇಹ ಪತ್ತೆಯಾಗಿದೆ ಎಂದು ಭದ್ರತಾ ಪಡೆ ಅಧಿಕಾರಿಗಳು ತಿಳಿಸಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರತಿಕೃತಿ ದಹಿಸಿ ವಿದ್ಯಾರ್ಥಿಗಳು ಆಕ್ರೋಶ ಹೊರಹಾಕಿದ್ದಾರೆ. ಪೂರ್ವ ಇಂಫಾಲ-ಪಶ್ಚಿಮ ಇಂಫಾಲಗಳಲ್ಲಿ ಕರ್ಫ್ಯೂ ವಿಧಿಸಿರುವ ನಡುವೆಯೂ ಬಿ.ಟಿ. ರಸ್ತೆಯಲ್ಲಿರುವ ರಾಜಭವನಕ್ಕೆ ಮುತ್ತಿಗೆ ಹಾಕಲು ವಿದ್ಯಾರ್ಥಿಗಳು ಮುಂದಾದ ಕಾರಣ ಪೊಲೀಸರು ಅವರ ವಿರುದ್ಧ ಅಶ್ರುವಾಯು ಪ್ರಯೋಗಿಸಿದ್ದಾರೆ. ಮಹಿಳೆಯರೂ ಕೂಡ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು, ಪೊಲೀಸರು ನಡೆಸಿದ ಅಶ್ರುವಾಯು ಪ್ರಯೋಗದಲ್ಲಿ 40ಕ್ಕೂ ಅಧಿಕ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ರಾಜ್ಯ ಕಾರ್ಯಲಯ ಮುತ್ತಿಗೆಗೂ ಯತ್ನಿಸಿದ್ದು, ಭದ್ರತಾಪಡೆಗಳು ಆ ಪ್ರಯತ್ನವನ್ನು ವಿಫಲಗೊಳಿಸಿವೆ.
Related Articles
“ನಾವೂ ಭಾರತೀಯರು ಎಂಬುದಕ್ಕಾದರೂ ಮಣಿಪುರ ಉಳಿಸಿ’ ಎಂಬ ಬ್ಯಾನರ್‌ಗಳನ್ನು ಹಿಡಿದು ವಿದ್ಯಾರ್ಥಿಗಳು ಪ್ರತಿಭಟಿಸಿದ್ದಾರೆ. ರಾಜ್ಯದ ಭದ್ರತೆಗೆ ಸಂಬಂಧಿಸಿದ ಏಕೀಕೃತ ಕಮಾಂಡ್ ವ್ಯವಸ್ಥೆಯನ್ನು ಕೇಂದ್ರ ಗೃಹ ಸಚಿವಾಲಯವು ಮುಖ್ಯಮಂತ್ರಿಗಳಿಗೆ ಹಸ್ತಾಂತರಿಸಬೇಕೆಂದೂ ಪಟ್ಟು ಹಿಡಿದಿದ್ದಾರೆ. ತೌಬಾಲ್ ಜಿಲ್ಲೆಯಲ್ಲೂ ಇದೇ ರೀತಿಯ ಪ್ರತಿಭಟನೆಗಳು ಭುಗಿಲೆದ್ದಿವೆ. ಡಿಜಿಪಿ ಮತ್ತು ರಾಜ್ಯದ ಭದ್ರತಾ ಸಲಹೆಗಾರರು ರಾಜೀನಾಮೆ ನೀಡಬೇಕು, ರಾಜ್ಯದಲ್ಲಿ ನಿಯೋಜನೆಗೊಂಡಿರುವ ಅಸ್ಸಾಂ ರೈಫಲ್ಸ್ ಮತ್ತು ಕೇಂದ್ರ ಪಡೆಗಳನ್ನು ಹಿಂಪಡೆಯಬೇಕೆಂದೂ ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
Advertisement
5 ದಿನ ಇಂಟರ್‌ನೆಟ್ ಸ್ಥಗಿತ ಸಿಆರ್‌ಪಿಎಫ್ ನ 2,000 ಸಿಬ್ಬಂದಿ ಮಣಿಪುರಕ್ಕೆ ದೌಡು:ಪ್ರತಿಭಟನೆಗಳು ಭುಗಿಲೇಳುತ್ತಿದ್ದಂತೆಯೇ ರಾಜ್ಯ ಸರ್ಕಾರವು ಮುಂದಿನ 5 ದಿನಗಳ ವರೆಗೆ ರಾಜ್ಯದ ಎಲ್ಲೆಡೆ ಅಂತರ್ಜಾಲ ಬಳಕೆ ಸ್ಥಗಿತಗೊಳಿಸಿದೆ. ಅಲ್ಲದೇ, ಕೇಂದ್ರ ಸರ್ಕಾರ ಕೂಡ ಪರಿಸ್ಥಿತಿ ಹತೋಟಿಗೆ ತರುವುದಕ್ಕಾಗಿ ಸಿಆರ್‌ಪಿಎಫ್ ಬೆಟಾಲಿಯನ್‌ನ 2,000 ಸಿಬ್ಬಂದಿಯನ್ನು ಮಣಿಪುರಕ್ಕೆ ರವಾನಿಸಿದೆ. ಮಣಿಪುರದಲ್ಲಿ ನಿಯೋಜನೆಗೊಂಡಿದ್ದ ಅಸ್ಸಾಂ ರೈಫಲ್‌ನ 2 ತುಕಡಿಯನ್ನು ಜಮ್ಮು-ಕಾಶ್ಮೀರ ಮತ್ತು ಈಶಾನ್ಯದ ಕೆಲವು ಭಾಗಗಳ ಕಾರ್ಯಾಚರಣೆಗೆಂದು ಕರೆಸಿಕೊಳ್ಳಲಾಗಿತ್ತು. ಈ ಹಿನ್ನೆಲೆಯಲ್ಲಿ ಮಣಿಪುರದ ಸದ್ಯದ ಉದ್ವಿಗ್ನ ಶಮನಕ್ಕಾಗಿ ಆರ್‌ಪಿಎಫ್ನ 2 ತುಕಡಿ ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.