Advertisement

ದಾಂಧಲೆ: ಆಸ್ತಿ ಮುಟ್ಟುಗೋಲು

09:45 AM Dec 24, 2019 | mahesh |

ಲಕ್ನೋ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆ ವೇಳೆ ಆಗಿದ್ದ ಸಾರ್ವಜನಿಕ ಆಸ್ತಿಪಾಸ್ತಿ ಹಾನಿಯ ನಷ್ಟವನ್ನು ದುಷ್ಕರ್ಮಿ ಗಳಿಂದಲೇ ಭರಿಸುವ ಮಹತ್ವದ ಕ್ರಮಕ್ಕೆ ಉತ್ತರಪ್ರದೇಶ ಸರಕಾರ ಮುಂದಾಗಿದೆ. ಮುಝಾಫ‌ರ್‌ನಗರದ ಗಲಭೆಯಲ್ಲಿ ಭಾಗಿ ಯಾಗಿದ್ದಾರೆನ್ನಲಾದ 50 ಮಂದಿ ವರ್ತಕರ ಅಂಗಡಿಗಳನ್ನು ಉತ್ತರ ಪ್ರದೇಶ ಸರಕಾರ ಮೊದಲ ಹಂತವಾಗಿ ವಶಪಡಿಸಿಕೊಂಡಿದೆ.

Advertisement

ರಾಂಪುರ ಜಿಲ್ಲಾಡಳಿತವು ಈಗಾಗಲೇ ದಾಂಧಲೆಯಲ್ಲಿ ತೊಡಗಿದ್ದ 25 ಮಂದಿಯನ್ನು ಗುರುತಿಸಿದ್ದು, ಅವರ ಆಸ್ತಿಪಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆ ಆರಂಭಿಸಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ, ಹಿಂಸಾಚಾರದಲ್ಲಿ ತೊಡಗಿದ್ದವರನ್ನು ಗುರುತಿಸ ಲಾಗು ತ್ತಿದೆ. ಅನಂತರ ಎಫ್ಐಆರ್‌ ದಾಖಲಿಸಿಕೊಂಡು ಅಂಥವರ ಆಸ್ತಿಗಳನ್ನು ಜಪ್ತಿ ಮಾಡುವ ಕೆಲಸ ಆರಂಭಿಸಲಿದ್ದೇವೆ ಎಂದು ರಾಂಪುರ ಜಿಲ್ಲಾಧಿಕಾರಿ ಆಂಜನೇಯ ಸಿಂಗ್‌ ತಿಳಿಸಿದ್ದಾರೆ. ಗೋರಖ್‌ಪುರ ಪೊಲೀಸರು ಕೂಡ ಸುಮಾರು 50 ಮಂದಿಯ ಫೋಟೋಗಳನ್ನು ಬಿಡುಗಡೆ ಮಾಡಿದ್ದಾರೆ. ಈ ನಡುವೆ ಸುಮಾರು 250 ಮಂದಿ ಪ್ರತಿಭಟನಕಾರರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ) ಅನ್ವಯ ಪ್ರಕರಣ ದಾಖಲಿಸಿಕೊಳ್ಳಲು ಪೊಲೀಸರು ಚಿಂತನೆ ನಡೆಸಿದ್ದಾರೆ.

ಪ್ರತಿಭಟನೆಯ ಹೆಸರಲ್ಲಿ ಆಸ್ತಿಪಾಸ್ತಿಗಳಿಗೆ ಹಾನಿ ಉಂಟು ಮಾಡುವವರನ್ನು ಸುಮ್ಮನೆ ಬಿಡುವುದಿಲ್ಲ ಹಾಗೂ ಅವರ ಆಸ್ತಿಪಾಸ್ತಿಗಳನ್ನೇ ಮುಟ್ಟುಗೋಲು ಹಾಕಿ ಕೊಳ್ಳ ಲಾಗುತ್ತದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಘೋಷಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಅದರಂತೆ ಲಕ್ನೋ ಜಿಲ್ಲಾಡಳಿತ ರವಿವಾರ ನಾಲ್ವರು ಸದಸ್ಯರ ಸಮಿತಿಯೊಂದನ್ನು ರಚಿಸಿದೆ.

ಸುಪ್ರೀಂ ತೀರ್ಪು
ಗಲಭೆಕೋರರಿಂದಲೇ ಸಾರ್ವಜನಿಕ ಆಸ್ತಿಗೆ ಉಂಟಾದ ನಷ್ಟ ಮತ್ತು ನೊಂದವರಿಗೆ ಪರಿಹಾರ ವಸೂಲು ಮಾಡುವ ಬಗ್ಗೆ 2018ರ ಅ.1ರಂದು ನೀಡಿದ್ದ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್‌ ಉಲ್ಲೇಖಿಸಿತ್ತು.

ಮೃತರ ಸಂಖ್ಯೆ 18ಕ್ಕೇರಿಕೆ
ಉತ್ತರಪ್ರದೇಶದಲ್ಲಿ ಹಿಂಸಾಚಾರಕ್ಕೆ ಬಲಿಯಾದವರ ಸಂಖ್ಯೆ ರವಿವಾರ 18ಕ್ಕೇರಿದೆ. ಮೃತರಲ್ಲಿ 8 ವರ್ಷದ ಬಾಲಕನೂ ಸೇರಿದ್ದಾನೆ. ಪ್ರತಿಭಟನೆ ವೇಳೆ ನಡೆದ ಹಿಂಸಾಕೃತ್ಯಗಳು, ದಾಂಧಲೆಗಳಿಗೆ ಸಂಬಂಧಿಸಿ 705 ಮಂದಿಯನ್ನು ಬಂಧಿಸಲಾಗಿದೆ. 5 ಸಾವಿರ ಮಂದಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next