Advertisement
ಮಹಿಳಾ ಸಬಲೀಕರಣಕ್ಕಾಗಿ ರಾಜ್ಯದಲ್ಲಿ ಸಾಕಷ್ಟು ಕಠಿಣ ಕ್ರಮ ಜಾರಿಗೆ ತಂದರೂ ಉದ್ಯೋಗ ಸ್ಥಳಗಳಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಕಡಿವಾಣ ಬಿದ್ದಿಲ್ಲ. ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ಗಾರ್ಮೆಂಟ್ಸ್ ಸೇರಿದಂತೆ ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಲೇ ಇವೆ. ರಾಜ್ಯಾದ್ಯಂತ 2020 ರಿಂದ 2022ವರೆಗೆ ಮಹಿಳೆಯರ ಮೇಲೆ ನಡೆದ ಬರೊಬ್ಬರಿ 12,960ಕ್ಕೂ ಅಧಿಕ ಪ್ರಕರಣಗಳು ವಿವಿಧ ಠಾಣೆ ಮೆಟ್ಟಿಲೇರಿದ್ದು, ಈ ಪೈಕಿ ಶೇ.50 ಕೇಸ್‌ಗಳು ತನಿಖಾ ಹಂತದಲ್ಲಿವೆ. ಶೇ.15 ಪ್ರಕರಣ ಕೋರ್ಟ್‌ನಲ್ಲಿ ವಿಚಾರಣಾ ಹಂತದಲ್ಲಿವೆ. ಖಾಸಗಿ ಕಂಪನಿ ಹಾಗೂ ಗಾರ್ಮೆಂಟ್ಸ್‌ಗಳಲ್ಲಿ ಮಹಿಳೆಯರ ಮೇಲೆ ಶೇ.40 ಲೈಂಗಿಕ ದೌರ್ಜನ್ಯ ನಡೆದರೆ, ಸರ್ಕಾರಿ ಇಲಾಖೆಗಳಲ್ಲಿ ಇದರ ಪ್ರಮಾಣ ಶೇ.30ರಷ್ಟಿದೆ. ಈ ಪೈಕಿ ಬೆಂಗಳೂರಿನದ್ದೇ ಹೆಚ್ಚು. ಐಟಿ-ಬಿಟಿ ಯಂತಹ ಪ್ರತಿಷ್ಠಿತ ಖಾಸಗಿ ಕಂಪನಿಗಳಲ್ಲಿ ಮೇಲಧಿಕಾರಿಗಳು ಕೆಳ ಹಂತದ ಮಹಿಳಾ ಸಿಬ್ಬಂದಿ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿರುವ ಪ್ರಮಾಣ ಹೆಚ್ಚಾಗಿದೆ.
Related Articles
Advertisement
ಕಾನೂನಿನಲ್ಲಿ ಏನು ಶಿಕ್ಷೆ ?: ಮಹಿಳೆಯನ್ನು ಅನುಚಿತವಾಗಿ ಸ್ಪರ್ಶಿ ಸುವ ಅಪರಾಧಕ್ಕೆ 1- 5 ವರ್ಷ ಜೈಲು ಮತ್ತು ದಂಡ, ಮಹಿಳೆಯ ಗಮನಕ್ಕೆ ಬಾರದಂತೆ ಆಕೆಯ ಚಿತ್ರವನ್ನು ನೋಡುವುದು, ತೆಗೆಯುವುದು ಹಾಗೂ ಹಂಚಿದರೆ ಮಾಹಿತಿ ತಂತ್ರಜ್ಞಾನ ಕಾಯ್ದೆ, 2000ರ ಅಡಿ 1 ರಿಂದ 7 ವರ್ಷ ಜೈಲು, ದಂಡ, ಮಹಿಳೆಯ ಗೌರವಕ್ಕೆ ಕುಂದು ತರುವಂತೆ ಪದಗಳ ಬಳಕೆ, ಹಾವಭಾವ ಪ್ರದರ್ಶನಕ್ಕೆ 3 ವರ್ಷ ಜೈಲು ಶಿಕ್ಷೆ ವಿಧಿಸಲು ಅವಕಾಶಗಳಿವೆ.
ಆಯೋಗದ ನೋಟಿಸ್‌ಗೂ ನಿರ್ಲಕ್ಷ್ಯ: ವಿಶಾಖಾ ಗೈಡ್‌ಲೈನ್ಸ್ ಪ್ರಕಾರ ಜಾರಿಗೆ ತರಲಾದ ಪಾಶ್(ಪಿಒಎಸ್‌ಎಚ್) 2013ರ ಅಧಿನಿಯಮದಡಿ ಯಾವುದೇ ಸರ್ಕಾರಿ, ಖಾಸಗಿ ಸಂಸ್ಥೆಯಲ್ಲಿ 10ಕ್ಕಿಂತ ಹೆಚ್ಚು ಸಿಬ್ಬಂದಿ ಕೆಲಸ ಮಾಡುತ್ತಿದ್ದರೆ ಕಡ್ಡಾಯವಾಗಿ ಆಂತರಿಕ ದೂರು ಸಮಿತಿ, ಸ್ಥಳೀಯ ದೂರು ಸಮಿತಿ ರಚಿಸಿ, ತಿಳಿವಳಿಕೆ ಶಿಬಿರ ನಡೆಸಬೇಕು. ಈ ಎಲ್ಲ ವರದಿಗಳನ್ನೂ ರಾಜ್ಯ ಮಹಿಳಾ ಆಯೋಗಕ್ಕೆ ಸಲ್ಲಿಸಬೇಕು ಎಂಬ ನಿಯಮಗಳಿವೆ. ರಾಜ್ಯದಲ್ಲಿರುವ 5,500 ಸಂಸ್ಥೆಗಳಿಗೆ ಈ ಬಗ್ಗೆ ವರದಿ ನೀಡುವಂತೆ ಮಹಿಳಾ ಆಯೋಗ ನೋಟಿಸ್ ಕೊಟ್ಟರೂ 1,114 ಖಾಸಗಿ ಸಂಸ್ಥೆಗಳು ಹಾಗೂ 389 ಸರ್ಕಾರಿ ಕಚೇರಿಗಳು ವರದಿ ಸಲ್ಲಿಸಿವೆ. ಉಳಿದ ಸಂಸ್ಥೆಗಳು ಇದನ್ನು ನಿರ್ಲಕ್ಷಿಸಿವೆ.
ದೂರು ನೀಡಲು ಸ್ತ್ರೀಯರು ಹಿಂದೇಟು : ಐಟಿ-ಬಿಟಿ ಕಂಪನಿಗಳು, ಐಶಾರಾಮಿ ಹೋಟೆಲ್‌ಗಳು, ಶಿಕ್ಷಣ, ವೈದ್ಯಕೀಯ, ಆಟೋ ಮೊಬೈಲ್ ಕ್ಷೇತ್ರದಲ್ಲಿರುವ ಬೃಹತ್ ಕಂಪನಿಗಳಲ್ಲಿ ಸಾಮಾನ್ಯವಾಗಿ ವಿದ್ಯಾವಂತರೇ ಕಾರ್ಯ ನಿರ್ವಹಿಸುವ ಹಿನ್ನೆಲೆಯಲ್ಲಿ ತಮ್ಮ ವಿರುದ್ಧ ದೌರ್ಜನ್ಯಗಳಾದರೆ ಕೆಲವೊಮ್ಮೆ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತರುತ್ತಾರೆ. ಆದರೆ, ಗಾರ್ಮೆಂಟ್ಸ್, ಕಟ್ಟಡ ಕೆಲಸ, ಸಣ್ಣ-ಪುಟ್ಟ ಹೋಟೆಲ್‌ಗಳು ಸೇರಿ ಇನ್ನಿತರ ಕಡೆಗಳಲ್ಲಿ ಕಾರ್ಯ ನಿರ್ವಹಿಸುವ ಮಹಿಳೆಯರು ಯಾರಿಗೆ ದೂರು ನೀಡಬೇಕು ಎಂಬ ಮಾಹಿತಿ ಕೊರತೆಯಿಂದ ದೂರಿಗೆ ಹಿಂದೇಟು ಹಾಕುತ್ತಿದ್ದಾರೆ.
ಮತ್ತೂಂದೆಡೆ ಬಡತನ, ನಿರುದ್ಯೋಗದ ಸಮಸ್ಯೆ, ಕೆಲಸ ಕಳೆದುಕೊಳ್ಳುವ ಭೀತಿಯಿಂದ ಯಾರ ಬಳಿಯೂ ಹೇಳಲಾಗದೆ ತಮ್ಮಲ್ಲೇ ಸಂಕಟಗಳನ್ನು ಹುದುಗಿಸಿಟ್ಟು ದೌರ್ಜನ್ಯ ಕ್ಕೊಳಗಾದರೂ ಏನೂ ಆಗಿಲ್ಲ ಎಂಬತೆ ಅನಿವಾರ್ಯವಾಗಿ ಕೆಲಸ ಮಾಡುತ್ತಾರೆ ಎಂದು ಮಹಿಳಾ ಆಯೋಗದ ಅಧಿಕಾರಿಯೊಬ್ಬರು ತಿಳಿಸಿದರು.
ಮಹಿಳಾ ಆಯೋಗದ ಮೆಟ್ಟಿಲೇರಿದ ಪ್ರಕರಣಗಳು :
ಕೇಸ್ ನಂ:1: ಐಟಿ ಕಂಪನಿಯೊಂದರ ಯುವತಿಯನ್ನು ಆಕೆಯ ಬಾಸ್ ತನ್ನ ಛೇಂಬರ್‌ಗೆ ಕರೆದು ಅಸಭ್ಯವಾಗಿ ಮಾತನಾಡುತ್ತಿದ್ದ. ಆತನನ್ನು ನಿರ್ಲಕ್ಷಿಸಿದ್ದಕ್ಕೆ ಯುವತಿ ಕೆಲಸದಲ್ಲಿ ತಪ್ಪು ಹುಡುಕಿ ಪರೋಕ್ಷವಾಗಿ ತೊಂದರೆ ಕೊಡುತ್ತಿದ್ದ. ನೊಂದ ಯುವತಿ ಮಹಿಳಾ ಆಯೋಗದ ಮೊರೆ ಹೋಗಿದ್ದಾಳೆ.
ಕೇಸ್ ನಂ: 2 : ಬೆಂಗಳೂರಿನ ಗಾರ್ಮೆಂಟ್ಸ್ ವೊಂದರಲ್ಲಿ ಹೊಸದಾಗಿ ಕೆಲಸಕ್ಕೆ ಸೇರಿದ ವಿವಾಹಿತ ಮಹಿಳೆಯ ಮೈ-ಕೈ ಮುಟ್ಟಿ ಅಲ್ಲಿನ ಸೂಪರ್‌ವೈಸರ್ ಕಿರುಕುಳ ಕೊಡುತ್ತಿದ್ದ. ದೈಹಿಕ ಸಂಪರ್ಕಕ್ಕೆ ಒತ್ತಾಯಿಸಿ ಸಹಕರಿಸದಿದ್ದರೆ ಕೆಲಸದಿಂದ ತೆಗೆದುಹಾಕುವುದಾಗಿ ಬೆದರಿಸಿದ್ದ. ನೊಂದ ಮಹಿಳೆ ಸ್ನೇಹಿತರ ಸಲಹೆ ಮೇರೆಗೆ ಆಯೋಗಕ್ಕೆ ದೂರು ಕೊಟ್ಟಿದ್ದಾಳೆ.
ಕೇಸ್ ನಂ: 3: ಸರ್ಕಾರದ ಇಲಾಖೆಯೊಂದರ ಅಧಿಕಾರಿ ತನ್ನ ಅಧೀನದಲ್ಲಿರುವ ಮಹಿಳಾ ಸಿಬ್ಬಂದಿಗೆ ಸುಂದರವಾಗಿರುವುದಾಗಿ ಹೇಳಿ ಆಗಾಗ ಕರೆ ಮಾಡಿ ಪರೋಕ್ಷವಾಗಿ ಲೈಂಗಿಕ ಕಿರುಕುಳ ಕೊಡುತ್ತಿದ್ದ. ಸಂತ್ರಸ್ತೆ ಮಹಿಳಾ ಆಯೋಗಕ್ಕೆ ಕೊಟ್ಟ ದೂರಿನ ಆಧಾರದ ಮೇರೆಗೆ ಅಧಿಕಾರಿಗೆ ಆಯೋಗ ಎಚ್ಚರಿಕೆ ಕೊಟ್ಟಿದೆ. ಕೇ
ಸ್ ನಂ: 4 : ಲ್ಯಾಬ್‌ನ ಟೆಕ್ನಿಷಿಯನ್‌ವೊಬ್ಬ ಸಹೋದ್ಯೋಗಿ ವಿವಾಹಿತ ಮಹಿಳೆಯ ಮೈ-ಕೈ ಮುಟ್ಟಿ ಅಸಭ್ಯವಾಗಿ ವರ್ತಿಸುತ್ತಿದ್ದ. ನೊಂದ ಮಹಿಳೆ ಮಹಿಳಾ ಆಯೋಗಕ್ಕೆ ದೂರು ಕೊಟ್ಟಿದ್ದಳು. ಆಯೋಗವು ಆರೋಪಿಯನ್ನು ಬೇರೆಡೆ ವರ್ಗಾವಣೆ ಮಾಡಿ ಕ್ರಮ ಕೈಗೊಂಡಿದೆ. ಮುಂದೆ ಇಂತಹ ಅಪರಾಧ ಎಸಗದಂತೆ ಎಚ್ಚರಿಕೆ ನೀಡಿದೆ.
ಕೇಸ್ ನಂ: 5: ಪ್ರತಿಷ್ಠಿತ ಕಂಪನಿಯಲ್ಲಿ ಉನ್ನತ ಹುದ್ದೆಯಲ್ಲಿದ್ದ ವಿವಾಹಿತ ಟೆಕಿಯೊಬ್ಬ ತನ್ನ ಕಚೇರಿಯಲ್ಲಿದ್ದ ಯುವತಿಗೆ ತನ್ನ ಜತೆ ಲಿವಿಂಗ್ ರಿಲೇಶನ್‌ಶಿಪ್‌ನಲ್ಲಿ ವಾಸಿಸುವಂತೆ ಒತ್ತಡ ಹಾಕುತ್ತಿದ್ದ. ಯುವತಿ ಆತನ ಜತೆಗೆ ವಾಸಿಸಲು ಹಿಂದೇಟು ಹಾಕಿದ್ದಕ್ಕೆ ಆತ ಆಕೆಯನ್ನು ಕೆಲಸದಿಂದ ತೆಗೆದು ಹಾಕುವುದಾಗಿ ಹೇಳಿದ್ದ. ಇದರಿಂದ ನೊಂದ ಯುವತಿ ಒಲ್ಲದ ಮನಸ್ಸಿನಿಂದ ತನ ಜತೆಗೆ ಲಿವಿಂಗ್ ರಿಲೇಶನ್‌ಶಿಪ್‌ನಲ್ಲಿ ಇದ್ದಳು. ಈ ವಿಚಾರ ಟೆಕಿಯ ಪತ್ನಿಯ ಗಮನಕ್ಕೆ ಬಂದು ಆಕೆ ಯುವತಿಯನ್ನು ತರಾಟೆಗೆ ತೆಗೆದುಕೊಂಡಿದ್ದಳು. ಸಾಲದಕ್ಕೆ ಮಹಿಳಾ ಆಯೋಗದ ಮೆಟ್ಟಿಲೇರಿ ನ್ಯಾಯ ಕೊಡಿಸುವಂತೆ ಮನವಿ ಮಾಡಿದ್ದಾಳೆ.
ಕೇಸ್ ನಂ: 6 : ಬೆಂಗಳೂರಿನ ಸರ್ಕಾರಿ ಇಲಾಖೆಯೊಂದರ ಕೆಎಎಸ್ ಅಧಿಕಾರಿ ತನ್ನ ಕಚೇರಿಯಲ್ಲಿರುವ ಮಹಿಳೆಯರಿಗೆ ಲೈಂಗಿಕ ಕಿರುಕುಳ ಕೊಡುತ್ತಿದ್ದ. ನೊಂದ ಮಹಿಳೆಯರು ಈ ವಿಚಾರವನ್ನು ಮಹಿಳಾ ಆಯೋಗದ ಗಮನಕ್ಕೆ ತಂದಿದ್ದರು. ಕೂಡಲೇ ಎಚ್ಚೆತ್ತುಕೊಂಡ ಆಯೋಗವು ಇಲಾಖೆಯ ಕಚೇರಿಗೆ ತೆರಳಿ ಅಧಿಕಾರಿಗೆ ಎಚ್ಚರಿಕೆ ನೀಡಿದೆ.
ಏನಿದು ಉದ್ಯೋಗ ಸ್ಥಳದ ಕಿರುಕುಳ ?:
- ಅನುಚಿತವಾದ ಲೈಂಗಿಕ ಉದ್ದೇಶದ ವರ್ತನೆ, ಉದ್ಯೋಗ ಸ್ಥಳಗಳಲ್ಲಿ ಮಹಿಳಾ ನೌಕರರಿಗೆ ಲೈಂಗಿಕ ಸಹಕಾರಗಳಿಗೆ ಬೇಡಿಕೆ.
- ದೈಹಿಕ ಸ್ಪರ್ಶ, ಲೈಂಗಿಕತೆಗೆ ಸಂಬಂಧಿಸಿದ ಹೇಳಿಕೆ, ಪ್ರಚೋದನೆ
- ಅಶ್ಲೀಲ ದೃಶ್ಯ ತೋರಿಸುವುದು, ಅಶ್ಲೀಲ ಚಿತ್ರ, 3 ಸಂದೇಶ ಕಳುಹಿಸಿ ಕಿರುಕುಳ ಕಚೇರಿಯಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾದ ಮಹಿಳೆಯರು ಧೈರ್ಯದಿಂದ ಮಹಿಳಾ ಆಯೋಗಕ್ಕೆ ದೂರು ನೀಡಿ.