Advertisement

ಚಿಕಿತ್ಸೆ ಪಡೆಯದ ಮನೋರೋಗಿಗಳಿಂದ ಮಾತ್ರ ಕುಕೃತ್ಯ ಸಾಧ್ಯ: ಡಾ|ಪಿ.ವಿ.ಭಂಡಾರಿ ಅಭಿಮತ

06:58 AM Jan 23, 2020 | mahesh |

ಉಡುಪಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬು ಇರಿಸಿದ್ದ ವ್ಯಕ್ತಿ ಮಾನಸಿಕ ಅಸ್ವಸ್ಥ ಎಂಬ ಸುದ್ದಿ ಎಲ್ಲೆಡೆ ಬಿತ್ತರಗೊಳ್ಳುತ್ತಿದೆ. ಇಂತಹ ಕೃತ್ಯಗಳನ್ನು ಎಸಗುವವರು ಒಂದೋ ಉದ್ದೇಶಪೂರ್ವಕವಾಗಿ ಮಾಡಿರಬೇಕು ಇಲ್ಲವೆ ಮಾನಸಿಕ ಸ್ತಿಮಿತವನ್ನು ಕಳೆದು ಕೊಂಡಿರಬೇಕು. ಉದ್ದೇಶ ಪೂರ್ವಕವಾಗಿ ಮಾಡುವವರನ್ನು ಉಗ್ರಗಾಮಿಗಳು, ವಿಘ್ನ ಸಂತೋಷಿಗಳು, ಕಿಡಿಗೇಡಿಗಳು ಎನ್ನುತ್ತೇವೆ. ಮೂರನೆಯ ವರ್ಗವಿಲ್ಲ. ಮಂಗಳೂರಿನ ಪ್ರಕರಣದಲ್ಲಿ ಮಾನಸಿಕ ಅಸ್ವಸ್ಥ ಎಂಬ ಸುದ್ದಿಯೇ ಪ್ರಮುಖ ಸ್ಥಾನ ಪಡೆಯುತ್ತಿದೆ. ಈ ಬಗ್ಗೆ ಹಾಗೂ ಇಂಥ ಸಂದರ್ಭದಲ್ಲಿ ಸಮಾಜವೂ ಸೂಕ್ಷ್ಮ ಸಂವೇದನೆಯಿಂದ ವರ್ತಿಸಬೇಕೆಂಬುದರ ಕುರಿತು ಮನಃಶಾಸ್ತ್ರಜ್ಞ ಡಾ|ಪಿ.ವಿ.ಭಂಡಾರಿಯವರು “ಉದಯವಾಣಿ’ಗೆ ನೀಡಿದ ಸಂದರ್ಶನದಲ್ಲಿ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

Advertisement

 ಬಾಂಬು ಪ್ರಕರಣದ ಆರೋಪಿ ಮಾನಸಿಕ ಅಸ್ವಸ್ಥ ಎಂದು ಪ್ರಚಾರ ನಡೆಯುತ್ತಿದೆ. ಅಸ್ವಸ್ಥರು ಹೀಗೆ ಮಾಡುವ ಸಾಧ್ಯತೆ ಇದೆಯೆ?
ಹೀಗೆ ಪ್ರಚಾರ ನಡೆಯುತ್ತಿದೆ. ಮಾನಸಿಕ ಕಾಯಿಲೆ ಇದ್ದು ಚಿಕಿತ್ಸೆ ಪಡೆಯದೆ ಇದ್ದವರು ಮಾತ್ರ ಹೀಗೆ ಮಾಡಬಹುದೆ ವಿನಾ ಅದು ಖಚಿತಗೊಳಿಸಿಕೊಳ್ಳದೇ ನೇರವಾಗಿ ಮಾನಸಿಕ ಅಸ್ವಸ್ಥರು ಎಂದು ಘೋಷಿಸುವುದು ಸರಿಯಲ್ಲ. ಮಾನಸಿಕ ಕಾಯಿಲೆ ಇದ್ದು ಅವರಿಗೆ ಅ ಕುರಿತು ಗೊತ್ತಿಲ್ಲದಿದ್ದರೆ ಅಥವ ಬೇರೆ ಕಾರಣಗಳಿಂದ ಚಿಕಿತ್ಸೆ ಪಡೆಯದೆ ಇದ್ದಾಗ ಹೀಗೆ ಮಾಡಬಹುದು. ಇಲ್ಲವಾದರೆ ಮಾನಸಿಕ ರೋಗಿಗಳೆಲ್ಲ ಇಂತಹ ಕೃತ್ಯಗಳನ್ನು ಎಸಗುತ್ತಾರೆಂಬ ತಪ್ಪು ತಿಳಿವಳಿಕೆ ಸಮಾಜದಲ್ಲಿ ಉಂಟಾಗುತ್ತದೆ. ಈ ಬಗ್ಗೆ ಎಲ್ಲರೂ ಎಚ್ಚರವಹಿಸಬೇಕು.

 ಸಂಶಯಿತ ವ್ಯಕ್ತಿ ಉನ್ನತ ಶಿಕ್ಷಣ ಪಡೆದವ ಎಂದು ಹೇಳಲಾಗುತ್ತಿದೆ. ಇದು ಶಿಕ್ಷಿತರು, ಅಶಿಕ್ಷಿತರಿಬ್ಬರಿಗೂ ಅನ್ವಯವೆ?
ಮಾನಸಿಕ ಕಾಯಿಲೆ ಶಿಕ್ಷಿತರಿಗೂ ಬರಬಹುದು, ಅಶಿಕ್ಷಿತರಿಗೂ ಬರಬಹುದು. ಯಾವುದೇ ಒಂದು ಪ್ರಕರಣ ನಡೆದಾಗ ಸಂಶಯಿತ ಆರೋಪಿಯ ಸಮಸ್ಯೆಗಳೇನು? ಅವರ ಹಿಂದಿನ ಜೀವನ ಚರಿತ್ರೆ ಏನು? ಕುಟುಂಬದ ಇತಿಹಾಸವೇನು ಎಂಬಿತ್ಯಾದಿ ಮಾಹಿತಿಗಳನ್ನು ಕಲೆ ಹಾಕಬೇಕಾಗುತ್ತದೆ. ಆಮೇಲೆ ಒಂದು ತೀರ್ಮಾನಕ್ಕೆ ಬರಬೇಕು.

 ಉನ್ನತ ಶಿಕ್ಷಣ ಪಡೆದೂ ಅದಕ್ಕೆ ತಕ್ಕುದಲ್ಲದ ಕೆಲಸಕ್ಕೆ ಸೇರುವ ಪ್ರವೃತ್ತಿ ಏಕೆ ಉಂಟಾಗುತ್ತದೆ?
ಎಂಜಿನಿಯರಿಂಗ್‌ ಕಲಿತವ ಸೆಕ್ಯುರಿಟಿ ಗಾರ್ಡ್‌ ಆಗಿದ್ದನೆಂದು ವರದಿಯನ್ನು ಓದಿದ್ದೇನೆ. ಇದನ್ನು ಸೋಶಿಯಲ್‌ ಶಿಫ್ಟ್ ಅಥವಾ ಗ್ರಿಫ್ಟ್ ಎನ್ನುತ್ತೇವೆ. ಎಷ್ಟೋ ಕಡೆ ಇಂತಹ ಉದಾಹರಣೆಗಳು ಕಂಡುಬರುತ್ತವೆ. ಮಾನಸಿಕ ಕಾಯಿಲೆಯೇ ಇದಕ್ಕೆ ಕಾರಣ. ಇದರಿಂದ ಆತನಿಗೆ ಶೈಕ್ಷಣಿಕ ಮಟ್ಟಕ್ಕೆ ಸರಿಯಾದ ಉದ್ಯೋಗ (ಸಾಮಾಜಿಕ / ಆರ್ಥಿಕ) ಲಭಿಸಿರುವುದಿಲ್ಲ. ಇವನ ಬುದ್ಧಿಶಕ್ತಿ ಕಡಿಮೆಯಾಗಿಯೋ, ಹಣಕಾಸು ಸಮಸ್ಯೆಯಿಂದಲೋ ಹೀಗೆ ಮಾಡಿರಲೂ ಬಹುದು.

 ಮಾನಸಿಕ ಅಸ್ವಸ್ಥನೆಂದು ಪ್ರಚಾರ ಮಾಡುವುದು ಸರಿಯೇ?
ಅಪರಾಧ ಪ್ರಕರಣಗಳಲ್ಲಿ ಮಾಧ್ಯಮ ದವರ ಹೊಣೆ ದೊಡ್ಡದಿದೆ. ಹೀಗೆ ಹೇಳುವುದು ಮಾನವ ಹಕ್ಕುಗಳ ಉಲ್ಲಂಘನೆಯೂ ಹೌದು. ಊಹಾಪೋಹಗಳನ್ನು ಹರಿಬಿಡುವುದು ಜಾಸ್ತಿಯಾಗುತ್ತಿದೆ. “ಮಾನಸಿಕ ಅಸ್ವಸ್ಥನಿರ ಬಹುದೆ?’ ಎಂದು ಬರೆಯಬಹುದು. ತಂದೆ ತಾಯಿಗಳು, ಅಣ್ಣ ತಮ್ಮಂದಿರನ್ನು ಅನಗತ್ಯವಾಗಿ ಎಳೆದು ತರುವುದು ಸರಿಯಲ್ಲ. ಅವರ ಸಮಸ್ಯೆಗಳು ನಮಗೆ ಗೊತ್ತಿಲ್ಲ. ಅವರು ನಾಳೆ ಇದೇ ಸಮಾಜದಲ್ಲಿ ಬದುಕುವುದು ಬೇಡವೆ? ಅವರೆಲ್ಲರನ್ನೂ ಟಾರ್ಗೆಟ್‌ ಮಾಡಿದಂತಾಗುತ್ತದೆ. ಅವರೂ ಆವರ ಮಾಡದ ತಪ್ಪಿಗೆ ಖನ್ನತೆ ಒಳಗಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ನಾವು ನೇತ್ಯಾತ್ಮಕವಾಗಿ ಪ್ರಚಾರ ಮಾಡುವುದನ್ನು ನಿಲ್ಲಿಸಬೇಕು. ಬಾಲಿವುಡ್‌ ಸಿನೆಮಾಗಳಲ್ಲಿ ಒಬ್ಬ ಹುಚ್ಚನಿಂದ ಶೂಟ್‌ ಮಾಡಿಸುವುದು,
ಮಾನಸಿಕ ಅಸ್ವಸ್ಥನೆಂದು ತೋರಿಸಿದರೆ ಶಿಕ್ಷೆ ಪ್ರಮಾಣ ಕಡಿಮೆಯಾಗುತ್ತದೆ ಅಂತ ತೋರಿಸುವುದೂ ಇದೆ. ಇಂಥವೂ ಸರಿಯಲ್ಲ.

Advertisement

ಇವನ ಸಮಸ್ಯೆ ಏನಿರಬಹುದು?
ಯಾರೋ ತನಗೆ ತೊಂದರೆ ಕೊಡು ತ್ತಿದ್ದಾರೆ ಎಂಬ ಸಂಶಯ ಪ್ರವೃತ್ತಿ ಹೆದರಿಕೆ ಯನ್ನು ಉಂಟು ಮಾಡುತ್ತದೆ. ಇದನ್ನು ಪ್ಯಾರನಾಯ್ಡ ಇಲ್‌ನೆಸ್‌ ಎನ್ನುತ್ತೇವೆ. ಈ ಆರೋಪಿಯಲ್ಲಿ ಉದ್ಯೋಗದ ಸಮಸ್ಯೆ ಕಾಣುತ್ತದೆ ಅಥವಾ ಉದ್ಯೋಗವನ್ನು ಆಗಾಗ್ಗೆ ಬದಲಾಯಿಸುವುದು ಕಂಡುಬರುತ್ತದೆ. ವಾಸ್ತವ ಲೋಕದಲ್ಲಿ ಇರದೆ ತಪ್ಪು ಭಾವಿಸಿಕೊಳ್ಳುವ ಇಚ್ಛಿತ ಚಿತ್ತ ವಿಕಲ ರೋಗ (ಸ್ಕಿಜೋ ಫ್ರೆನಿಯ), ಮೇನಿಯ (ವಾಸ್ತವಕ್ಕೆ ದೂರವಾದ ದೊಡ್ಡ ದೊಡ್ಡ ಕಲ್ಪನೆಗಳನ್ನು ಹರಿಬಿಡು ವುದು), ಮದ್ಯ-ಗಾಂಜಾ ಇತ್ಯಾದಿಗಳ ಸೇವನೆ, ಯಾವುದೋ ಸಂದರ್ಭ ತಲೆಗೆ ಪೆಟ್ಟಾಗಿ ಮಿದುಳಿನ ಲಲಾಟ ಭಾಗಕ್ಕೆ ತೊಂದರೆಯಾಗಿರುವುದು, ಫಿಟ್ಸ್‌, ಜನ್ಮದಾರಭ್ಯದಿಂದ ಬಂದ ವ್ಯಕ್ತಿತ್ವ ದೋಷ (ಚಿಕ್ಕಪುಟ್ಟ ವಿಷಯಕ್ಕೆ ಭಾರೀ ಜಗಳ ಮಾಡುವವರು) ಇತ್ಯಾದಿಗಳು ಕುಕೃತ್ಯಗಳಿಗೆ ಕಾರಣವಾಗಬಹುದು. ಇವರಿಗೆ ನಿಜ ಮತ್ತು ಕಲ್ಪನೆಯ ವ್ಯತ್ಯಾಸ ತಿಳಿಯದು. ಇವರಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡಬೇಕು. ಚಿಕಿತ್ಸೆ ಪಡೆದುಕೊಂಡಾಗ ಆತನಿಂದಾಗುವ ಕುಕೃತ್ಯಗಳ ನಡವಳಿಕೆ ಕಡಿಮೆಯಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next