Advertisement

ಹಿರಿಯ ಜೀವಗಳ ಮೇಲಿನ ದೌರ್ಜನ್ಯಕ್ಕೆ ಬಿದ್ದಿಲ್ಲ ಕಡಿವಾಣ

10:50 AM May 13, 2020 | mahesh |

ಉಡುಪಿ: ಹಿರಿಯ ನಾಗರಿಕರ ಪರ ಕಾನೂನು ಇದ್ದರೂ ಅವರ ಮೇಲಾಗುತ್ತಿರುವ ದೌರ್ಜನ್ಯ ಪ್ರಕರಣಗಳಿಗೆ ಇನ್ನೂ ಕಡಿವಾಣ ಬಿದ್ದಿಲ್ಲ. ಉಡುಪಿ ನಗರದ ಸಹಾಯವಾಣಿ 1090ಕ್ಕೆ ನಿತ್ಯ 15ರಿಂದ 20ಕ್ಕೂ ಅಧಿಕ ಕರೆಗಳು ಬರುತ್ತಿದ್ದು, ಅದರಲ್ಲಿ ಶೇ 60ರಿಂದ 70ರಷ್ಟು ಕರೆಗಳು ನಗರ ಪ್ರದೇಶದ ಹಿರಿಯ ನಾಗರಿಕರಿಗೆ ಸೇರಿದ್ದಾಗಿವೆ ಎನ್ನುವುದು ಆತಂಕ ತರುವ ಸಂಗತಿಯಾಗಿದೆ. ಮಾ. 10ರ ವರೆಗೆ 133 ಪ್ರಕರಣಗಳು ದಾಖಲಾಗಿವೆ. 109 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಕಳೆದ ವರ್ಷ 129 ದೂರುಗಳು ದಾಖಲಾಗಿದ್ದವು, ಈ ಪೈಕಿ ಹೆಚ್ಚಾಗಿ ಆಸ್ತಿ, ಕೌಟುಂಬಿಕ ಜಗಳ ಮತ್ತು ಮಕ್ಕಳಿಂದ, ಸೊಸೆಯಿಂದ‌ ಮಾನಸಿಕ -ದೈಹಿಕ ತೊಂದರೆ ಅನುಭವಿಸುತ್ತಿರುವ ಬಗೆಗಿನ ದೂರುಗಳೇ ಹೆಚ್ಚಾಗಿವೆ. ಕಳೆದ ವರ್ಷಕ್ಕಿಂತ ಈ ಬಾರಿ ಕರೆಗಳ ಸಂಖ್ಯೆಯಲ್ಲಿ ಕಡಿಮೆಯಾಗಿಲ್ಲ. ಕೇಂದ್ರದಲ್ಲಿ 5 ವರ್ಷಗಳಲ್ಲಿ 9,500ಕ್ಕೂ ಹೆಚ್ಚಿನ ದೂರುಗಳನ್ನು ಸ್ವೀಕರಿಸಲಾಗಿದೆ. ಸಲಹೆಗಳನ್ನು ನೀಡುವ ಮೂಲಕವೂ ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದೆ.

Advertisement

ಹಿರಿಯರಿಗೆ ಕಾಯ್ದೆ ಬಲ
ಹಿರಿಯ ನಾಗರಿಕರ ಮತ್ತು ಪಾಲಕರ ರಕ್ಷಣಾ ಕಾಯ್ದೆ 2007ರಲ್ಲಿ ಜಾರಿಗೆ ಬಂದಿತ್ತು. ಸಹಾಯಕ ಉಪವಿಭಾಗಾಧಿಕಾರಿಗಳು ವಿಚಾರಣೆ ನಡೆಸಿ ಪರಿಹಾರ ನೀಡಲು ಅಧಿಕಾರ ಹೊಂದಿದ್ದಾರೆ. ಮಕ್ಕಳು ತಂದೆ-ತಾಯಿಗೆ ಕನಿಷ್ಠ 10 ಸಾವಿರ ರೂ. ಜೀವನಾಂಶ ಕೊಡಬೇಕಿದ್ದು, ತಪ್ಪಿದರೆ 3 ತಿಂಗಳು ಜೈಲು ಶಿಕ್ಷೆಯನ್ನೂ ವಿಧಿಸಬಹುದಾಗಿದೆ. ಒಂದು ವೇಳೆ ಆಸ್ತಿಯನ್ನು ಮಕ್ಕಳು ಮಾರಾಟ ಮಾಡಿದ್ದರೆ ನೋಂದಣಿ ರದ್ದಾಗುವ ಸಂದರ್ಭದಲ್ಲಿ ಖರೀದಿದಾರನಿಗೆ ಮಕ್ಕಳೇ ಹಣವನ್ನು ವಾಪಸ್‌ ನೀಡಬೇಕಾಗುತ್ತದೆ.

ಸಹಾಯವಾಣಿ ಕಾರ್ಯವೈಖರಿ
ಅಶಕ್ತ, ಅಸಹಾಯಕ ವೃದ್ಧರು ಸಹಾಯವಾಣಿ ಕೇಂದ್ರಕ್ಕೆ ದೂರು ಸಲ್ಲಿಸಿ ನೆರವು ಪಡೆಯಬಹುದು. ದೂರು ಸಲ್ಲಿಕೆಯಾದ ತತ್‌ಕ್ಷಣದಲ್ಲಿ ಸಂಬಂಧಪಟ್ಟವರಿಗೆ ನೋಟಿಸ್‌ ನೀಡಿ ವಿಚಾರಣೆ ಮತ್ತು ಕೌನ್ಸೆಲಿಂಗ್‌ ನಡೆಸಲಾಗುತ್ತದೆ. ಇಲ್ಲಿ ಸಮಸ್ಯೆ ಬಗೆ ಹರಿಯದಿದ್ದಲ್ಲಿ ದೂರುಗಳನ್ನು ದಾಖಲಿಸಿಕೊಂಡು ಸಂಬಂಧಪಟ್ಟ ಇಲಾಖೆಗೆ ರವಾನಿಸಿ ಕ್ರಮಕ್ಕೆ ಸೂಚಿಸಲಾಗುತ್ತದೆ.

ಸರಿಯಾದ ಮಾಹಿತಿ ಸಿಗುತ್ತಿಲ್ಲ
ಹಿರಿಯ ನಾಗರಿಕರ ನೆರವಿಗೆ ಕಾಯ್ದೆ ಬಂದಿದ್ದರೂ ನಾಗರಿಕರಿಗೆ ಸರಿಯಾದ ಮಾಹಿತಿ ಹಾಗೂ ಪ್ರಚಾರದ ಕೊರತೆಯಿಂದ ಈ ಕಾಯ್ದೆ ಸಮರ್ಪಕವಾಗಿ ಬಳಕೆಯಾಗುತಿಲ್ಲ. ಹಿರಿಯರ ಮೇಲಿನ ದೌರ್ಜನ್ಯ ವಿರುದ್ಧ ಜಾಗೃತಿಗಳು ಹೆಚ್ಚಬೇಕು ಅನ್ನುವ ಅಭಿಪ್ರಾಯವನ್ನು ಮಾನವ ಹಕ್ಕುಗಳ ರಕ್ಷಣಾ ಕಾರ್ಯಕರ್ತರು ವ್ಯಕ್ತಪಡಿಸುತ್ತಾರೆ. ಹಿರಿಯ ನಾಗರಿಕರಿಗೆಂದು ಹಲವು ಯೋಜನೆಗಳು ಇದ್ದು, ಅದರಿಂದ ಹಿರಿಯ ಕೆಲವರು ವಂಚಿತರಾಗುತ್ತಿದ್ದಾರೆ.

ಮೊಬೈಲ್‌ ಗೀಳು; ಹಿರಿಯರ ಗೋಳು!
ಸಾಮಾಜಿಕ ಜಾಲ ತಾಣಗಳು ಕುಟುಂಬ ಸದಸ್ಯರ ಸಮಯವನ್ನು ಕಸಿದುಕೊಳ್ಳುತ್ತಿವೆೆ. ಮಕ್ಕಳು, ಸೊಸೆಯಂದಿರು ಮನೆಯಲ್ಲೇ ಇದ್ದರೂ ಮೊಬೈಲ್‌ನಲ್ಲೇ ಕಾಲ ಕಳೆಯುತ್ತಾರೆ. ಹಿರಿಯರತ್ತ ಗಮನ ನೀಡುವುದಿಲ್ಲ ಎಂದು ಹೆಲ್ತ್‌ ಕೇರ್‌ ನಡೆಸಿದ ಅಧ್ಯಯನವೊಂದರಿಂದ ತಿಳಿದು ಬರುತ್ತದೆ. ಹಿರಿಯರ ದೌರ್ಜನ್ಯಕ್ಕೆ ಮಗ, ಸೊಸೆ ಹೆಚ್ಚು ಕಾರಣರಾಗುತ್ತಿರುವ ಬಗ್ಗೆಯೂ ಅಧ್ಯಯನಗಳು ಹೇಳುತ್ತಿವೆ.

Advertisement

ಸಾಕಷ್ಟು ದೂರುಗಳು
ಹಿರಿಯರಿಂದ ಸಾಕಷ್ಟು ದೂರುಗಳು ಬರುತ್ತಲೇ ಇವೆ. ಕೆಲವೊಂದನ್ನು ಸಲಹೆ ರೂಪದಲ್ಲಿ ಇತ್ಯರ್ಥ ಪಡಿಸುತ್ತಿದ್ದೇವೆ. ಕಳೆದ ವರ್ಷಕ್ಕಿಂತ ದೂರುಗಳ ಪ್ರಮಾಣ ಕಡಿಮೆಯಾಗಿಲ್ಲ.
– ಚಂದ್ರ ನಾಯ್ಕ , ಅಂಗವಿಕಲರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next