Advertisement

ಮಕ್ಕಳ ಮೇಲಿನ ದೌರ್ಜನ್ಯ ಘನಘೋರ ಅಪರಾಧ

12:58 PM Jul 21, 2019 | Suhan S |

ಕೊಪ್ಪಳ: ಮಕ್ಕಳ ಪಾಲನಾ ಕೇಂದ್ರಗಳು ಮಕ್ಕಳ ನ್ಯಾಯ (ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾಯ್ದೆ-2015ಯಡಿ ನಿರೂಪಿತವಾದ ಸೇವೆಗಳನ್ನು ಮಕ್ಕಳಿಗೆ ಒದಗಿಸಿಕೊಡಬೇಕು ಎಂದು ಹಿರಿಯ ಸಿವ್ಹಿಲ್ ನ್ಯಾಯಾಧೀಶರಾದ ಟಿ. ಶ್ರೀನಿವಾಸ್‌ ಹೇಳಿದರು.

Advertisement

ಜಿಲ್ಲಾಡಳಿತ ಸೇರಿ ವಿವಿಧ ಇಲಾಖೆಗಳ ಆಶ್ರಯದಲ್ಲಿ ನಗರದ ಕೃಷಿ ವಿಸ್ತರಣಾ ತರಬೇತಿ ಕೇಂದ್ರದಲ್ಲಿ ನಡೆದ ಮಕ್ಕಳ ಪ್ರಕರಣಗಳ ನಿರ್ವಹಣೆ ಕುರಿತ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳ ನ್ಯಾಯ (ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾಯ್ದೆ-2015ರ ಉದ್ದೇಶವೇನೆಂದರೆ, ಕಾನೂನಿನೊಡನೆ ಸಂಘರ್ಷದಲ್ಲಿರುವ ಮಕ್ಕಳ ಹಾಗೂ ಪೋಷಣೆ, ರಕ್ಷಣೆ ಅವಶ್ಯವಿರುವ ಮಕ್ಕಳಿಗೆ ಪುನರ್‌ ವಸತಿ ಕಲ್ಪಿಸಿ, ಅವರ ಹಕ್ಕುಗಳನ್ನು ಎತ್ತಿಹಿಡಿದು, ಘನತೆ ಮತ್ತು ಗೌರವವನ್ನು ಒದಗಿಸಿ, ಕುಟುಂಬದೊಂದಿಗೆ ಪುನರ್‌ ಸ್ಥಾಪಿಸುವುದಾಗಿದೆ. ಪಾಲನಾ ಸಂಸ್ಥೆಗಳ ನಿವಾಸಿ ಮಕ್ಕಳಿಗೆ ಈ ಕಾಯ್ದೆಯಡಿ ನಿರೂಪಿತವಾದ ಕನಿಷ್ಟ ಗುಣಮಟ್ಟದ ಸೇವೆಗಳನ್ನು ಮಕ್ಕಳ ಪಾಲನಾ ಕೇಂದ್ರಗಳಲ್ಲಿ ಖಾತರಿಪಡಿಸುವುದು ಕಡ್ಡಾಯವಾಗಿದ್ದು, ಅದನ್ನು ಸರಕಾರಗಳು ಖಾತರಿಪಡಿಸುವುದು ಅವಶ್ಯವೆಂದು ಸುಪ್ರೀಂ ಕೋರ್ಟ್‌ ಪ್ರಕರಣವೊಂದರಲ್ಲಿ ನಿರ್ದೇಶನ ನೀಡಿದೆ. ಮಕ್ಕಳ ಪಾಲನಾ ಕೇಂದ್ರಗಳು ಈ ಕಾಯ್ದೆಯಡಿ ಸೇವೆಗಳನ್ನು ಮಕ್ಕಳಿಗೆ ಒದಗಿಸಿಕೊಡುವುದರಲ್ಲಿ ವಿಫಲವಾದರೆ ಅಂತಹ ಕೇಂದ್ರಗಳ ನೋಂದಣಿ ರದ್ದತಿಗೂ ಅವಕಾಶವಿದೆ ಎಂದರು.

ಮಕ್ಕಳಿಗೆ ಯಾವುದೇ ರೀತಿಯ ಕಿರುಕುಳ, ಹಲ್ಲೆ ಅಥವಾ ದೌರ್ಜನ್ಯ ಎಸಗಿದರೆ ಅದನ್ನು ಅತೀ ಘೋರ ಅಫರಾದವೆಂದು ಪರಿಗಣಿಸಿ ಹೆಚ್ಚಿನ ಶಿಕ್ಷೆಯನ್ನು ನೀಡಲಾಗುತ್ತಿದೆ. ಆದ್ದರಿಂದ ಮಕ್ಕಳ ಪಾಲನಾ ಕೇಂದ್ರಗಳು ಬಹು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು. ಈ ಕಾರ್ಯಾಗಾರದಲ್ಲಿ ಪಡೆದುಕೊಂಡ ಪಾಲನಾ ಸಂಸ್ಥೆಗಳು ದಾಖಲಾಗಿರುವ ಮಕ್ಕಳ ಪ್ರಕರಣಗಳನ್ನು ಸರ್ಮಪಕವಾಗಿ ನಿರ್ವಹಿಸಿ ಮಕ್ಕಳ ಹಕ್ಕುಗಳನ್ನು ಸಂರಕ್ಷಣೆ ಮಾಡಬೇಕೆಂದು ಸೂಚನೆ ನೀಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಈರಣ್ಣ ಪಾಂಚಾಳ ಮಾತನಾಡಿದರು. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ವಿರೇಂದ್ರ ನಾವದಗಿ, ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ರಾಘವೇಂದ್ರ ಭಟ್, ರವಿಕುಮಾರ ಪವಾರ, ಹರೀಶ ಜೋಗಿ, ವಿಜಯ ಕುಮಾರ ಸೇರಿದಂತೆ ಜಿಲ್ಲೆಯಲ್ಲಿ ನೋಂದಾಯಿತ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಅಧಿಕಾರಿಗಳು ಮತ್ತು ಜಿಲ್ಲಾ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next